ವಾರ್ನರ್ ದಂಪತಿ ಬುಟ್ಟ ಬೊಮ್ಮ ಸ್ಟೆಪ್! ಟಾಲಿವುಡ್​ ನಟ ಅಲ್ಲು ಅರ್ಜುನ್​ ಕ್ಲೀನ್​ ಬೌಲ್ಡ್​

page 10 3
Published on

ನವದೆಹಲಿ: ಐಪಿಎಲ್​ನಲ್ಲಿ ಬೌಂಡರಿ-ಸಿಕ್ಸರ್​ಗಳನ್ನು ಸಿಡಿಸುತ್ತ ಸ್ಪೋಟಕ ಬ್ಯಾಟಿಂಗ್ ಮೂಲಕ ಸನ್​ರೈಸರ್ಸ್ ಹೈದರಾಬಾದ್ ತಂಡದ ಅಭಿಮಾನಿ ಗಳನ್ನು ರಂಜಿಸುತ್ತಿದ್ದ ಆಸ್ಟ್ರೇಲಿಯಾದ ಬ್ಯಾಟ್ಸ್​ಮನ್ ಡೇವಿಡ್ ವಾರ್ನರ್ ಲಾಕ್​ಡೌನ್ ನಡುವೆ ಹೊಸ ರೀತಿಯಲ್ಲಿ ಅಭಿಮಾನಿಗಳ ಮನಗೆದ್ದಿದ್ದಾರೆ. ಸನ್​ರೈಸರ್ಸ್ ನಾಯಕರೂ ಆಗಿರುವ ವಾರ್ನರ್ ಮತ್ತು ಪತ್ನಿ ಕ್ಯಾಂಡಿಸ್, ಟಾಲಿವುಡ್ ನಟ ಅಲ್ಲು ಅರ್ಜುನ್​ರ ಇತ್ತೀಚೆಗಿನ ಯಶಸ್ವಿ ತೆಲುಗು ಸಿನಿಮಾ ‘ಅಲಾ ವೈಕುಂಠಪುರಮುಲು’ನ ಜನಪ್ರಿಯ ‘ಬುಟ್ಟ ಬೊಮ್ಮ’ (ಪುಟ್ಟ ಬೊಂಬೆ) ಹಾಡಿಗೆ ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದಿದ್ದಾರೆ.

ಸನ್​ರೈಸರ್ಸ್ ತಂಡದ ಜೆರ್ಸಿಯಲ್ಲಿ ಹಾಡಿನ ಸಿಗ್ನೇಚರ್ ಸ್ಟೆಪ್ಸ್​ಗಳನ್ನೇ ಹಾಕಿರುವ ವಾರ್ನರ್​ಗೆ ಪತ್ನಿ ಕ್ಯಾಂಡಿಸ್ ಕೂಡ ಸಮರ್ಥವಾಗಿ ಸಾಥ್ ನೀಡಿದ್ದಾರೆ. ವಾರ್ನರ್ ಇನ್​ಸ್ಟಾಗ್ರಾಂನಲ್ಲಿ ಹಾಕಿರುವ ವಿಡಿಯೋ ವೈರಲ್ ಆಗಿದ್ದು, ಸ್ವತಃ ಅಲ್ಲು ಅರ್ಜುನ್, ‘ಥ್ಯಾಂಕ್ ಯೂ’ ಎಂದು ಕಮೆಂಟ್ ಹಾಕಿದ್ದಾರೆ.

ಸಿನಿಮಾ ಹಾಡಿನಲ್ಲಿ ಅಲ್ಲು ಅರ್ಜುನ್, ಕನ್ನಡತಿ ಪೂಜಾ ಹೆಗ್ಡೆ ಜತೆಗೆ ನರ್ತಿಸಿದ್ದಾರೆ. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕೂಡ ಇತ್ತೀಚೆಗೆ ಇದೇ ಹಾಡಿನ ಸಿಗ್ನೇಚರ್ ಸ್ಟೆಪ್​ನೊಂದಿಗೆ ಟಿಕ್​ಟಾಕ್​ನಲ್ಲಿ ಹಾಕಿದ್ದ ವಿಡಿಯೋ ಲಕ್ಷಾಂತರ ಜನರ ಗಮನ ಸೆಳೆದಿತ್ತು. ಕೆಲದಿನಗಳ ಹಿಂದೆ ವಾರ್ನರ್ ಪುತ್ರಿಯರಾದ ಇಂಡಿ ಮತ್ತು ಇವಿ ಜತೆಗೂಡಿ ಕತ್ರಿನಾ ಕೈಫರ್​ರ ಜನಪ್ರಿಯ ‘ಶೀಲಾ ಕೀ ಜವಾನಿ’ ಹಾಡಿಗೂ ಹೆಜ್ಜೆ ಹಾಕಿದ ವಿಡಿಯೊ ಪ್ರಕಟಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net