

ಪ್ರಸನ್ನ ಕುಮಾರ್ ತರಬೇತಿಯ ವಾರ್ ಹ್ಯಾಮರ್, 2400 ಮೀಟರ್ಗಳ ಗ್ರೇಡ್-1 ಮೀನಾಕ್ಷಿ ಸುಂದರೇಶ್ವರ ಬೆಂಗಳೂರು ಚಳಿಗಾಲ ಡರ್ಬಿ ರೇಸ್ ಗೆದ್ದುಕೊಂಡಿತು. ಆರಂಭಿಕ ಹಂತದಲ್ಲಿ ಭಾರಿ ಹಿನ್ನಡೆ ಅನುಭವಿಸಿದ ಜಾಕಿ ಸೂರಜ್ ನರೇಡು ಸವಾರಿಯ ವಾರ್ ಹ್ಯಾಮರ್ ಕುದುರೆ ಕೊನೇ 200 ಮೀಟರ್ನಲ್ಲಿ ಮುನ್ನಡೆ ಸಾಧಿಸಿ ಭರ್ಜರಿ ಗೆಲುವು ದಾಖಲಿಸಿತು.
ಎಲ್ಲರ ಫೇವರಿಟ್ ಆಗಿ ಕಣಕ್ಕಿಳಿದ ವಾರ್ ಹ್ಯಾಮರ್ ನಿರೀಕ್ಷೆಗಳನ್ನು ಸಾಕಾರಗೊಳಿಸುವಲ್ಲಿ ಯಶಸ್ವಿಯಾಯಿತು. 2 ನಿಮಿಷ 28.86 ಸೆಕೆಂಡ್ಗಳಲ್ಲಿ ವಾರ್ ಹ್ಯಾಮರ್ ಈ ದೂರ ಕ್ರಮಿಸಿತು. ಸತತ 6 ರೇಸ್ ಜಯಿಸಿದ ದಾಖಲೆ ಬೆನ್ನಿಗಿದ್ದರೂ ಮೊದಲ ಬಾರಿಗೆ 2,400 ಮೀಟರ್ ಓಟದಲ್ಲಿ ಕಣಕ್ಕಿಳಿದ ವಾರ್ ಹ್ಯಾಮರ್ ಆರಂಭಿಕ ಹಿನ್ನಡೆ ನಡುವೆಯೂ ವಿಜಯಮಾಲೆ ಧರಿಸಿತು. ಸ್ಟ್ರೀಮಿಂಗ್ ಗೋಲ್ಡ್ ಕುದುರೆ ಕಣದಿಂದ ಹಿಂದೆ ಸರಿದ ಪರಿಣಾಮ 8 ಕುದುರೆಗಳಷ್ಟೇ ರೇಸ್ನಲ್ಲಿ ಓಡಿದವು.
ಏಂಜೆಜೆ ಹಾಗೂ ಹಿಯರ್ ಆಂಡ್ ನವ್ ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನ ಪಡೆದವು. ವಿಜಯವಾಣಿಯ 3ನೇ ಫೇವರಿಟ್ ಆಗಿದ್ದ ಸ್ಪೀಡ್ಸ್ಟರ್ ಆರಂಭಿಕ ಹಂತದಲ್ಲೇ ಭರ್ಜರಿ ಮುನ್ನಡೆ ಸಾಧಿಸಿತು. ಇದಕ್ಕೆ ರೋಮನ್ ಸೆನೇಟರ್ ಹಾಗೂ ಮೈಟಿ ರೆಡ್ ಕುದುರೆಗಳು ಆರಂಭದ 1 ಸಾವಿರ ಮೀಟರ್ವರೆಗೂ ಈ ಮೂರು ಕುದುರೆಗಳೇ ಮುನ್ನಡೆ ಕಾಯ್ದುಕೊಂಡವು. ಬಳಿಕ ಏಕಾಏಕಿ ವಾರ್ ಹ್ಯಾಮರ್ ಮುನ್ನಡೆ ದಕ್ಕಿಸಿಕೊಂಡಿತು. ಮುಂದಿನ ವಾರ ಮುಂಬೈನಲ್ಲಿ ನಡೆಯಲಿರುವ ಪ್ರತಿಷ್ಠಿತ ಇಂಡಿಯನ್ ಡರ್ಬಿಯಲ್ಲೂ ವಾರ್ ಹ್ಯಾಮರ್ ಪಾಲ್ಗೊಳ್ಳುವ ನಿರೀಕ್ಷೆಯಿದೆ.
69 ಲಕ್ಷ ರೂ. ಬಹುಮಾನ ಡರ್ಬಿ ವಿಜೇತ ವಾರ್ ಹ್ಯಾಮರ್ ಆಕರ್ಷಕ ಟ್ರೋಫಿಯೊಂದಿಗೆ 69 ಲಕ್ಷ ರೂಪಾಯಿ ಬಹುಮಾನ ಗೆದ್ದುಕೊಂಡಿತು. 1.41 ಕೋಟಿ ರೂಪಾಯಿ ಡರ್ಬಿಯ ಒಟ್ಟು ಬಹುಮಾನ ಮೊತ್ತವಾಗಿತ್ತು.
ವಾರ್ ಹ್ಯಾಮರ್ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿತ್ತು. ವಾರ್ ಹ್ಯಾಮರ್ ಸವಾರಿ ಕನಸಾಗಿತ್ತು. ಹಿನ್ನಡೆ ನಡುವೆಯೂ ವಾರ್ ಹ್ಯಾಮರ್ ಬಳಿಕ ಎಚ್ಚೆತ್ತುಗೊಂಡು ಓಡಿದ್ದು ಸ್ಮರಣೀಯವಾಗಿತ್ತು. | ಸೂರಜ್ ನರೇಡು ಜಾಕಿ
| ರಘುನಾಥ್ ಡಿ.ಪಿ. ಬೆಂಗಳೂರು