

ಕರಾಚಿ: ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧ 10 ವಿಕೆಟ್ ಗೆಲುವು ಕಂಡ ಬಳಿಕ ಟಿವಿ ಶೋ ಒಂದರಲ್ಲಿ ಮಾತನಾಡುತ್ತ ಕೋಮುವಾದಿ ಹೇಳಿಕೆ ನೀಡಿದ್ದ ಪಾಕಿಸ್ತಾನದ ಮಾಜಿ ವೇಗಿ ವಕಾರ್ ಯೂನಿಸ್, ಬುಧವಾರ ಈ ಬಗ್ಗೆ ಕ್ಷಮೆಯಾಚಿಸಿದ್ದಾರೆ.
ಪಾಕ್ ಆರಂಭಿಕ ಮೊಹಮದ್ ರಿಜ್ವಾನ್ ಇನಿಂಗ್ಸ್ ನಡುವಿನ ಬ್ರೇಕ್ ವೇಳೆ ಮೈದಾನದಲ್ಲೇ ಪ್ರಾರ್ಥನೆ ಮಾಡಿದ್ದರು. ಈ ಬಗ್ಗೆ ಮಾತನಾಡುತ್ತ ವಾಕರ್, ‘ರಿಜ್ವಾನ್ ಹಿಂದುಗಳ ನಡುವೆ ನಮಾಜ್ ಓದಿದರು. ಅದು ನನಗೆ ಅತ್ಯಂತ ವಿಶೇಷವಾಗಿತ್ತು’ ಎಂದು ಹೇಳಿದ್ದರು. ಭಾರತದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್, ವೀಕ್ಷಕ ವಿವರಣೆಕಾರರಾದ ಆಕಾಶ್ ಚೋಪ್ರಾ ಮತ್ತು ಹರ್ಷ ಬೋಗ್ಲೆ ಈ ಬಗ್ಗೆ ಕಿಡಿಕಾರಿದ್ದು, ಇದು ನಿಜಕ್ಕೂ ಜಿಹಾದಿ ಮನೋಭಾವ ಎಂದು ದೂರಿದ್ದಾರೆ. ‘ವಕಾರ್ ಜಿಹಾದಿ ಮನೋಭಾವವನ್ನು ಬೇರೆಯೇ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಎಂಥಾ ನಾಚಿಕೆಗೆಟ್ಟ ಮನುಷ್ಯ’ ಎಂದು ಕನ್ನಡಿಗ ವೆಂಕಟೇಶ್ ಪ್ರಸಾದ್ ಕಿಡಿಕಾರಿದ್ದರು.
ಇದೀಗ ತಮ್ಮ ತಪ್ಪಿನ ಅರಿವಾಗಿ ಕ್ಷಮೆಯಾಚಿಸಿರುವ ವಕಾರ್, ‘ಆ ಕ್ಷಣದ ಆವೇಶದಲ್ಲಿ ನಾನು ಹೇಳಿದ ಆ ಮಾತು ಹಲವರ ಭಾವನೆಗಳಿಗೆ ಧಕ್ಕೆ ತಂದಿದೆ. ಅದಕ್ಕಾಗಿ ನಾನು ಕ್ಷಮೆಯಾಚಿಸುವೆ. ಅದು ಉದ್ದೇಶಪೂರ್ವಕವಾಗಿ ಹೇಳಿದ ಮಾತಲ್ಲ. ನನ್ನಿಂದ ತಪ್ಪಾಗಿದೆ. ಯಾವುದೇ ಜನಾಂಗ, ಬಣ್ಣ ಮತ್ತು ಧರ್ಮದ ಹೊರತಾಗಿಯೂ ಕ್ರೀಡೆ ಎಲ್ಲರನ್ನೂ ಒಗ್ಗೂಡಿಸುತ್ತದೆ. ಪಾಕಿಸ್ತಾನ, ಭಾರತ ಅಥವಾ ವಿಶ್ವದ ಯಾವುದೇ ಭಾಗದಲ್ಲಿರುವ ಹಿಂದುಗಳಿಗೆ ನೋವುಂಟು ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ’ ಎಂದು ಹೇಳಿದ್ದಾರೆ.