ಅನುಭವಿ ವೃದ್ಧಿಮಾನ್ ಸಾಹ ಹಾಗೂ ಪ್ರತಿಭಾವಂತ ಪಂತ್ ನಡುವೆ ಪೈಪೋಟಿ, ವೆಲ್ಲಿಂಗ್ಟನ್​ನಲ್ಲಿ ರಿಷಭ್ ಪಂತ್​ಗೆ ಚಾನ್ಸ್!

pant1
Published on

ವೆಲ್ಲಿಂಗ್ಟನ್: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ನಲ್ಲಿ ಭಾರತಕ್ಕೆ ಮುಂದಿನ ಸರಣಿ ಇರುವುದು ನ್ಯೂಜಿಲೆಂಡ್ ನೆಲದಲ್ಲಿ ನ್ಯೂಜಿಲೆಂಡ್ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿ. ವೆಲ್ಲಿಂಗ್ಟನ್ ಹಾಗೂ ಕ್ರೖೆಸ್ಟ್​ಚರ್ಚ್​ನಲ್ಲಿ ನಡೆಯಲಿರುವ ಈ ಪಂದ್ಯದಿಂದ 120 ಅಂಕಗಳು ಪಣಕ್ಕಿದ್ದು, ಎರಡೂ ತಂಡಗಳ ಪಾಲಿಗೆ ಕಠಿಣ ಹೋರಾಟದ ಸರಣಿ ಇದಾಗಿರಲಿದೆ. ಇದರ ನಡುವೆ ಭಾರತ ತಂಡ ಈಗಾಗಲೇ ತಂಡ ಸಂಯೋಜನೆಯ ಚಿಂತೆಯಲ್ಲಿದ್ದು, ಶುಕ್ರವಾರ ವೆಲ್ಲಿಂಗ್ಟನ್​ನಲ್ಲಿ ಆರಂಭವಾಗಲಿರುವ ಟೆಸ್ಟ್​ನಲ್ಲಿ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿ ರಿಷಭ್ ಪಂತ್ ಆಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಕಳೆದ ವರ್ಷ ತವರಿನ ಋತುವಿನ ಆರಂಭದಿಂದ ಯುವ ವಿಕೆಟ್ಕೀಪರ್-ಬ್ಯಾಟ್ಸ್​ಮನ್ ಟೆಸ್ಟ್ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದರು. ಸ್ಪಿನ್ ಸ್ನೇಹಿ ಪಿಚ್​ನಲ್ಲಿ ಪಂತ್​ಗಿಂತ ಹೆಚ್ಚಾಗಿ ಅನುಭವಿ ವೃದ್ಧಿಮಾನ್ ಸಾಹ ಮೇಲೆ ಭಾರತ ತಂಡ ಭರವಸೆ ಇಟ್ಟಿತ್ತು. ಆದರೆ, ವೇಗದ ಬೌಲಿಂಗ್ ಪಿಚ್​ನಲ್ಲಿ ರಿಷಭ್ ಪಂತ್​ಗೆ ವಿಕೆಟ್ ಕೀಪಿಂಗ್ ಜವಾಬ್ದಾರಿ ನೀಡುವುದು ಸೂಕ್ತ ಎನ್ನುವ ಅಭಿಪ್ರಾಯಕ್ಕೆ ಟೀಮ್ ಮ್ಯಾನೇಜ್​ವೆುಂಟ್ ಬಂದಿದೆ.

ಹ್ಯಾಮಿಲ್ಟನ್​ನಲ್ಲಿ ನ್ಯೂಜಿಲೆಂಡ್ ಇಲೆವೆನ್ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ ರಿಷಭ್ ಪಂತ್ ಹಾಗೂ ವೃದ್ಧಿಮಾನ್ ಸಾಹ ಇಬ್ಬರೂ ವಿಕೆಟ್ಕೀಪಿಂಚ್ ಜವಾಬ್ದಾರಿ ನಿಭಾಯಿಸಿದ್ದರು. ಈ ವೇಳೆ ರಿಷಭ್ ಪಂತ್ ಮೂರು ಕ್ಯಾಚ್ ಪಡೆದುಕೊಳ್ಳುವ ಮೂಲಕ ಗಮನಸೆಳೆದಿದ್ದರು. ಸಾಹ ಹಾಗೂ ಪಂತ್ ಈವರೆಗೂ ನ್ಯೂಜಿಲೆಂಡ್​ನಲ್ಲಿ ಒಂದೂ ಟೆಸ್ಟ್ ಪಂದ್ಯ ಆಡಿಲ್ಲ. ಈ ಕಾರಣದಿಂದಾಗಿ ಟೆಸ್ಟ್ ಪಂದ್ಯದ ವೇಳೆ ಕಿವೀಸ್​ನ ಪಿಚ್​ಗಳ ಪರಿಸ್ಥಿತಿಯನ್ನು ಅರಿತುಕೊಳ್ಳುವ ಸಲುವಾಗಿ ಅಭ್ಯಾಸ ಪಂದ್ಯದಲ್ಲಿ ಇಬ್ಬರೂ ವಿಕೆಟ್ಕೀಪರ್​ರನ್ನು ಆಡಿಸಲಾಗಿತ್ತು.

ವಿದೇಶದಲ್ಲಿ ಪಂತ್ ಬೆಸ್ಟ್: ಅಭ್ಯಾಸ ಪಂದ್ಯದಲ್ಲಿ ದೆಹಲಿಯ ಯುವ ಎಡಗೈ ಬ್ಯಾಟ್ಸ್​ಮನ್ ಮೊದಲ ಇನಿಂಗ್ಸ್​ನ ವೇಳೆ ಕೇವಲ 7 ರನ್​ಗೆ ಔಟಾಗಿದ್ದರು. ಈ ವೇಳೆ ತಂಡದ ಗಮನಸೆಳೆಯುವ ಉತ್ತಮ ಅವಕಾಶ ವೃದ್ಧಿಮಾನ್ ಸಾಹಗೆ ಇತ್ತು. ಆದರೆ, ಸಾಹ 6 ಎಸೆತಗಳಲ್ಲಿ ಶೂನ್ಯಕ್ಕೆ ಔಟಾಗಿ ನಿರ್ಗಮಿಸಿದ್ದರು. 2ನೇ ಇನಿಂಗ್ಸ್​ನಲ್ಲಿ ರಿಷಭ್ ಪಂತ್ 65 ಎಸೆತಗಳಲ್ಲಿ 70 ರನ್ ಸಿಡಿಸಿ ಟೀಮ್ ಮ್ಯಾನೇಜ್​ವೆುಂಟ್​ನ ಗಮನಸೆಳೆದಿದ್ದರು. ಅದಲ್ಲದೆ, ವಿದೇಶದ ಪಿಚ್​ಗಳಲ್ಲಿ ರಿಷಭ್ ಪಂತ್ ಈಗಾಗಲೇ ಉತ್ತಮ ಇನಿಂಗ್ಸ್ ಗಳ ಮೂಲಕ ಗಮನಸೆಳೆದಿದ್ದಾರೆ. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್​ನಲ್ಲಿ ಪಂತ್ ಶತಕ ಸಿಡಿಸಿದ್ದರೆ, ವೃದ್ಧಿಮಾನ್ ಸಾಹರಿಂದ ಸಾಹಸಿಕ ಶತಕಗಳು ದಾಖಲಾಗಿಲ್ಲ. ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ಮೈದಾನದಲ್ಲಿ ಸಾಹ ಇನ್ನಷ್ಟೇ ಆಡಬೇಕಿದ್ದರೂ, ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾದಲ್ಲಿ ಆಡಿದ ನಾಲ್ಕು ಪಂದ್ಯಗಳಿಂದ ಕನಿಷ್ಠ 35 ರನ್​ಗಳ ಗಡಿಯನ್ನೂ ದಾಟಿಲ್ಲ.

ಹಲವು ಪ್ಲಸ್ ಪಾಯಿಂಟ್!: ನ್ಯೂಜಿಲೆಂಡ್ ನೆಲದಲ್ಲಿ ಚೆಂಡು ಅತಿಯಾಗಿ ಸ್ವಿಂಗ್ ಆಗುತ್ತವೆ. ಆದರೆ, ಬೌನ್ಸ್​ನಲ್ಲಿ ದೊಡ್ಡ ಮಟ್ಟದ ಏರಿಳಿತ ಕಂಡುಬರುವುದಿಲ್ಲ. ಹಾಗಾಗಿ ವಿಕೆಟ್​ನಿಂದ ಸ್ವಲ್ಪ ದೂರದಲ್ಲಿಯೇ ನಿಂತು ಹೆಚ್ಚಿನ ಕಾಲ ಕೀಪಿಂಗ್ ಮಾಡಬೇಕಾಗುತ್ತದೆ. ಅದಲ್ಲದೆ, ಇತ್ತೀಚಿನ ವರ್ಷಗಳಲ್ಲಿ ಕಿವೀಸ್ ಪಿಚ್ ಮೊದಲ ಎರಡು ದಿನ ವೇಗಿಗಳಿಗೆ ನೆರವು ನೀಡಿದರೆ, ನಂತರ ಬ್ಯಾಟಿಂಗ್ ಸ್ನೇಹಿಯಾಗಿ ವರ್ತಿಸುತ್ತದೆ. 2ನೇ ಇನಿಂಗ್ಸ್​ನಲ್ಲಿ ವೇಗವಾಗಿ ರನ್ ಪೇರಿಸಬೇಕಾದ ಸ್ಥಿತಿ ಬಂದಲ್ಲಿ ಸಾಹಗಿಂತ ಹೆಚ್ಚಾಗಿ ಪಂತ್ ನೆರವಿಗೆ ಬರುತ್ತಾರೆ. ಇದು ಎದುರಾಳಿ ತಂಡವನ್ನು ಆಲೌಟ್ ಮಾಡಲು ತಂಡಕ್ಕೆ ಹೆಚ್ಚಿನ ಸಮಯವನ್ನೂ ನೀಡಿದಂತಾಗುತ್ತದೆ. ಇನ್ನೊಂದು ಅಂಶವೆಂದರೆ, ನ್ಯೂಜಿಲೆಂಡ್ ತಂಡದಲ್ಲಿ ಏಕೈಕ ಸ್ಪಿನ್ನರ್ ಇರುವುದು. ಆಡಿದರೆ, ಅಜಾಜ್ ಪಟೇಲ್ ಕಣಕ್ಕಿಳಿಯಬೇಕು. ಅವರ ಎಡಗೈ ಸ್ಪಿನ್​ಗೆ ಒತ್ತಡ ಹೇರಬೇಕಾದಲ್ಲಿ ಭಾರತ ತಂಡ ತನ್ನ ಅಗ್ರ 7 ಬ್ಯಾಟ್ಸ್ ಮನ್​ಗಳ ಪೈಕಿ ಒಬ್ಬರಾದರೂ ಎಡಗೈ ಬ್ಯಾಟ್ಸ್​ಮನ್ ಆಗಿರಬೇಕಾಗಿರುತ್ತದೆ. ಈ ಹಂತದಲ್ಲಿ ಪಂತ್​ಗಿಂತ ಸೂಕ್ತ ಎಡಗೈ ಬ್ಯಾಟ್ಸ್​ಮನ್ ತಂಡದಲ್ಲಿಲ್ಲ.

43 ವರ್ಷದಲ್ಲಿ ಒಂದೇ ಗೆಲುವು!: ಭಾರತ ತಂಡಕ್ಕೆ ನ್ಯೂಜಿಲೆಂಡ್ ನೆಲದ ಟೆಸ್ಟ್ ಪಂದ್ಯಗಳಲ್ಲಿ ಗಮನಸೆಳೆಯುವಂಥ ಫಲಿತಾಂಶ ಸಿಕ್ಕಿಲ್ಲ. ನ್ಯೂಜಿಲೆಂಡ್ ನೆಲದಲ್ಲಿ ಮೊದಲ ಟೆಸ್ಟ್ ಆಡಿದ್ದು, 52 ವರ್ಷಗಳ ಹಿಂದೆ. ಅಲ್ಲಿಂದ ಇಲ್ಲಿಯವರೆಗೂ ಭಾರತ ತಂಡ ಟ್ರಾನ್ಸ್ ಟಾಸ್ಮನ್ ದೇಶದಲ್ಲಿ 23 ಟೆಸ್ಟ್ ಪಂದ್ಯ ಆಡಿದ್ದು ಐದರಲ್ಲಿ ಮಾತ್ರವೇ ಗೆಲುವು ಕಂಡಿದೆ. ಇದರಲ್ಲಿ 3 ಗೆಲುವುಗಳು 1967-68ರ ಚೊಚ್ಚಲ ಕಿವೀಸ್ ಪ್ರವಾಸದ ವೇಳೆ ಬಂದಿತ್ತು. 1976ರಲ್ಲಿ ನಾಲ್ಕನೇ ಗೆಲುವು ದಾಖಲಾಗಿದ್ದರೆ, 2009ರಲ್ಲಿ ಐದನೇ ಗೆಲುವು ಬಂದಿತ್ತು. ಇದರಿಂದಾಗಿ ಕಳೆದ 43 ವರ್ಷಗಳಲ್ಲಿ ಕಿವೀಸ್ ನೆಲದಲ್ಲಿ ಭಾರತ ಗೆದ್ದಿದ್ದು ಒಂದೇ ಟೆಸ್ಟ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net