

ಮುಂಬೈ: ಟೀಮ್ ಇಂಡಿಯಾದ ಮಾಜಿ ನಾಯಕ ಎಂ.ಎಸ್. ಧೋನಿ ಅವರು ತಮ್ಮ ಅಬ್ಬರದ ಬ್ಯಾಟಿಂಗ್ ಮತ್ತು ನಾಯಕತ್ವದಿಂದ ಮಾತ್ರವಲ್ಲ, ಕ್ಯಾಮೆರಾಗಳ ಮುಂದೆ ಹಾಸ್ಯ ಚಟಾಕಿ ಹಾರಿಸುವುದರಲ್ಲೂ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ತಮಗೆ ಎದುರಾಗುವ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸದೇ ಅಲ್ಲೊಂದು ಹಾಸ್ಯ ಚಟಾಕಿ ಹಾರಿಸುವುದೇ ಧೋನಿ ಅವರ ವಿಶೇಷತೆ. ಇದೀಗ ಧೋನಿ ಅವರ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗೆ ನೀಡಿರುವ ಸಲಹೆ ನೆಟ್ಟಿಗರ ಗಮನ ಸೆಳೆದಿದೆ. ಅಲ್ಲದೆ, ಅಭಿಮಾನಿಯ ಉತ್ತರವೂ ಸಹ ಎಲ್ಲರ ಮನ ಮುಟ್ಟಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಧೋನಿ ಅವರು ಪಾಕಿಸ್ತಾನದ ತಿನಿಸುಗಳ ಮೇಲಿನ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ತುಂಬಾ ರುಚಿಕರವಾದ ತಿನಿಸುಗಳು ಬೇಕಾದರೆ ಒಮ್ಮೆ ನೀನು ಪಾಕಿಸ್ತಾನಕ್ಕೆ ಹೋಗು ಎಂದು ಅಭಿಮಾನಿಗೆ ಧೋನಿ ಅವರು ಹೇಳುತ್ತಾರೆ. ಈ ವಿಡಿಯೋವನ್ನು ಅಭಿಮಾನಿಯೊಬ್ಬರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಧೋನಿ ನೀಡಿದ ಸಲಹೆಗೆ ನಯವಾಗಿಯೇ ಉತ್ತರ ನೀಡುವ ಅಭಿಮಾನಿ, ವಿಶ್ವದಲ್ಲೇ ತುಂಬಾ ರುಚಿಕರವಾದ ಆಹಾರವನ್ನು ಪಾಕಿಸ್ತಾನದವರು ನೀಡಿದರೂ ಸಹ ನಾನು ಅಲ್ಲಿಗೆ ಹೋಗುವುದಿಲ್ಲ ಎಂದು ಹೇಳಿದ್ದಾನೆ. ಇದನ್ನು ಕೇಳಿದ ಧೋನಿ, ಗಹಗಹಿಸಿ ನಗುತ್ತಾರೆ.
ಹಿಂದೊಮ್ಮೆ ಧೋನಿಯವರು ಸಂಬಂಧ (ರಿಲೇಶನ್ಶಿಪ್ಸ್)ಗಳ ಬಗ್ಗೆ ಮಾತನಾಡಿದ್ದರು. ಈ ವಿಡಿಯೋ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ವಿಡಿಯೋದಲ್ಲಿ ಜನರ ಗುಂಪನ್ನು ಉದ್ದೇಶಿಸಿ ಮಾತನಾಡಿದ್ದ ಧೋನಿ, ಸಂಬಂಧಗಳ ಬಗ್ಗೆ ಕೆಲವು ಮೌಲ್ಯಯುತ ಸಲಹೆಗಳನ್ನು ನೀಡಿದ್ದರು. ಅದರಲ್ಲೂ ವಿಶೇಷವಾಗಿ ಬ್ಯಾಚುಲರ್ಗಳನ್ನು ಗುರಿಯಾಗಿಸಿಕೊಂಡು ಧೋನಿ ಮಾತನಾಡಿದ್ದರು. ಅನೇಕ ಸಂಬಂಧಗಳಲ್ಲಿ ಇರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸುವ ಪ್ರಯತ್ನ ಮಾಡಿದ್ದರು. ಗರ್ಲ್ಫ್ರೆಂಡ್ಗಳನ್ನು ಹೊಂದಿರುವ ಬ್ಯಾಚುಲರ್ಗಳಿಗೆ ಈ ಉತ್ತರವನ್ನು ಹೇಳುವ ಮೂಲಕ ನಾನು ಸಾಮಾನ್ಯ ತಪ್ಪುಗ್ರಹಿಕೆಯನ್ನು ತೆರವುಗೊಳಿಸಲು ಬಯಸುತ್ತೇನೆ. ಅದೇನೆಂದರ ನಿಮ್ಮ ನಿಮ್ಮ ಗರ್ಲ್ಫ್ರೆಂಡ್ ಇತರರಿಗಿಂತ ತುಂಬಾ ವಿಭಿನ್ನ ಎಂದು ನಿಮ್ಮಷ್ಟಕ್ಕೆ ನೀವು ಭಾವಿಸಿಕೊಳ್ಳಬೇಡಿ ಎಂದು ಧೋನಿ ಸಲಹೆ ನೀಡಿದ್ದರು. ಧೋನಿ ಅವರು ಈ ಹೇಳಿಕೆಯನ್ನು ನೀಡುತ್ತಿದ್ದಂತೆ ಅಲ್ಲಿ ನೆರದಿದ್ದ ಜನರು ಜೋರಾಗಿ ನಕ್ಕಿರುವುದು ವೈರಲ್ ವಿಡಿಯೋದಲ್ಲಿತ್ತು.
2011ರಲ್ಲಿ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟ ಧೋನಿ ಅವರ ಸಾಧನೆಯನ್ನು ಗಮನದಲ್ಲಿಟ್ಟುಕೊಂಡು ಅವರ 7ನೇ ನಂಬರಿನ ಜರ್ಸಿಗೆ ನಿವೃತ್ತಿ ಘೋಷಣೆ ಮಾಡುವ ಮೂಲಕ ಬಿಸಿಸಿಐ, ಧೋನಿ ಅವರಿಗೆ ವಿಶೇಷ ಗೌರವವನ್ನು ಸಲ್ಲಿಸಿದೆ. ಆಟಗಾರನಾಗಿ ಮತ್ತು ತಂಡದ ನಾಯಕನಾಗಿ ಕ್ರೀಡಾ ಜಗತ್ತಿನಲ್ಲಿ ಅನೇಕ ದಾಖಲೆಗಳನ್ನು ಬರೆದಿರುವ ಧೋನಿ, ಕ್ರಿಕೆಟ್ ಲೋಕದ ಅಪ್ರತಿಮ ವ್ಯಕ್ತಿ ಎನಿಸಿಕೊಂಡಿದ್ದಾರೆ. ಟೀಮ್ ಇಂಡಿಯಾ ನಾಯಕನಾಗಿ 2007ರಲ್ಲಿ ಟಿ20 ವಿಶ್ವಕಪ್, 2011ರಲ್ಲಿ ಏಕದಿನ ವಿಶ್ವಕಪ್ ಮತ್ತು 2013ರಲ್ಲಿ ಚಾಂಪಿಯನ್ಸ್ ಟ್ರೋಫಿಯಂತಹ ಎಲ್ಲ ಪ್ರಮುಖ ಐಸಿಸಿ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ.
ತಂಡದ ಪರ 350 ಏಕದಿನ ಪಂದ್ಯಗಳನ್ನು ಆಡಿರುವ ಧೋನಿ 10 ಶತಕ ಮತ್ತು 73 ಅರ್ಧ ಶತಕಗಳೊಂದಿಗೆ 50.57 ರನ್ ಸರಾಸರಿಯಲ್ಲಿ ಒಟ್ಟು 10,773 ರನ್ ಕಲೆಹಾಕಿದ್ದಾರೆ. ಟಿ20 ಪಂದ್ಯಗಳ ವಿಚಾರಕ್ಕೆ ಬಂದರೆ, ಒಟ್ಟು 98 ಪಂದ್ಯಗಳನ್ನು ಆಡಿರುವ ಧೋನಿ, 37.60 ಸರಾಸರಿಯೊಂದಿಗೆ 126.13 ಸ್ಟ್ರೈಕ್ರೇಟ್ನಲ್ಲಿ 1617 ರನ್ ಗಳಿಸಿದ್ದಾರೆ. ಟೆಸ್ಟ್ ಪಂದ್ಯದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಧೋನಿ, 97 ಪಂದ್ಯಗಳಲ್ಲಿ 6 ಶತಕ ಮತ್ತು 33 ಅರ್ಧಶತಕಗಳೊಂದಿಗೆ 4876 ರನ್ ಕಲೆಹಾಕಿದ್ದಾರೆ.
ವಿಕೆಟ್ಕೀಪರ್ ಆಗಿ ತಮ್ಮ ವೃತ್ತಿಬದುಕಿನಲ್ಲಿ ಧೋನಿ ಅವರು ಅತ್ಯದ್ಭುತ ಕೌಶಲಗಳನ್ನು ತೋರಿದ್ದಾರೆ. ತಮ್ಮ ಚಾಕಚಕ್ಯತೆಯಿಂದ ಅನೇಕ ಪಂದ್ಯಗಳಲ್ಲಿ ಸ್ಪಂಪೌಟ್ ಹಾಗೂ ರನೌಟ್ ಮಾಡುವ ಮೂಲಕ ಪಂದ್ಯದ ದಿಕ್ಕನ್ನೇ ಬದಲಾಯಿಸಿದ ಉದಾಹರಣೆಗಳಿವೆ. ವಿಶ್ವ ಕ್ರಿಕೆಟ್ನ ಶ್ರೇಷ್ಠ ವಿಕೆಟ್ ಕೀಪರ್ಗಳ ಸಾಲಿನಲ್ಲಿ ಧೋನಿ ಅಗ್ರಗಣ್ಯರಾಗಿ ನಿಲ್ಲುತ್ತಾರೆ. ಒಟ್ಟು 294 ಬಾರಿ ವಿಕೆಟ್ಗಳನ್ನು ತೆಗೆದಿದ್ದಾರೆ. (ಏಜೆನ್ಸೀಸ್)