ಎಷ್ಟು ದಿನ ಈ ಯಶಸ್ಸು? ಅಗ್ರಸ್ಥಾನಕ್ಕೇರಿದ ಫೋಟೋ ಕ್ಲಿಕ್ಕಿಸಿ ಇಟ್ಕೊಳ್ಳಿ ಬೇಕಾಗುತ್ತೆ! RCB ವಿರುದ್ಧ ವೀರೂ ವ್ಯಂಗ್ಯ

ವಿಜಯವಾಣಿ - 2025-04-01T173201.162
Published on

RCB: ಐಪಿಎಲ್​ 18ನೇ ಆವೃತ್ತಿಯಲ್ಲಿ ಭರ್ಜರಿ ಓಪನಿಂಗ್ ಪಡೆದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಕ್ಯಾಪ್ಟನ್ ರಜತ್ ಪಟಿದಾರ್​ ನೇತೃತ್ವದಲ್ಲಿ ಈಗಾಗಲೇ ಎರಡು ಗೆಲುವನ್ನು ಸಾಧಿಸಿದೆ. ಮೊದಲ ಶುಭಾರಂಭ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಕೆಕೆಆರ್​ ವಿರುದ್ಧ ಗೆದ್ದು ಬೀಗಿದ ಆರ್​ಸಿಬಿ, ನಂತರದಲ್ಲಿ ಬದ್ಧ ವೈರಿ ತಂಡ ಚೆನ್ನೈ ಸೂಪರ್​ ಕಿಂಗ್ಸ್ ವಿರುದ್ಧ 50 ರನ್​ಗಳ ಭಾರೀ ಅಂತರದ ಗೆಲುವು ಕಂಡಿತು. ಇದು ಆರ್​ಸಿಬಿ ತಂಡದ ಬಲಿಷ್ಠತೆಯನ್ನಷ್ಟೇ ಪ್ರದರ್ಶಿಸಿದ್ದಲ್ಲದೇ ಐಪಿಎಲ್​ ಅಂಕಪಟ್ಟಿಯಲ್ಲಿ ಹೆಚ್ಚುವರಿ ಪಾಯಿಂಟ್ಸ್​ಗಳಿಂದ ಅಗ್ರಸ್ಥಾನಕ್ಕೇರಿಸಿತು. ಈ ಸಂಗತಿ ಫ್ರಾಂಚೈಸಿ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ.

ಒಂದೆಡೆ ಆರ್​ಸಿಬಿ ಅದ್ಭುತ ಗೆಲುವಿನೊಂದಿಗೆ ಐಪಿಎಲ್​ 2025ರಲ್ಲಿ ಉತ್ತಮ ಕಿಕ್​ಸ್ಟಾರ್ಟ್​ ಪಡೆದುಕೊಂಡು ಮುನ್ನುಗ್ಗುತ್ತಿದ್ದರೆ, ಅತ್ತ ಮಾಜಿ ಕ್ರಿಕೆಟಿಗರು ವಿರಾಟ್​ ಕೊಹ್ಲಿ ಮತ್ತು ರಜತ್​ ಪಟಿದಾರ್​ ತಂಡದ ಪ್ರದರ್ಶನವನ್ನು ಮೆಚ್ಚಿ ಮಾತನಾಡಿದ್ದಾರೆ. ಈ ಮಧ್ಯೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಜಿ ಕ್ಯಾಪ್ಟನ್​, ಟೀಮ್ ಇಂಡಿಯಾದ ಹಿರಿಯ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಮಾತ್ರ ಆರ್​ಸಿಬಿ ವಿರುದ್ಧ ವ್ಯಂಗ್ಯವಾಡಿದ್ದಾರೆ. ಹೆಚ್ಚುವರಿ ಅಂಕಗಳೊಂದಿಗೆ ಉತ್ತಮ ಪ್ರದರ್ಶನ ನೀಡಿರುವ ಆರ್​ಸಿಬಿ ತಂಡವನ್ನು ಟೀಕಿಸಿ ಮಾತನಾಡಿರುವ ವೀರೂ, ಇದೊಂದು ಬಡ ತಂಡ ಎಂದಿದ್ದಾರೆ.

"ಆರ್​ಸಿಬಿ ಅಂತಹ ಬಡ ಫ್ರಾಂಚೈಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿರುವ ಬಗ್ಗೆ ಖುಷಿ ಪಡಬೇಕು. ಕಾರಣ, ಇಲ್ಲಿಯವರೆಗೂ ಒಂದೇ ಒಂದು ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಅಪರೂಪಕ್ಕೆ ಪಾಯಿಂಟ್ಸ್​ ಟೇಬಲ್​ನಲ್ಲಿ ಮೊದಲಿಗಿದೆ. ಇದರ ಫೋಟೋವನ್ನು ಕ್ಲಿಕ್ಕಿಸಿ ತಮ್ಮ ಬಳಿ ಇಟ್ಟುಕೊಳ್ಳುವುದು ಒಳಿತು. ಏಕೆಂದರೆ, ಯಾರಿಗೆ ಗೊತ್ತಿದೆ ಎಷ್ಟು ದಿನ ಈ ಯಶಸ್ಸು ಅವರೊಂದಿಗೆ ಇರಲಿದೆ ಅಂತ? ಇಲ್ಲಿ ನಾನು ಬಡ ಎಂದಿದ್ದು ಫ್ರಾಂಚೈಸಿ ಬಳಿ ಹಣವಿಲ್ಲ ಎಂದಲ್ಲ. ಒಂದು ತಂಡ ಇಲ್ಲಿಯವರೆಗೂ ಒಂದು ಬಾರಿಯೂ ಟ್ರೋಫಿ ಗೆದ್ದಿಲ್ಲ ಎಂಬುದು ಎಂದು" ಲೇವಡಿ ಮಾಡಿದ್ದಾರೆ. ಸದ್ಯ ವೀರು ಹೇಳಿಕೆಗೆ ಆರ್​ಸಿಬಿ ಅಭಿಮಾನಿಗಳು ತೀವ್ರ ಕಿಡಿಕಾರಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net