

ನವದೆಹಲಿ : ಚಾಂಪಿಯನ್ಸ್ ಆಗುವುದು ಸುಲಭದ ಮಾತಲ್ಲ. 'ಬೆಳೆಯುವ ಸಿರಿ ಮೊಳಕೆಯಲ್ಲಿ' ಎಂಬಂತೆ ಕ್ರೀಡಾ ಕ್ಷೇತ್ರದಲ್ಲಿ ಬಾಲ್ಯದಿಂದ ಸಂಪೂರ್ಣ ತೊಡಗಿಸಿಕೊಂಡು ಶ್ರಮಿಸಿದರೆ ಸಾಧನೆಯ ಮೆಟ್ಟಿಲು ಹತ್ತಬಹುದು. ಈಗ ಭಾರತದಲ್ಲಷ್ಟೇ ಅಲ್ಲ, ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲೂ ಭಾರೀ ಹೆಸರು ಮಾಡಿರುವ ವಿರಾಟ್ ಕೊಹ್ಲಿಯ ವಿಚಾರದಲ್ಲೂ ಇದೇ ನಡೆದಿದೆ.
ವಿರಾಟ್ ಕೊಹ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದಾಗ 15 ವರ್ಷ ಕೆಳಗಿನ ವರ್ಗದಲ್ಲಿ ದೆಹಲಿ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದ ನೆನಪೊಂದು ಇದೀಗ ಅಂತರ್ಜಾಲದಲ್ಲಿ ಹಸಿರಾಗಿದೆ. ತಮ್ಮ ಶಾಲಾ ತಂಡದ ನಾಯಕರಾಗಿದ್ದ ಕೊಹ್ಲಿ ಅವರು ಮತ್ತಿಬ್ಬರು ವಿದ್ಯಾರ್ಥಿಗಳೊಂದಿಗೆ ದೆಹಲಿ ತಂಡಕ್ಕೆ ಆಯ್ಕೆಯಾದ ಬಗ್ಗೆ ಶಾಲೆಯು ಪಾಲಕರಿಗೆ ಕಳುಹಿಸಿದ ಸರ್ಕ್ಯುಲರ್ ಒಂದು ನೆಟ್ಟಿಗರ ಗಮನ ಸೆಳೆಯುತ್ತಿದೆ.
ವಿರಾಟ್ ಕೊಹ್ಲಿಗೆ ಮೊದಲು ಜನಪ್ರಿಯತೆ ಲಭಿಸಿದ್ದು, 2008 ರಲ್ಲಿ ಅಂಡರ್ 19 ವರ್ಲ್ಡ್ ಕಪ್ ಪಂದ್ಯಾವಳಿಯಲ್ಲಿ ಕ್ಯಾಪ್ಟನ್ ಆಗಿ ಕಾರ್ಯನಿರ್ವಹಿಸಿದಾಗ. ಆದರೆ, ಈಗ ವೈರಲ್ ಆಗಿರುವ 18 ವರ್ಷ ಹಿಂದಿನ ಸೇವಿಯರ್ ಕಾನ್ವೆಂಟ್ನ ಪತ್ರದಲ್ಲಿ ಕೊಹ್ಲಿ 2003 ನೇ ಇಸವಿಯಲ್ಲಿ ಶಾಲೆಯ ತಂಡದ ನಾಯಕರಾಗಿದ್ದು, ದೆಹಲಿ ಕ್ರಿಕೆಟ್ ತಂಡಕ್ಕೆ ಆಯ್ಕೆ ಆದ ಬಗ್ಗೆ ಮಾಹಿತಿ ಇದೆ.
ಅಂದಿನಿಂದ ಇಂದಿನವರೆಗೆ ಕ್ರಿಕೆಟ್ ಪ್ರೇಮಿಗಳ ಕಣ್ಮಣಿ ವಿರಾಟ್ ಕೊಹ್ಲಿ ಸಾಧಿಸಿರುವ ಮೈಲಿಗಲ್ಲುಗಳು ಹಲವಾರು. ಹಾಲಿ 32 ವರ್ಷದ ಕೊಹ್ಲಿ, ಐಪಿಎಲ್ 2021 ಪಂದ್ಯಾವಳಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿ ತಮ್ಮ ತಂಡಕ್ಕೆ ಪ್ರೇರಣೆ ನೀಡುತ್ತಿದ್ದಾರೆ. (ಏಜೆನ್ಸೀಸ್)