ವಿರಾಟ್ ಕೊಹ್ಲಿಗೆ ಶಾಲಾ ದಿನಗಳನ್ನು ನೆನಪಿಸಿದೆ ಈ ಚಿತ್ರ!

kohli school web
Published on

ಬೆಂಗಳೂರು: ಐಪಿಎಲ್ 13ನೇ ಆವೃತ್ತಿಯಲ್ಲಿ ಆರ್‌ಸಿಬಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ವಿರಾಟ್ ಕೊಹ್ಲಿ ಅವರು, ಸಹ-ಆಟಗಾರರೊಂದಿಗೆ ಕ್ಲಿಕ್ಕಿಸಿಕೊಂಡಿರುವ ಚಿತ್ರವೊಂದು ಈಗ ಅವರಿಗೆ ಶಾಲಾ ದಿನಗಳನ್ನು ನೆನಪಿಸಿದೆಯಂತೆ! ಈ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಕೊಹ್ಲಿ, ತಮಾಷೆಯ ಅಡಿಬರಹವನ್ನೂ ಬರೆದುಕೊಂಡಿದ್ದಾರೆ.

ಆರ್‌ಸಿಬಿ ಆಟಗಾರರ ದೇವದತ್ ಪಡಿಕಲ್, ಎಬಿ ಡಿವಿಲಿಯರ್ಸ್‌ ಮತ್ತು ಮೊಹಮದ್ ಸಿರಾಜ್ ಜತೆಗೆ ಅಭ್ಯಾಸದ ವೇಳೆ ಸಾಲಿನಲ್ಲಿ ನಿಂತಿರುವ ಚಿತ್ರ ಇದಾಗಿದೆ. ಈ ಪೈಕಿ ಎಬಿಡಿ ಮಾತ್ರ ಸ್ವಲ್ಪ ಮಂದಹಾಸ ಬೀರಿದ್ದರೆ, ಇತರ ಮೂವರು ಏನೋ ಇಕ್ಕಟ್ಟಿನಲ್ಲಿರುವ ಮುಖಭಾವ ಹೊಂದಿದ್ದಾರೆ.

‘ಈ ಚಿತ್ರ ನನ್ನನ್ನು ಶಾಲಾ ದಿನಗಳಿಗೆ ಕರೆದುಕೊಂಡು ಹೋಗಿದೆ. ಒಂದೇ ತರಗತಿಯ ನಾಲ್ವರು ವಿದ್ಯಾರ್ಥಿಗಳು. ಈ ಪೈಕಿ ಎಬಿ (ಡಿವಿಲಿಯರ್ಸ್‌) ಮಾತ್ರ ಹೋಂವರ್ಕ್ ಮುಗಿಸಿದ್ದಾರೆ ಮತ್ತು ಸಿದ್ಧವಾಗಿ ಬಂದಿದ್ದಾರೆ. ಇತರ ಮೂವರು ತಮಗೆ ಸಂಕಷ್ಟ ಎದುರಾಗಲಿದೆ ಎಂಬುದನ್ನು ಅರಿತುಕೊಂಡಿದ್ದಾರೆ’ ಎಂದು ಕೊಹ್ಲಿ ಬರೆದುಕೊಂಡಿದ್ದಾರೆ.

ಕೊಹ್ಲಿ ಅವರ ಈ ಪೋಸ್ಟ್‌ಗೆ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಸ್ಪಿನ್ನರ್ ರಶೀದ್ ಖಾನ್ ತಮಾಷೆಯ ಪ್ರತಿಕ್ರಿಯೆಯನ್ನೂ ಬರೆದಿದ್ದಾರೆ. ‘ಈ ನಾಲ್ವರ ಪೈಕಿ ಸಿರಾಜ್‌ಗೆ, ಟೀಚರ್ ತಮಗೆ ಹೋಂವರ್ಕ್ ನೀಡಿದ್ದರು ಎಂಬುದು ಕೂಡ ತಿಳಿದಿಲ್ಲ’ ಎಂದು ರಶೀದ್ ಖಾನ್ ಕಾಮೆಂಟ್ ಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net