

ಚೆನ್ನೈ: 2024ರ ಡಿಸೆಂಬರ್ ತಿಂಗಳಲ್ಲಿ ಟೀಮ್ ಇಂಡಿಯಾದ ಲೆಜೆಂಡರಿ ಆಟಗಾರ ಆರ್. ಅಶ್ವಿನ್ ನಿವೃತ್ತಿ ಘೋಷಿಸುವ ಮೂಲಕ ಕ್ರೀಡಾ ವಲಯದಲ್ಲಿ ಅಚ್ಚರಿ ಮೂಡಿಸಿದ್ದರು. ಆಧುನಿಕ ಯುಗದ ಬ್ಯಾಟರ್ಗಳಿಗೆ ನಡುಕ ಹುಟ್ಟಿಸಿದ್ದ ಆರ್. ಅಶ್ವಿನ್ ಆಗಿಂದಾಗೆ ಕ್ರಿಕೆಟ್ಗೆ ಸಂಬಂಧಿಸಿದ ವಿಚಾರಗಳನ್ನು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ವೇಳೆ ವಿರಾಟ್ ಕೊಹ್ಲಿ (Virat Kohli) ನೀಡಿದ ಸಲಹೆಯೇ ಬೌಲರ್ಗಳಿಗೆ ಹಿನ್ನಡೆ ಅನುಭವಿಸಲು ಪ್ರಮುಖ ಕಾರಣವಾಯಿತು ಎಂದು ಹೇಳಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಈ ಬಗ್ಗೆ ವಿಡಿಯೋ ಒಂದನ್ನು ಹಂಚಿಕೊಂಡಿರುವ ಅಶ್ವಿನ್, ಬೌಲಿಂಗ್ ಮತ್ತು ವಿಕೆಟ್ ತೆಗೆಯುವ ಸಾಮರ್ಥ್ಯದ ನಡುವಿನ ವ್ಯತ್ಯಾಸದ ಬಗ್ಗೆ ಮಾತನಾಡಿದ್ದಾರೆ. ವೇಗಿ ಆಕಾಶ್ದೀಪ್ಗೆ ಕೊಹ್ಲಿ (Virat Kohli) ನೀಡಿದ ಸಲಹೆಯೇ ಹೇಗೆ ಹಿನ್ನಡೆಯಾಗಿ ಪರಿಣಮಿಸಿತು ಎಂಬುದರ ಬಗ್ಗೆ ಅಶ್ವಿನ್ ಮಾತನಾಡುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.
ಗಾಬಾ ಟೆಸ್ಟ್ ಪಂದ್ಯದಲ್ಲಿ ಆಕಾಶ್ದೀಪ್ ಅತ್ಯುತ್ತಮ ಬೌಲಿಂಗ್ ಮಾಡಿದರು ಎಂದರೆ ತಪ್ಪಾಗಲಾರದು. ನಾನು ಹೊರಗಿನಿಂದ ಪಂದ್ಯವನ್ನು ವೀಕ್ಷಿಸುತ್ತಿದೆ. ವಿರಾಟ್ (Virat Kohli) ಆತನ ಬಳಿ ಹೋಗಿ ಮಾತನಾಡುವುದನ್ನು ನಾನು ನೋಡಿದೆ. ತಕ್ಷಣವೇ ಒಬ್ಬ ಫೀಲ್ಡರ್ ಹೊರಬಂದರು ಆ ಬಳಿಕ ಆಕಾಶ್ದೀಪ್ ಲಯ ತಪ್ಪಲು ಶುರುವಾಯಿತು.
ಸ್ಟೀವ್ ಸ್ಮಿತ್ನಂತಹ ಬ್ಯಾಟ್ಸ್ಮನ್ ಎದುರು ಈ ರೀತಿ ಬೌಲಿಂಗ್ ಮಾಡಿದಾಗ ಅದು ತಂಡಕ್ಕೆ ಹಿನ್ನಡೆಯಾಗುತ್ತದೆ. ಒಬ್ಬ ಬೌಲರ್ನನ್ನು ನಾವು ಅರ್ಥಮಾಡಿಕೊಂಡಾಗ ಆತನಿಗೆ ತನ್ನ ಆಟ ಆಡಲು ಬಿಡಬೇಕು. ಆತ ಸರಿಯಾದ ದಾರಿಯಲ್ಲಿ ಹೋಗತ್ತಿರುವಾಗ ನಾವು ಏನಾದರೂ ಸಲಹೆ ನೀಡಿದರೆ ಆತ ಲಯ ತಪ್ಪುತ್ತಾನೆ ಆಕಾಶ್ದೀಪ್ ವಿಚಾರದಲ್ಲೂ ಕೂಡ ಇದೇ ಆಗಿದ್ದು ಎಂದು ಟೀಮ್ ಇಂಡಿಯಾ ಮಾಜಿ ಆಟಗಾರ ಆರ್. ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.
ಅಂದಹಾಗೆ ಅಶ್ವಿನ್ (R Ashwin) ಅವರು 106 ಟೆಸ್ಟ್ ಪಂದ್ಯಗಳಲ್ಲಿ 24ರ ಸರಾಸರಿಯಲ್ಲಿ 537 ವಿಕೆಟ್ಗಳನ್ನು ಪಡೆದು ಟೆಸ್ಟ್ ವೃತ್ತಿಜೀವನವನ್ನು ಕೊನೆಗೊಳಿಸಿದ್ದಾರೆ. 132 ಟೆಸ್ಟ್ಗಳಲ್ಲಿ 619 ವಿಕೆಟ್ಗಳನ್ನು ಪಡೆದಿರುವ ಟೀಮ್ ಇಂಡಿಯಾದ ದಿಗ್ಗಜ ಆಟಗಾರ ಅನಿಲ್ ಕುಂಬ್ಳೆ ಬಳಿಕ ಭಾರತದ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರನಾಗಿ ವೃತ್ತಿ ಬದುಕನ್ನು ಅಶ್ವಿನ್ ಕೊನೆಗೊಳಿಸಿದರು. ಬೌಲಿಂಗ್ನಲ್ಲಿ ಮಾತ್ರವಲ್ಲದೆ, ಆರು ಶತಕಗಳು ಮತ್ತು 14 ಅರ್ಧಶತಕಗಳೊಂದಿಗೆ 3503 ಟೆಸ್ಟ್ ರನ್ಗಳನ್ನು ಗಳಿಸಿ, ಬ್ಯಾಟಿಂಗ್ನಲ್ಲೂ ಮಿಂಚಿದ್ದಾರೆ. 3000ಕ್ಕೂ ಹೆಚ್ಚು ರನ್ ಮತ್ತು 300 ವಿಕೆಟ್ಗಳೊಂದಿಗೆ 11 ಆಲ್ರೌಂಡರ್ಗಳಲ್ಲಿ ಒಬ್ಬರಾಗಿದ್ದಾರೆ.