ಇಂಗ್ಲೆಂಡ್​ ವಿರುದ್ಧದ ಏಕದಿನ ಪಂದ್ಯದಿಂದ ಔಟ್​; 1130 ದಿನದ ಅಪರೂಪದ ಸ್ಟ್ರೀಕ್​ ಬ್ರೇಕ್​ ಮಾಡಿದ Virat Kohli

Virat Kohli
Published on

ನಾಗ್ಪುರ: ಇಂದಿನಿಂದ (ಫೆಬ್ರವರಿ 06) ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಆರಂಭವಾಗಿದ್ದು, ಮೊದಲ ಪಂದ್ಯವನ್ನು ನಾಗ್ಪುರದಲ್ಲಿ ಆಡಲಾಗುತ್ತಿದೆ. ಇನ್ನೂ ಮೊಣಕಾಲಿನ ಸಮಸ್ಯೆಯಿಂದ ವಿರಾಟ್ ಕೊಹ್ಲಿ (Virat Kohli) ಮೊದಲ ಪಂದ್ಯವನ್ನು ತಪ್ಪಿಸಿಕೊಂಡಿದ್ದು, ಎರಡನೇ ಪಂದ್ಯಕ್ಕೆ ಕಮ್​ಬ್ಯಾಕ್ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಆದರೆ, ವಿರಾಟ್ ಗಾಯಕ್ಕೆ ತುತ್ತಾಗಿರುವುದು ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಮುಂಬರುವ ಚಾಂಪಿಯನ್ಸ್ ಟ್ರೋಫಿಗೆ ಇದು ಮುಳುವಾಗುವ ಸಾಧ್ಯತೆ ಹೆಚ್ಚಿದೆ.

ಫೆಬ್ರವರಿ 19ರಿಂದ ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿಗೆ ಸಂಬಂಧಿಸಿದಂತೆ ತಂಡಗಳು ಈಗಾಗಲೇ ತಯಾರಿಯನ್ನು ಆರಂಭಿಸಿದ್ದು, ಪೂರ್ವಭಾವಿಯಾಗಿ ಏಕದಿನ ಹಾಗೂ ಟಿ20 ಸರಣಿಗಳನ್ನು ಆಡುತ್ತಿದೆ. ಅದರಂತೆ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಸರಣಿ ಆಡುತ್ತಿದ್ದು, ಆ ಬಳಿಕ ದುಬೈಗೆ ಪ್ರಯಾಣಿಸಲಿದೆ. ಸದ್ಯ ಫಾರ್ಮ್​ ಕಂಡುಕೊಳ್ಳಲು ಪರದಾಡುತ್ತಿರುವ ವಿರಾಟ್​ ಕೊಹ್ಲಿ (Virat Kohli) ಗಾಯಕ್ಕೆ ತುತ್ತಾಗಿರುವುದು ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಇದಲ್ಲದೆ ವಿರಾಟ್​ ಕೊಹ್ಲಿ (Virat Kohli) ಇಂಗ್ಲೆಂಡ್​ ವಿರುದ್ಧದ ಮೊದಲ ಪಂದ್ಯವನ್ನು ತಪ್ಪಿಸಿಕೊಳ್ಳುವ ಮೂಲಕ ಸದ್ದು ಮಾಡಿದ್ದಾರೆ. 1130 ದಿನಗಳ ಬಳಿಕ ವಿರಾಟ್​ ಏಕದಿನ ಪಂದ್ಯವನ್ನು ತಪ್ಪಿಸಿಕೊಂಡಿದ್ದು, ಈ ವಿಚಾರ ಕೂಡ ಕ್ರೀಡಾ ವಲಯದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. 2022ರ ಬಳಿಕ ವಿರಾಟ್ ಕೊಹ್ಲಿ ಮೊದಲ ಬಾರಿಗೆ ಏಕದಿನ ಪಂದ್ಯದಿಂದ ಹೊರಗುಳಿದಿದ್ದಾರೆ.

Virat Kohli

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೂಲಕ ಯಶಸ್ವಿ ಜೈಸ್ವಾಲ್ ಹಾಗೂ ಹರ್ಷಿತ್ ರಾಣಾ ಪದಾರ್ಪಣೆ ಮಾಡುತ್ತಿದ್ದು, ವಿರಾಟ್ ಬದಲಿಗೆ ಶ್ರೇಯಸ್ ಅಯ್ಯರ್​ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನೂ ಕೆ.ಎಲ್. ರಾಹುಲ್​ ವಿಕೆಟ್​ ಕೀಪಿಂಗ್ ಮಾಡುತ್ತಿದ್ದು, ಮೊದಲ ಪಂದ್ಯದ ಸಾಧಕ ಭಾದಕವನ್ನು ನೋಡಿಕೊಂಡು ಎರಡನೇ ಪಂದ್ಯದಲ್ಲಿ ಬದಲಾವಣೆ ಮಾಡಬಹುದು ಎಂದು ಹೇಳಲಾಗಿದೆ.

ಈಚೆಗೆ ಮುಕ್ತಾಯಗೊಂಡ ಟಿ20 ಸರಣಿಯನ್ನು 4-1 ಅಂತರದಿಂದ ಜಯಿಸುವ ಮೂಲಕ ಟೀಮ್ ಇಂಡಿಯಾ ಭಾರೀ ಹುಮ್ಮಸ್ಸಿನಲ್ಲಿದ್ದು, ಏಕದಿನ ಸರಣಿಯಲ್ಲಿ ಗೆದ್ದು ಚಾಂಪಿಯನ್ಸ್ ಟ್ರೋಫಿಗೆ ಲಗ್ಗೆ ಇಡಲು ಟೀಮ್ ಇಂಡಿಯಾ ಸಜ್ಜಾಗಿದೆ.  ಟಿ–20 ಸರಣಿ ಸೋತಿರುವ ಇಂಗ್ಲೆಂಡ್ ತಂಡ ಇಲ್ಲಿ ಛಾಪು ಮೂಡಿಸುವ ವಿಶ್ವಾಸದಲ್ಲಿದೆ. ಅಂತಿಮವಾಗಿ ಜಯ ಯಾರ ಪಾಲಾಗಲಿದೆ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net