ಯೋ-ಯೋ ಟೆಸ್ಟ್‌ನ ಅಂಕ ಹಂಚಿಕೊಂಡ ವಿರಾಟ್ ಕೊಹ್ಲಿ: ವಿಶೇಷ ಶಿಬಿರಕ್ಕೆ ಬೆಂಗಳೂರಿಗೆ ಆಗಮನ

virat kholi
Published on

ಬೆಂಗಳೂರು: ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಗುರುವಾರ ತನ್ನ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಫಿಟ್ನೆಸ್ ಪರೀಕ್ಷೆಯ ಯೋ-ಯೋ ಟೆಸ್ಟ್‌ನಲ್ಲಿ ಪಡೆದ ಅಂಕವನ್ನು ಬಹಿರಂಗಪಡಿಸಿದ್ದಾರೆ. ಯೋ-ಯೋ ಟೆಸ್ಟ್‌ನಲ್ಲಿ ತೇರ್ಗಡೆ ಹೊಂದಲು ಆಟಗಾರರು 16.5 ಅಂಕಗಳಿಸಬೇಕಿದೆ ಎನ್ನಲಾಗಿದೆ.

ಗುರುವಾರ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಆಕಾಡೆಮಿಗೆ (ಎನ್‌ಸಿಎ) ಆಗಮಿಸಿರುವ ವಿರಾಟ್ ಕೊಹ್ಲಿ, ಬಿಸಿಸಿಐ ಆಯೋಜಿಸಿರುವ ವಿಶೇಷ ಪೂರ್ವ ಸಿದ್ದತಾ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಫಿಟ್ನೆಸ್ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿರುವ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಜಿಮ್‌ನಲ್ಲಿ ಕಸರತ್ತು ನಡೆಸುವ ಹಲವು ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಫಿಟ್ನೆಸ್ ಬಗ್ಗ ಅರಿವು ಮೂಡಿಸುತ್ತಾರೆ.

ಗುರುವಾರ ಎನ್‌ಸಿಎಯಲ್ಲಿ ನಡೆಸಲಾದ ಕ್ರಿಕೆಟ್ ಆಟಗಾರರ ಯೋ-ಯೋ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ 17.2 ಅಂಕ ಕಲೆಹಾಕಿದ್ದಾರೆ.

ಮುಂಬರುವ ಏಷ್ಯಾಕಪ್ ಹಾಗೂ ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬೆಂಗಳೂರಿನ ಹೊರವಲಯದಲ್ಲಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಲೂರು ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ ವಿಶೇಷ ಶಿಬಿರ ಆಯೋಜಿಸಿದೆ. ಏಷ್ಯಾ ಕಪ್‌ಗೆ ಆಯ್ಕೆಯಾಗಿರುವ ಎಲ್ಲ 18 ಆಟಗಾರರು ಈ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಆಟಗಾರರ ಫಿಟ್ನೆಸ್ ಆಧಾರದಲ್ಲಿ ಏಕದಿನ ವಿಶ್ವಕಪ್‌ಗೆ ಟೀಮ್ ಇಂಡಿಯಾ ಆಯ್ಕೆ ಮಾಡುವ ಸಾಧ್ಯತೆಗಳಿವೆ. ವಿರಾಟ್ ಕೊಹ್ಲಿ ಗುರುವಾರ ಬೆಂಗಳೂರಿಗೆ ಆಗಮಿಸಿದ್ದು, ಫಿಟ್ನೆಸ್ ಟೆಸ್ಟ್‌ಗೆ ಒಳಗಾಗಿದ್ದಾರೆ.

ಕೆರಿಬಿಯನ್ ಪ್ರವಾಸದಲ್ಲಿ ಟಿ20 ಸರಣಿಯಲ್ಲಿ ಭಾಗವಹಿಸದ ತಂಡದ ಹಿರಿಯ ಆಟಗಾರರಿಗೆ ಕಳೆದ ಎರಡು ವಾರಗಳಲ್ಲಿ ವೈಯಕ್ತಿಕ ಫಿಟ್ನೆಸ್ ಮತ್ತು ಡಯಟ್ ಪ್ಲಾನ್‌ಗಳನ್ನು ನೀಡಲಾಗಿತ್ತು ಎನ್ನಲಾಗಿದೆ. ಈಗಾಗಲೆ ಆಲ್ರೌಂಡರ್ ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ ಸೇರಿ ಇತರ ಆಟಗಾರರು ಶಿಬಿರದಲ್ಲಿದ್ದು, ಐರ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾದ ಭಾಗವಾಗಿದ್ದ ವೇಗಿ ಜಸ್‌ಪ್ರೀತ್ ಬುಮ್ರಾ, ಪ್ರಸಿದ್ಧ ಕೃಷ್ಣ, ತಿಲಕ್ ವರ್ಮ, ಸಂಜು ಸ್ಯಾಮ್ಸನ್ ಶುಕ್ರವಾರ ಶಿಬಿರವನ್ನು ಸೇರುವ ಸಾಧ್ಯತೆಗಳಿವೆ. ಇನ್ನೂ ಗಾಯದಿಂದ ಚೇತರಿಸಿಕೊಂಡಿರುವ ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಸಹ ಶಿಬಿರದ ಭಾಗವಾಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net