

Virat Kohli : ಐಪಿಎಲ್ 2025ರ ಸೀಸನ್ಗೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ಅಭಿಮಾನಿಗಳ ಬಳಿ ಒಂದು ಮನವಿ ಮಾಡಿಕೊಂಡಿದ್ದಾರೆ.
ಪ್ರತಿವರ್ಷದಂತೆ ಈ ವರ್ಷವೂ ಆರ್‌ಸಿಬಿ ಅನ್ಬಾಕ್ಸ್ ಕಾರ್ಯಕ್ರಮ ನಡೆಯಿತು. ನಿನ್ನೆ (ಮಾರ್ಚ್ 17) ರಾತ್ರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ನಡೆದ ಅನ್‌ಬಾಕ್ಸಿಂಗ್ ಕಾರ್ಯಕ್ರಮದಲ್ಲಿ ತಮ್ಮ ತಂಡದ ಹೊಸ ನಾಯಕ ರಜತ್ ಪಾಟಿದಾರ್ ಅವರನ್ನು ಆಶೀರ್ವದಿಸುವಂತೆ ಕೊಹ್ಲಿ, ಅಭಿಮಾನಿಗಳಿಗೆ ಕರೆ ನೀಡಿದರು. ಪಾಟಿದಾರ್ ಅವರು ದೀರ್ಘಕಾಲದವರೆಗೆ ಆರ್‌ಸಿಬಿ ನಾಯಕನಾಗಿರುತ್ತೇನೆಂದು ಹೇಳಿದರು.
ಈ ಹಿಂದಿನ ಕೆಲವು ಸೀಸನ್ಗಳಲ್ಲಿ ಫಾಫ್ ಡುಪ್ಲೆಸಿಸ್ ಅವರು ಆರ್‌ಸಿಬಿಯನ್ನು ಮುನ್ನಡೆಸಿದರು. ಆದಾಗ್ಯೂ, ಆರ್‌ಸಿಬಿ ಅವರನ್ನು ಮೆಗಾ ಹರಾಜಿಗೂ ಮೊದಲು ತಂಡದಿಂದ ಬಿಡುಗಡೆ ಮಾಡಿತು. ಅಲ್ಲದೆ, ಹರಾಜಿನಲ್ಲೂ ಮತ್ತೆ ಖರೀದಿಸಲಿಲ್ಲ. ಹೀಗಾಗಿ ತಂಡಕ್ಕೆ ಹೊಸ ನಾಯಕನನ್ನು ಘೋಷಿಸುವ ಅನಿವಾರ್ಯತೆ ಎದುರಾಯಿತು. ಆರಂಭದಲ್ಲಿ ಕೊಹ್ಲಿ ಹೆಸರು ಮುಂಚೂಣಿಗೆ ಬಂತು. ಆದರೆ, ಅಂತಿಮವಾಗಿ ರಜತ್ ಪಾಟಿದಾರ್ ಅವರನ್ನು ತಮ್ಮ ತಂಡದ ನಾಯಕನನ್ನಾಗಿ ಆರ್‌ಸಿಬಿ ನೇಮಿಸಿತು.
ರಜತ್ ಪಾಟಿದಾರ್ ತುಂಬಾ ಪ್ರತಿಭಾನ್ವಿತ. ಅವರ ಹೆಗಲ ಮೇಲೆ ಬಹಳಷ್ಟು ಜವಾಬ್ದಾರಿ ಇದೆ. ಅವರು ದೀರ್ಘಕಾಲದವರೆಗೆ ತಂಡವನ್ನು ಮುನ್ನಡೆಸುತ್ತಾರೆ. ಅವರಿಗೆ ಸಾಧ್ಯವಾದಷ್ಟು ಪ್ರೀತಿ ನೀಡಿ. ಒಂದು ತಂಡವನ್ನು ಮುನ್ನಡೆಸಲು ಬೇಕಾದ ಸಾಕಷ್ಟು ಸಂಪನ್ಮೂಲ ಅವರ ಬಳಿ ಇದೆ ಎಂದು ಕೊಹ್ಲಿ ಅನ್‌ಬಾಕ್ಸಿಂಗ್ ಕಾರ್ಯಕ್ರಮದಲ್ಲಿ ಹೇಳಿದರು. ಬಳಿಕ ರಜತ್ ಅವರನ್ನು ಪ್ರೇಕ್ಷಕರಿಗೆ ಪರಿಚಯಿಸಿದರು.
ಐಪಿಎಲ್ ಆರಂಭವಾದಾಗಿನಿಂದ ಒಂದೇ ಒಂದು ಫ್ರಾಂಚೈಸ್ ಪರ ಆಡುತ್ತಿರುವ ಏಕೈಕ ಆಟಗಾರನೆಂದರೆ ವಿರಾಟ್ ಕೊಹ್ಲಿ. ಈ ಬಗ್ಗೆ ಮಾತನಾಡಿದ ಕೊಹ್ಲಿ, ಅಭಿಮಾನಿಗಳ ಪ್ರೀತಿಯಿಂದ ಇದೆಲ್ಲವೂ ಸಾಧ್ಯವಾಗಿದೆ ಎಂದರು. ಪ್ರತಿ ಸೀಸನ್ನ ಆರಂಭದಲ್ಲಿ ಅದೇ ಉತ್ಸಾಹವು ನಮ್ಮನ್ನು ತುಂಬಾ ಉತ್ಸುಕರನ್ನಾಗಿಸುತ್ತದೆ. ನಮ್ಮ ತಂಡದಲ್ಲಿ ಕೌಶಲ್ಯಗಳಿಗೆ ಯಾವುದೇ ಕೊರತೆಯಿಲ್ಲ ಮತ್ತು ಈ ತಂಡದೊಂದಿಗೆ ಆಡಲು ತುಂಬಾ ಉತ್ಸುಕರಾಗಿದ್ದೇನೆ ಎಂದು ಕೊಹ್ಲಿ ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ರಜತ್ ಪಾಟಿದಾರ್, ಆರ್‌ಸಿಬಿ ತಂಡವನ್ನು ಮುನ್ನಡೆಸುವುದು ದೊಡ್ಡ ಗೌರವ. ಕೊಹ್ಲಿ, ಡಿವಿಲಿಯರ್ಸ್ ಮತ್ತು ಕ್ರಿಸ್ ಗೇಲ್‌ರಂತಹ ದಂತಕಥೆಯ ಆಟಗಾರರು ಪ್ರತಿನಿಧಿಸುವ ತಂಡವನ್ನು ಮುನ್ನಡೆಸುವುದು ತುಂಬಾ ಸಂತೋಷ ತಂದಿದೆ ಎಂದರು. ಬಾಲ್ಯದಿಂದಲೂ ಆರ್‌ಸಿಬಿಯನ್ನು ಪ್ರೀತಿಸುತ್ತಿದ್ದೇನೆ. ಈ ದಿಗ್ಗಜರ ಆಟವನ್ನು ನೋಡುತ್ತಾ ಬೆಳೆದಿದ್ದೇನೆ. ನಾಯಕತ್ವದ ಜವಾಬ್ದಾರಿಗಳನ್ನು ಚೆನ್ನಾಗಿ ಪೂರೈಸುತ್ತೇನೆ ಎಂದು ರಜತ್ ಹೇಳಿದರು.
ವಿಶ್ವದ ಶ್ರೀಮಂತ ಟಿ20 ಲೀಗ್ ಎನಿಸಿರುವ ಐಪಿಎಲ್ 18ನೇ ಆವೃತ್ತಿಗೆ ಕ್ಷಣಗಣನೆ ಶುರುವಾಗಿದೆ. ಮಾರ್ಚ್ 22ರಂದು ಹಾಲಿ ಚಾಂಪಿಯನ್ ಕೆಕೆಆರ್ ಮತ್ತು ಆರ್‌ಸಿಬಿ ತಂಡಗಳ ಮುಖಾಮುಖಿಯೊಂದಿಗೆ ಐಪಿಎಲ್ ಹಬ್ಬಕ್ಕೆ ಚಾಲನೆ ಸಿಗಲಿದೆ. ಮೇ 25ಕ್ಕೆ ಫೈನಲ್ ಪಂದ್ಯದೊಂದಿಗೆ 18ನೇ ಆವೃತ್ತಿ ಮುಕ್ತಾಯವಾಗಲಿದೆ. (ಏಜೆನ್ಸೀಸ್)