

ಚೆನ್ನೈ: ಇಲ್ಲಿನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ಬಾಂಗ್ಲಾದೇಶ ವಿರುದ್ಧ ಟೀಮ್ ಇಂಡಿಯಾ 280 ರನ್ಗಳ ಜಯ ಸಾಧಿಸಿದ್ದು ಗೊತ್ತೇ ಇದೆ. 515 ರನ್ಗಳ ಗುರಿಯೊಂದಿಗೆ ಕಣಕ್ಕೆ ಇಳಿದ ಬಾಂಗ್ಲಾ ಪಡೆಗೆ ರವಿಚಂದ್ರನ್ ಅಶ್ವಿನ್ ತಮ್ಮ ಸ್ಪಿನ್ ಮ್ಯಾಜಿಕ್ನಿಂದ ಪೆಟ್ಟು ನೀಡಿದರು. ಮೊದಲ ಇನ್ನಿಂಗ್ಸ್ನಲ್ಲಿ ಶತಕ ಸಿಡಿಸಿ, ಬ್ಯಾಟಿಂಗ್ನಲ್ಲಿ ಕಮಾಲ್ ಮಾಡಿದ್ದ ಈ ಅನುಭವಿ ಆಟಗಾರ ಎರಡನೇ ಇನ್ನಿಂಗ್ಸ್ನಲ್ಲಿ ಬೌಲಿಂಗ್ನಲ್ಲಿ ಜಾದೂ ಮಾಡಿದರು. ಈ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಅಕ್ಷರಶಃ ಮಿಂಚಿದರು. ಅಲ್ಲದೆ, ತಮ್ಮ ಹೆಸರಿನಲ್ಲಿ ಹಲವು ದಾಖಲೆಗಳನ್ನು ಅಶ್ವಿನ್ ಬರೆದುಕೊಂಡರು. ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾದ ರನ್ ಮೆಷಿನ್ ವಿರಾಟ್ ಕೊಹ್ಲಿ, ಅಶ್ವಿನ್ ಆಟಕ್ಕೆ ತಲೆಬಾಗಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಾಂಗ್ಲಾದೇಶದ ವಿರುದ್ಧ ಬೃಹತ್ ಜಯ ಸಾಧಿಸುವಲ್ಲಿ ಅಶ್ವಿನ್ ಪ್ರಮುಖ ಪಾತ್ರ ವಹಿಸಿದರು. ಮೊದಲ ಇನ್ನಿಂಗ್ಸ್ನಲ್ಲಿ 144 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ಭಾರತ ತಂಡ ಸಂಕಷ್ಟಕ್ಕೆ ಸಿಲುಕಿದ್ದಾಗ ರವೀಂದ್ರ ಜಡೇಜಾ ಜತೆಗೂಡಿ ಅಶ್ವಿನ್ ಸೂಪರ್ ಶತಕ ಸಿಡಿಸಿದರು. ಎರಡನೇ ಇನ್ನಿಂಗ್ಸ್ನಲ್ಲಿ ತಮ್ಮ ಸ್ಪಿನ್ ಜಾದೂವಿನಿಂದ ಬಾಂಗ್ಲಾ ಇನ್ನಿಂಗ್ಸ್ ಕಟ್ಟಿಹಾಕಿದರು. ಬರೋಬ್ಬರಿ 6 ವಿಕೆಟ್ಗಳನ್ನು ಕಬಳಿಸಿ ಭಾರತಕ್ಕೆ ಭರ್ಜರಿ ಜಯ ತಂದುಕೊಟ್ಟರು. ಈ ಮೂಲಕ ಅಶ್ವಿನ್ ತಮ್ಮ ವೃತ್ತಿಜೀವನದಲ್ಲಿ 37ನೇ ಬಾರಿಗೆ 5 ವಿಕೆಟ್ ಸಾಧನೆ ಮಾಡಿದರು. ಅಲ್ಲದೆ, ವಿಶ್ವ ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದ ಎರಡನೇ ಬೌಲರ್ ಆಗಿರುವ ಆಸೀಸ್ ದಂತಕಥೆ ಶೇನ್ ವಾರ್ನ್ ಅವರೊಂದಿಗೆ ಜಂಟಿಯಾಗಿ ಎರಡನೇ ಸ್ಥಾನ ಹಂಚಿಕೊಂಡರು. ಇವರಿಗಿಂತ ಮೊದಲು ಮುತ್ತಯ್ಯ ಮುರಳೀಧರನ್ 67 ಬಾರಿ 5 ವಿಕೆಟ್ ಕಬಳಿಸಿದ್ದಾರೆ.
ಅಶ್ವಿನ್ ಅವರ ಆಟದಿಂದ ಪ್ರಭಾವಿತರಾದ ವಿರಾಟ್ ಕೊಹ್ಲಿ, ಕ್ರೀಡಾಂಗಣದಲ್ಲಿ ಅವರಿಗೆ ತೋರಿದ ಗೌರವ ಕ್ರೀಡಾಭಿಮಾನಿಗಳ ಮನಗೆದ್ದಿದೆ. ಅಶ್ವಿನ್ ಅವರ ಮುಂದೆ ಬಂದ ಕೊಹ್ಲಿ, ತನ್ನ ಎರಡೂ ಕೈಗಳನ್ನು ಮೇಲೆ ಎತ್ತಿ ತಲೆಬಾಗುವ ಮೂಲಕ ಅಶ್ವಿನ್ ಅವರಿಗೆ ವಿಶೇಷ ಗೌರವ ಸಲ್ಲಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೊಹ್ಲಿ ನಡೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ, ಟೀಮ್ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ 376 ರನ್ ಗಳಿಸಿತ್ತು. ಬಾಂಗ್ಲಾದೇಶ 149 ರನ್ಗಳಿಗೆ ಸರ್ವಪತನ ಕಂಡಿತು. ಆ ಬಳಿಕ ಭಾರತ ತಂಡ 287/4 ರನ್ಗಳಿಗೆ ಎರಡನೇ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇದರೊಂದಿಗೆ ಬಾಂಗ್ಲಾದೇಶಕ್ಕೆ 515 ರನ್ಗಳ ಬೃಹತ್ ಗುರಿ ನೀಡಿತು. ಈ ಬೃಹತ್ ಗುರಿಯೊಂದಿಗೆ ಕಣಕ್ಕೆ ಇಳಿದ ಬಾಂಗ್ಲಾ ಯಾವುದೇ ಹಂತದಲ್ಲೂ ಗುರಿಯತ್ತ ಸಾಗಲಿಲ್ಲ. ಟೀಮ್ ಇಂಡಿಯಾ ಬೌಲರ್ಗಳು ಬಾಂಗ್ಲಾ ಪಡೆಯನ್ನು ಕಟ್ಟಿಹಾಕಿದರು. 234 ರನ್ಗಳಿಗೆ ಆಲೌಟ್ ಆಗಿ 280 ರನ್ಗಳಿಂದ ಸೋತಿತು.
ಬಾಂಗ್ಲಾ ತಂಡದ ನಾಯಕ ಶಾಂಟೊ 82 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ರವಿಚಂದ್ರನ್ ಅಶ್ವಿನ್ 6 ವಿಕೆಟ್ ಹಾಗೂ ರವೀಂದ್ರ ಜಡೇಜಾ 3 ವಿಕೆಟ್ ಕಿತ್ತು ಬಾಂಗ್ಲಾ ತಂಡದ ಪತನಕ್ಕೆ ಕಾರಣರಾದರು. (ಏಜೆನ್ಸೀಸ್)