ಟೀಮ್​ ಇಂಡಿಯಾ ಆಟಗಾರರಿಂದ ಸ್ಯಾಂಡ್​ ಪೇಪರ್ ಬಳಕೆ ಆರೋಪ; ಗೆಸ್ಚರ್​ ಮೂಲಕವೇ ತಿರುಗೇಟು ನೀಡಿದ Virat Kohli

Virat Kohli
Published on

ಸಿಡ್ನಿ: ಸಿಡ್ನಿಯಲ್ಲಿ ನಡೆಯುತ್ತಿರುವ ಬಾರ್ಡರ್​-ಗವಾಸ್ಕರ್​​ ಟ್ರೋಫಿ ಟೆಸ್ಟ್​ ಸರಣಿಯ (Border Gavaskar Trophy Test Series) ಅಂತಿಮ ಪಂದ್ಯವು ರೋಚಕ ಘಟ್ಟ ತಲುಪಿದ್ದು, ಉಭಯ ತಂಡಗಳು ಗೆಲುವಿಗಾಗಿ ತೀವ್ರ ಪೈಪೋಟಿ ನಡೆಸುತ್ತಿವೆ. ಎರಡನೇ ಇನ್ನಿಂಗ್ಸ್​ ಆರಂಭಿಸಿರುವ ಆಸ್ಟ್ರೇಲಿಯಾ ತಂಡವು 116 ರನ್​ಗಳಿಗೆ 4ವಿಕೆಟ್ ಕಳೆದುಕೊಂಡಿದ್ದು, ಭಾರತೀಯ ಬೌಲರ್​ಗಳು ಎದುರಾಳಿಗಳ ವಿರುದ್ಧ ಕೊಂಚ ಹಿಡಿತ ಸಾಧಿಸಿರುವ ನಡುವೆಯೇ ಟೀಮ್​ ಇಂಡಿಯಾ ಮೇಲೆ ಗಂಭೀರ ಆರೋಪ ಒಂದು ಕೇಳಿ ಬಂದಿದೆ.

ಎರಡನೇ ಇನ್ನಿಂಗ್ಸ್​ ಆರಂಭಿಸಿದ ಆಸ್ಟ್ರೇಲಿಯಾಗೆ ಆರಂಭದಲ್ಲೇ ಆಘಾತ ನೀಡಿದ ಭಾರತ ಬೌಲರ್​ಗಳು ಅಪಾಯಕಾರಿ ಎನಿಸಿದ್ದ ಮೂವರು ಬ್ಯಾಟ್ಸ್​ಮನ್​ಗಳ ವಿಕೆಟ್​ಗಳನ್ನು ಬೇಗನೆ ತೆಗೆದರು. ಇತ್ತ ಭಾರತದ ಬೌಲರ್​ಗಳು ಬೇಗನೆ ವಿಕೆಟ್​ ತೆಗೆಯುತ್ತಿದ್ದಂತೆ ಅತ್ತ ಆಸ್ಟ್ರೇಲಿಯಾದ ಅಭಿಮಾನಿಗಳು ಟೀಮ್​ ಇಂಡಿಯಾದ ಆಟಗಾರರು ಸ್ಯಾಂಡ್​ ಪೇಪರ್​ ಬಳಸುತ್ತಿದ್ದಾರೆ ಎಂಬ ಗಂಭೀರ ಆರೋಪ ಒಂದನ್ನು ಮಾಡಿದ್ದು, ಇದಕ್ಕೆ ಹಂಗಾಮಿ ನಾಯಕ ವಿರಾಟ್​ ಕೊಹ್ಲಿ (Virat Kohli) ನೀಡಿರುವ ರಿಯಾಕ್ಷನ್​ ಸಖತ್​ ವೈರಲ್​ ಆಗುತ್ತಿದೆ.

ಆಸ್ಟ್ರೇಲಿಯಾದ ಫ್ಯಾನ್ಸ್​ ಆರೋಪ ಮಾಡುತ್ತಿದ್ದಂತೆ ತಕ್ಷಣವೇ ರಿಯಾಕ್ಟ್ ಮಾಡಿದ ಹಂಗಾಮಿ ನಾಯಕ ವಿರಾಟ್​ ಕೊಹ್ಲಿ (Virat Kohli), ತಮ್ಮ ಕಾಲಿ ಜೇಬನ್ನು ತೋರಿಸುವ ಮೂಲಕ ತಿರುಗೇಟು ನೀಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಭಾರತದ ಅಭಿಮಾನಿಗಳು ಹಿಂದಿನ ಘಟನೆಯನ್ನು ಉಲ್ಲೇಖಿಸುವ ಮೂಲಕ ಆಸ್ಟ್ರೇಲಿಯಾ ಫ್ಯಾನ್ಸ್​ಗೆ ತಿರುಗೇಟು ನೀಡಿದ್ದಾರೆ.

2018ರಲ್ಲಿ ಆಸ್ಟ್ರೇಲಿಯನ್ ಕ್ರಿಕೆಟಿಗರಾದ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ಕ್ಯಾಮರೂನ್ ಬ್ಯಾಂಕ್ರಾಫ್ಟ್ ಸ್ಯಾಂಡ್​ ಪೇಪರ್​ ಬಳಸಿ ನಿಷೇಧಕ್ಕೊಳಗಾಗುವ ಮೂಲಕ ವಿಶ್ವದಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಇದೀಗ ಟೀಮ್​ ಇಂಡಿಯಾ ಮೇಲೆ ಆಸ್ಟ್ರೇಲಿಯಾದ ಫ್ಯಾನ್ಸ್​ ಆರೋಪ ವ್ಯಾಪಕ ಖಂಡನೆಗೆ ಗುರಿಯಾಗಿದೆ.

ರೋಚಕ ಘಟ್ಟದತ್ತ ಸಿಡ್ನಿ ಟೆಸ್ಟ್

ಸಿಡ್ನಿ ಟೆಸ್ಟ್​ ಪಂದ್ಯವು ರೋಚಕ ಘಟ್ಟ ತಲುಪಿದ್ದು, ಮೂರನೇ ದಿನದಾಟಕ್ಕೆ ಮ್ಯಾಚ್​ ಮುಕ್ತಾಯವಾಗುವುದು ಬಹುತೇಕ ಖಾತ್ರಿಯಾಗಿದೆ. ಮೊದಲ ಇನ್ನಿಂಗ್ಸ್​ನಲ್ಲಿ ರನ್​ ಗಳಿಸಲು ಪರದಾಡಿದ್ದ ಭಾರತ ತಂಡವು (Team India) ಎರಡನೇ ಇನ್ನಿಂಗ್ಸ್​ನಲ್ಲಿ ಆಕ್ರಮಣಕಾರಿ ಆಟಕ್ಕೆ ಹೆಚ್ಚು ಒತ್ತು ನೀಡಿತ್ತು. ಪ್ರಸ್ತುತ ಆಸ್ಟ್ರೇಲಿಯಾ ತಂಡವು ಬ್ಯಾಟಿಂಗ್ ಮಾಡುತ್ತಿದ್ದು, 4 ವಿಕೆಟ್​ ನಷ್ಟಕ್ಕೆ 116 ರನ್​ಗಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net