

ನವದೆಹಲಿ: ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ್ದು, ಪ್ರವಾಸಿ ತಂಡಕ್ಕೆ ಶಾಕ್ ನೀಡಿದ್ದಾರೆ. ಎದುರಾಳಿಗಳ ವಿರುದ್ಧ ಆಲ್ರೌಂಡ್ ಪ್ರದರ್ಶನ ತೋರಿದ ಭಾರತ ತಂಡವು ಸರಣಿಯ ಮೊದಲ ಪಂದ್ಯದಲ್ಲಿ ಜಯ ಕಂಡಿದ್ದು, ಅಕ್ಟೋಬರ್ 01ರಿಂದ ಕಾನ್ಪುರದಲ್ಲಿ ಆರಂಭವಾಗಲಿರುವ ಎರಡನೇ ಪಂದ್ಯದಲ್ಲಿ ಗೆದ್ದು ಸರಣಿಯನ್ನು ವಶಪಡಿಸಿಕೊಳ್ಳುವ ಇರಾದೆಯಲ್ಲಿದೆ.
ಬಾಂಗ್ಲಾ ವಿರುದ್ಧ ಸರಣಿಯಲ್ಲಿ ರನ್ ಹೊಳೆ ಹರಿಸುವ ನಿರೀಕ್ಷೆಯನ್ನು ಹುಸಿಯಾಗಿಸಿರುವ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅಭಿಮಾನಿಗಳ ನಿರೀಕ್ಷೆಯನ್ನು ಹುಸಿಯಾಗಿಸಿದಲ್ಲದೆ ಮತ್ತೊಂದು ಕಾರಣಕ್ಕೆ ಸುದ್ದಿಯಾಗಿದ್ದಾರೆ. ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡುವಾಗ ಔಟಿಲ್ಲದಿದ್ದರೂ ಡಿಆರ್ಎಸ್ ತೆಗೆದುಕೊಳ್ಳದೆ ಪೆವಿಲಿಯನ್ ಸೇರಿದ್ದ ವಿರಾಟ್ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದ್ದು, ಈ ಬಗ್ಗೆ ಮಾಜಿ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್ ಮಾತನಾಡಿದ್ದಾರೆ.
ಆತ ತವರಿನಲ್ಲಿ ಆಟವನ್ನು ಅನುಭವಿಸುತ್ತಿಲ್ಲ ಎಂಬುದು ನನ್ನ ಅಭಿಪ್ರಾಯ. ಆತ ಒಂದು ರೀತಿ ಸಚಿನ್ ತೆಂಡೂಲಕರ್ ಇದ್ದಂತೆ. ತವರು ಸರಣಿಗಳಲ್ಲಿ ಹೆಚ್ಚು ರನ್ ಗಳಿಸದೆ ವಿದೇಶ ಪ್ರವಾಸದಲ್ಲಿ ಆರ್ಭಟಿಸುತ್ತಾನೆ. ಆತ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಆತ ಆಟವಾಡಿದ ರೀತಿ ಮಾತ್ರ ಅದ್ಭುತವಾಗಿತ್ತು. ಇದು ಕೂಡ ಉತ್ತಮ ಬೆಳವಣಿಗೆಯಾಗಿದ್ದು, ತಂಡಕ್ಕೆ ಸಹಕಾರಿಯಾಗುತ್ತದೆ.
ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡುವ ವೇಳೆ ಔಟಿಲ್ಲದಿದ್ದರೂ ವಿರಾಟ್ ಪೆವಿಲಿಯನ್ಗೆ ಹೋಗಿದ್ದು ನೋಡಿ ನನಗೆ ಬೇಸರವಾಯಿತು. ಒಂದು ಕಡೆ ಗಿಲ್ ಡಿಆರ್ಎಸ್ ತೆಗೆದುಕೊಳ್ಳುವಂತೆ ಸೂಚಿಸುತ್ತಿದ್ದರು ವಿರಾಟ್ ಔಟಾಗಿದ್ದೇನೆ ಎಂದು ಭಾವಿಸಿ ಮೈದಾನದಿಂದ ಹೊರನಡೆದರು. ಆ ಬಳಿಕ ಅದು ನಾಟ್ಔಟ್ ಎಂದು ತಿಳಿದು ನನಗೆ ಅಯ್ಯೋ ಪಾಪ ಎನಿಸಿತು ಎಂದು ಟೀಮ್ ಇಂಡಿಯಾ ಮಾಜಿ ಆಟಗಾರ ಸಂಜಯ್ ಮಾಂಜ್ರೇಕರ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.