ಅಯ್ಯೋ ಏನಾಯ್ತು ಕೊಹ್ಲಿಗೆ? ಇಂದು ಪಾಕ್​ ವಿರುದ್ಧ ಹೈವೋಲ್ಟೇಜ್​ ಪಂದ್ಯದಲ್ಲಿ ಆಡ್ತಾರಾ ರನ್​ ಮೆಷಿನ್​? Virat Kohli

Virat Kohli
Published on

Virat Kohli : ಸದ್ಯ ಎಲ್ಲೆಡೆ ಚಾಂಪಿಯನ್ಸ್ ಟ್ರೋಫಿಯದ್ದೇ ಸದ್ದು. ಮಿನಿ ವಿಶ್ವಕಪ್​ ಎಂದೇ ಖ್ಯಾತಿ ಪಡೆದಿರುವ ಚಾಂಪಿಯನ್ಸ್​ ಟ್ರೋಫಿಯನ್ನು ಈ ಬಾರಿ ಪಾಕಿಸ್ತಾನ ಆಯೋಜಿಸಿದೆ. ಈ ಮೆಗಾ ಟೂರ್ನಿಯಲ್ಲಿ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಎದುರು ನೋಡುತ್ತಿರುವ ಆ ಕ್ಷಣ ಬಂದೇ ಬಿಟ್ಟಿದೆ. ಇಂದು (ಫೆ.23) ಮಧ್ಯಾಹ್ನ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವೆ ಹೈವೋಲ್ಟೇಜ್​ ಪಂದ್ಯ ನಡೆಯಲಿದ್ದು, ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಸೆಕೆಂಡ್​ಗಳ ಲೆಕ್ಕ ಹಾಕುತ್ತಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ಪಂದ್ಯ ಅಂದರೆ ಯಾವಾಗಲೂ ಕ್ರಿಕೆಟ್ ಅಭಿಮಾನಿಗಳಿಗೆ ತುಂಬಾ ಉತ್ಸಾಹ ಇರುತ್ತದೆ. ಇಂದು ಮಧ್ಯಾಹ್ನ ದುಬೈನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್​ ಇಂಡಿಯಾದ ಇಬ್ಬರು ಆಟಗಾರರು ಆಡುತ್ತಾರೆಯೇ ಎಂಬುದೇ ಅನುಮಾನವಾಗಿದೆ. ಹೌದು, ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್ ವಿಚಾರದಲ್ಲಿ ಈ ಪ್ರಶ್ನೆ ಕೇಳಿಬರುತ್ತಿದೆ. ಒಂದು ವೇಳೆ ಈ ಇಬ್ಬರು ಆಟಗಾರರೂ ಆಡದಿದ್ದರೆ ಅದು ತಂಡಕ್ಕೆ ದೊಡ್ಡ ಆಘಾತವಾಗಲಿದೆ.

ಕಿಂಗ್ ಕೊಹ್ಲಿ ಅಂತಿಮ ತಂಡದಲ್ಲಿ ಪ್ರಮುಖ ಆಟಗಾರನೆಂಬುದು ಎಲ್ಲರಿಗೂ ತಿಳಿದೇ ಇದೆ. ಕೊಹ್ಲಿ ಫಾರ್ಮ್‌ನಲ್ಲಿದ್ದರೂ ಇಲ್ಲದಿದ್ದರೂ, ಅವರು ತಂಡದಲ್ಲಿದ್ದರೆ ಅದೊಂದು ಬಲ ಎಂದೇ ಹೇಳಬಹುದು. ಕೊಹ್ಲಿ ಇದಾರೆ ಅಂದ್ರೆ ಸಾಕು ಯಾವುದೇ ಎದುರಾಳಿ ಆಟಗಾರ ಸ್ವಲ್ಪ ಜಾಗರೂಕರಾಗಿರುತ್ತಾರೆ. ಏಕೆಂದರೆ, ರನ್​ ಮೆಷಿನ್​ ಕೊಹ್ಲಿ ಆರ್ಭಟ ಆ ರೀತಿ ಇರುತ್ತೆ. ದಾಖಲೆಗಳ ಸರದಾರನಾಗಿರುವ ವಿರಾಟ್ ಕೊಹ್ಲಿ ಇಂದು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಡುತ್ತಾರೋ ಇಲ್ಲವೋ ಎಂಬುದು ಅನುಮಾನವಾಗಿದೆ. ಏಕೆಂದರೆ, ಅಭ್ಯಾಸದ ಸಮಯದಲ್ಲಿ ಕೊಹ್ಲಿ ಕಾಲಿಗೆ ಗಾಯವಾಗಿರುವುದು ಕಂಡುಬಂದಿದೆ.

ಕೊಹ್ಲಿ ಅವರು ಐಸ್ ಪ್ಯಾಕ್ ಹಿಡಿದು ದೀರ್ಘಕಾಲ ಕುಳಿತಿದ್ದರು. ಹೀಗಾಗಿ ಈ ಅನುಮಾನಗಳು ಹುಟ್ಟಿಕೊಂಡಿವೆ. ಆದರೆ, ಬಿಸಿಸಿಐ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಆದ್ದರಿಂದ ಕೊಹ್ಲಿ ಅವರು ಇಂದಿನ ಪಂದ್ಯದಲ್ಲಿ ಆಡಲಿದ್ದಾರೆಂದು ಎಲ್ಲರು ಭಾವಿಸಿದ್ದಾರೆ. ಆದರೂ, ಕೊಹ್ಲಿ ಆಡುತ್ತಾರಾ? ಇಲ್ಲವಾ? ಎಂಬುದು ಅನುಮಾನಾಸ್ಪದವಾಗಿದೆ.

ಇನ್ನು ವಿಕೆಟ್ ಕೀಪರ್ ರಿಷಭ್ ಪಂತ್ ವಿಷಯಕ್ಕೆ ಬಂದರೆ, ಅವರು ತೀವ್ರ ಜ್ವರದಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ಇದನ್ನು ಶುಭಮನ್ ಗಿಲ್ ಬಹಿರಂಗಪಡಿಸಿದ್ದಾರೆ. ವೈರಲ್ ಜ್ವರದಿಂದಾಗಿ ಪಂತ್ ಅಭ್ಯಾಸ ಅವಧಿಗೆ ಬಂದಿಲ್ಲ ಎಂದು ಹೇಳಿದರು. ಬಿಸಿಸಿಐ ಅವರಿಗೆ ಚಿಕಿತ್ಸೆ ನೀಡುತ್ತಿದೆ ಮತ್ತು ಅವರನ್ನು ನೋಡಿಕೊಳ್ಳುತ್ತಿದೆ ಎಂದು ಗಿಲ್​ ತಿಳಿಸಿದ್ದಾರೆ.

ಪಂದ್ಯದ ವೇಳೆಗೆ ಪಂತ್ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಆದಾಗ್ಯೂ, ಪಂತ್ ತಂಡದಲ್ಲಿ ಇಲ್ಲದಿದ್ದರೂ ದೊಡ್ಡ ಸಮಸ್ಯೆಯೇನು ಇಲ್ಲ. ಆದರೆ, ವಿರಾಟ್ ಕೊಹ್ಲಿ ಆಡದಿದ್ದರೆ, ಪಾಕಿಸ್ತಾನ ತಂಡವು ಟೀಮ್ ಇಂಡಿಯಾ ವಿರುದ್ಧ ಗೆಲ್ಲುವ ಸಾಧ್ಯತೆ ಇದೆ ಎಂದು ಕ್ರಿಕೆಟ್ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net