ವಿರಾಟ್​ ಕೊಹ್ಲಿ ಏನಾದ್ರೂ ಪಾಕಿಸ್ತಾನಕ್ಕೆ ಬಂದ್ರೆ… ಶಾಕಿಂಗ್​ ಹೇಳಿಕೆ ನೀಡಿದ ಶಾಹಿದ್​ ಅಫ್ರಿದಿ

Virat Kohli
Published on

ನವದೆಹಲಿ: ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರ ಅಭಿಮಾನಿ ಬಳಗ ಮತ್ತು ಕ್ರೇಜ್ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ. ಅವರ ಅತ್ಯುತ್ತಮ ಬ್ಯಾಟಿಂಗ್, ಅಮೋಘ ಫೀಲ್ಡಿಂಗ್ ಮತ್ತು ಆಕ್ರಮಣಕಾರಿ ಮನೋಭಾವದಿಂದ ಅವರು ಲಕ್ಷಾಂತರ ಮಂದಿಯ ನೆಚ್ಚಿನ ಕ್ರಿಕೆಟಿಗರಾಗಿದ್ದಾರೆ.

ಕ್ರಿಕೆಟ್ ನೋಡುವ ಪ್ರೇಕ್ಷಕರಿಗೆ ಕೊಹ್ಲಿ ಆರಾಧ್ಯ ದೈವವಾಗಿದ್ದಾರೆ. ಕಿಂಗ್ ಕೊಹ್ಲಿಗೆ ನೆರೆಯ ದೇಶ ಪಾಕಿಸ್ತಾನದಲ್ಲೂ ಅಪಾರ ಅಭಿಮಾನಿ ಬಳಗವಿದೆ. ಹಲವು ಬಾರಿ ಇದು ಸಾಬೀತಾಗಿದೆ. ಪಾಕಿಸ್ತಾನ ತಂಡ ಆಡುವ ಪಂದ್ಯಗಳ ವೇಳೆ ಹಾಗೂ ಪಿಎಸ್‌ಎಲ್‌ ವೇಳೆ ಕ್ರೀಡಾಂಗಣದಲ್ಲಿ ಅಭಿಮಾನಿಗಳು ಕೊಹ್ಲಿ ಫೋಟೋ, ಬ್ಯಾನರ್‌ಗಳನ್ನು ಹಿಡಿದು ಘೋಷಣೆ ಕೂಗುವುದನ್ನು ನೋಡಿದ್ದೇವೆ. ಅಲ್ಲದೆ, ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಕೊಹ್ಲಿಯನ್ನು ಅತಿಯಾಗಿ ಹೊಗಳುವುದನ್ನು ನಾವು ನೋಡಿದ್ದೇವೆ.

ಇತ್ತೀಚೆಗೆ ಮತ್ತೊಬ್ಬ ಪಾಕಿಸ್ತಾನಿ ಮಾಜಿ ಕ್ರಿಕೆಟಿಗ ಕೊಹ್ಲಿಯನ್ನು ಹೊಗಳಿದ್ದಾರೆ. ಅಲ್ಲದೆ, ತಮ್ಮ ದೇಶಕ್ಕೆ ಕೊಹ್ಲಿಯನ್ನು ಆಹ್ವಾನಿಸಿದ್ದಾರೆ. ಕೊಹ್ಲಿಯನ್ನು ಕೊಂಡಾಡಿರುವ ಆ ಆಟಗಾರ ಬೇರೆ ಯಾರು ಅಲ್ಲ, ಅವರೇ ಲೆಜೆಂಡರಿ ಆಲ್‌ರೌಂಡರ್ ಶಾಹಿದ್ ಅಫ್ರಿದಿ. ಕೊಹ್ಲಿ ಓರ್ವ ಶ್ರೇಷ್ಠ ಬ್ಯಾಟ್ಸ್‌ಮನ್ ಎಂದು ಹೊಗಳಿದ್ದಾರೆ. ಪಾಕಿಸ್ತಾನದಲ್ಲಿ ವಿರಾಟ್‌ಗೆ ಅಪಾರ ಅಭಿಮಾನಿ ಬಳಗವಿದೆ. ಅವರು ಖಂಡಿತವಾಗಿಯೂ ನಮ್ಮ ದೇಶಕ್ಕೆ ಬರಲು ಬಯಸುತ್ತಾರೆ. ಪಾಕಿಸ್ತಾನಕ್ಕೆ ಬಂದರೆ ಆತಿಥ್ಯ ಹೇಗಿರುತ್ತದೆ ಎಂಬುದನ್ನು ತೋರಿಸುತ್ತೇವೆ ಎಂದು ಅಫ್ರಿದಿ ಹೇಳಿದ್ದಾರೆ.

ನಾವು ನೀಡುವ ಆತಿಥ್ಯದಿಂದ ಭಾರತದ ಆತಿಥ್ಯವನ್ನೇ ಕೊಹ್ಲಿ ಮರೆಯಬೇಕು. ಅಷ್ಟರಮಟ್ಟಿಗೆ ನಾವು ಅವರನ್ನು ನೋಡಿಕೊಳ್ಳುತ್ತೇವೆ. ವಿರಾಟ್ ಯಾವಾಗ ಪಾಕಿಸ್ತಾನಕ್ಕೆ ಬರುತ್ತಾರೆ ಅಂತ ಇಲ್ಲಿನ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ ಮತ್ತು ಕಾಯುತ್ತಿರುವವರಲ್ಲಿ ನಾನು ಇದ್ದೇನೆ ಎಂದು ಅಫ್ರಿದಿ ಮುಕ್ತವಾಗಿ ಹೇಳಿಕೊಂಡಿದ್ದಾರೆ.

ಅಂದಹಾಗೆ ಮುಂದಿನ ವರ್ಷ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಆದರೆ, ಭದ್ರತಾ ಕಾರಣಗಳಿಂದ ಹಾಗೂ ರಾಜತಾಂತ್ರಿಕ ಕಾರಣಗಳಿಂದ ಆ ದೇಶಕ್ಕೆ ಟೀಮ್​ ಇಂಡಿಯಾವನ್ನು ಕಳುಹಿಸಲು ಬಿಸಿಸಿಐ ಹಿಂದೇಟು ಹಾಕಿದೆ. ಹೀಗಾಗಿ ಟೀಮ್​ ಇಂಡಿಯಾ ಆಡುವ ಪಂದ್ಯಗಳನ್ನು ದುಬೈ ಅಥವಾ ಶ್ರೀಲಂಕಾದಲ್ಲಿ ಹೈಬ್ರಿಡ್ ರೀತಿಯಲ್ಲಿ ಆಯೋಜಿಸಬೇಕು ಎಂದು ಐಸಿಸಿ ಬಳಿ ಬಿಸಿಸಿಐ ಮನವಿ ಮಾಡಿದೆ.

ಆದರೆ, ಭಾರತ ತಂಡವನ್ನು ಹೇಗಾದರೂ ಮಾಡಿ ಪಾಕಿಸ್ತಾನಕ್ಕೆ ಕರೆತರಬೇಕೆಂದು ಆ ದೇಶದ ಮಾಜಿ ಕ್ರಿಕೆಟಿಗರು ಬಯಸಿದ್ದಾರೆ. ಅದಕ್ಕಾಗಿಯೇ ಅಫ್ರಿದಿ ಇತ್ತೀಚೆಗೆ ಕೊಹ್ಲಿ ಮತ್ತು ಎಲ್ಲಾ ಭಾರತೀಯ ಆಟಗಾರರನ್ನು ಅಲ್ಲಿಗೆ ಬರುವಂತೆ ಆಹ್ವಾನಿಸಿದ್ದಾರೆ. ಆಟವನ್ನು ರಾಜಕೀಯದೊಂದಿಗೆ ಜೋಡಿಸಬೇಡಿ ಎಂದು ಕೇಳಿಕೊಂಡಿದ್ದಾರೆ. ಭಾರತ ತಂಡವನ್ನು ಗೌರವಿಸುತ್ತೇನೆ ಎಂದು ಹೇಳಿದ್ದಾರೆ. ಕೊಹ್ಲಿ ತಮ್ಮ ನೆಚ್ಚಿನ ಕ್ರಿಕೆಟಿಗ ಎಂದಿದ್ದಾರೆ. ನಾವು ನೀಡುವ ಅತಿಥಿ ಸತ್ಕಾರದಿಂದ ಕೊಹ್ಲಿ ತಮ್ಮದೇ ದೇಶವನ್ನು ಮರೆತುಬಿಡುತ್ತಾರೆ ಎಂದು ಅಫ್ರಿದಿ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net