

ಪುಣೆ: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ದ್ವಿಪಕ್ಷೀಯ ಹೋರಾಟದಲ್ಲಿ ಟೆಸ್ಟ್ ಹಾಗೂ ಟಿ20 ಸರಣಿ ಜಯಿಸಿರುವ ಭಾರತ ತಂಡ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದೆ. ಇದೀಗ ಉಭಯ ತಂಡಗಳ ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಹಣಾಹಣಿ ಮಂಗಳವಾರದಿಂದ ಆರಂಭವಾಗಲಿದೆ. 5 ಪಂದ್ಯಗಳ ಟಿ20 ಸರಣಿಯನ್ನು ಭಾರತ ತಂಡ 3-2 ರಿಂದ ಗೆದ್ದುಕೊಂಡಿತು. ಆದರೆ, ಆರಂಭಿಕ ನಾಲ್ಕು ಪಂದ್ಯಗಳಲ್ಲಿ ಆಡಿದರೂ ಕನ್ನಡಿಗ ಕೆಎಲ್ ರಾಹುಲ್ ಸಂಪೂರ್ಣ ವಿಲರಾಗಿದ್ದರು. ಇದಕ್ಕೆ ಕಡೇ ಪಂದ್ಯದಿಂದ ರಾಹುಲ್‌ಗೆ ಕೊಕ್ ನೀಡಲಾಗಿತ್ತು. ಇದೀಗ ಏಕದಿನ ಸರಣಿ ಆರಂಭಕ್ಕೂ ಮುನ್ನ ರಾಹುಲ್ ಆಯ್ಕೆ ಬಗ್ಗೆಯೇ ಹೆಚ್ಚು ಚರ್ಚೆ ನಡೆಯುತ್ತಿದೆ. ಇದಕ್ಕೆ ಉತ್ತರಿಸಿದ ನಾಯಕ ವಿರಾಟ್ ಕೊಹ್ಲಿ, ಬಾಲಿವುಡ್‌ನ ಪ್ರಸಿದ್ಧ ಹಾಡನ್ನು ಹಾಡುವ ಮೂಲಕ ಕನ್ನಡಿಗನನ್ನು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: ಅಂಪೈರ್ಸ್ ಕಾಲ್ ವಿರುದ್ಧ ಕೊಹ್ಲಿ ಗರಂ ಆಗಿದ್ದೇಕೆ..?
ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ರಾಹುಲ್ ಆಯ್ಕೆ ಕುರಿತು ಕೊಹ್ಲಿ ಸಮರ್ಥಿಸಿಕೊಂಡರು. ಬಾಲಿವುಡ್ ಗೀತೆ ಕುಚ್ ತೋ ಲೊಗ್ ಕಹೆಂಗೆ, ಲೊಗೊ ಕಾ ಕಾಮ್ ಹೈ ಕೆಹ್ನಾ, ಚೋಡೊ ಬೆಕಾರ್ ಕಿ ಬಾತೆ, ಮೇ ಕಹಿಂ ಬೀತ್ ನಾ ಜಾಯೆ ರೈನಾ (ಜನರು ಮತ್ತೊಬ್ಬರ ಬಗ್ಗೆ ಏನಾದರೂ ಹೇಳುತ್ತಾರೆ. ಏನಾದರೂ ಹೇಳುವುದೇ ಜನರ ಕೆಲಸ. ಇಂಥ ಅನುಪಯುಕ್ತ ವಿಷಯಗಳನ್ನು ಮರೆಯಬೇಕು) ಎಂದು ಹೇಳುವ ಮೂಲಕ ಕೊಹ್ಲಿ ಸಮರ್ಥಿಸಿಕೊಂಡರು. ಖ್ಯಾತ ನಟ ರಾಜೇಶ್ ಖನ್ನಾ ಅಭಿನಯದ ಬಾಲಿವುಡ್ ಚಿತ್ರ ‘ಅಮರ್ ಪ್ರೇಮ್’ ಚಿತ್ರದ ಹಾಡು ಇದಾಗಿದೆ.
ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯ ಆರಂಭಿಕ ನಾಲ್ಕು ಪಂದ್ಯಗಳಲ್ಲೂ ಆಡಿದ ರಾಹುಲ್ ಕ್ರಮವಾಗಿ 1,0,0 ಹಾಗೂ 14 ರನ್ ಪೇರಿಸಿದ್ದರು. ಕಡೇ ಟಿ20 ಪಂದ್ಯದಿಂದ ಕೈಬಿಡಲಾಗಿತ್ತು. ರಾಹುಲ್ ಅವರನ್ನು ಚಾಂಪಿಯನ್ ಆಟಗಾರ ಎಂದು ಬಣ್ಣಿಸಿರುವ ಕೊಹ್ಲಿ, ಏಕದಿನ ಕ್ರಿಕೆಟ್ ಸರಣಿಯಲ್ಲಿ ಪ್ರಮುಖ ಆಟಗಾರನಾಗಿರಲಿದ್ದಾರೆ ಎಂದು ಹೇಳಿಕೊಂಡಿದ್ದಾರೆ.