ಕೊಹ್ಲಿ ಸ್ಟ್ರೈಕ್​ ರೇಟ್​ ಬಗ್ಗೆ ಶಾಕಿಂಗ್​ ಹೇಳಿಕೆ ನೀಡಿದ ಗಂಭೀರ್​! ಗೌತಿಯಿಂದ ಇಂಥಾ ಮಾತು ನಿರೀಕ್ಷೆ ಮಾಡಿರಲಿಲ್ಲ

Kohli
Published on

ಅಹಮದಾಬಾದ್​: ಟೀಂ ಇಂಡಿಯಾದ ರನ್ ಮೆಷಿನ್, ಆರ್‌ಸಿಬಿಯ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಈ ಬಾರಿಯ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ತಂಡದ ಇತರ ಆಟಗಾರರು ವಿಫಲರಾದರು ಕೊಹ್ಲಿ ಮಾತ್ರ ಶತಕಗಳ ಮೇಲೆ ಶತಕ ಬಾರಿಸುತ್ತಿದ್ದಾರೆ. ಇಂದು ಗುಜರಾತ್​ ಟೈಟಾನ್ಸ್​ ವಿರುದ್ಧ ನಡೆದ ಪಂದ್ಯದಲ್ಲೂ ಕೊಹ್ಲಿ (70) ಅರ್ಧ ಶತಕ ಬಾರಿಸಿ ಅಜೇಯರಾಗಿ ಉಳಿದರು. ಆದರೂ ಕೊಹ್ಲಿ ನಿಧಾನಗತಿಯ ಬ್ಯಾಟಿಂಗ್ ಭಾರಿ ಚರ್ಚೆಗೀಡಾಗುತ್ತಿದೆ. ಇದೀಗ ಕೋಲ್ಕತ ನೈಟ್​ ರೈಡರ್ಸ್​ ತಂಡದ ಮೆಂಟರ್​ ಗೌತಮ್ ಗಂಭೀರ್, ಕೊಹ್ಲಿ ಸ್ಟ್ರೈಕ್ ರೇಟ್ ಬಗ್ಗೆ ಕುತೂಹಲಕಾರಿ ಕಾಮೆಂಟ್ ಮಾಡಿದ್ದಾರೆ. ಗಂಭೀರ್ ಈ ರೀತಿ ಹೇಳುತ್ತಾರೆ ಎಂದು ಬಹುಶಃ ಯಾರೂ ನಿರೀಕ್ಷಿಸಿರಲಿಲ್ಲ.

ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ನಡುವೆ ಎಲ್ಲವೂ ಸರಿಯಿಲ್ಲ ಎಂಬುದನ್ನು ಈ ಜೋಡಿ ಆಗಾಗ ಜಗಳವಾಡುವ ಮೂಲಕ ನಿರೂಪಿಸಿದ್ದರು. ಆದರೆ ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ಇವೆಲ್ಲವೂ ಸುಳ್ಳು ಸುದ್ದಿ ಎಂದು ಗೌತಮ್ ಗಂಭೀರ್ ಸ್ಪಷ್ಟಪಡಿಸಿದ್ದಾರೆ. ಇದರ ನಡುವೆ ಈ ಬಾರಿಯ ಐಪಿಎಲ್ ಸೀಸನ್​ನಲ್ಲಿ ಕೊಹ್ಲಿ ಸ್ಟ್ರೈಕ್ ರೇಟ್ ಬಗ್ಗೆ ಗಂಭೀರವಾಗಿ ಚರ್ಚೆಯಾಗುತ್ತಿರುವುದು ಗೊತ್ತೇ ಇದೆ. ಟೀಮ್​ ಇಂಡಿಯಾದ ಯುವ ಆಟಗಾರರಿಗಿಂತ ಕಡಿಮೆ ಸ್ಟ್ರೈಕ್ ರೇಟ್​ನಲ್ಲಿ ವಿರಾಟ್ ಬ್ಯಾಟಿಂಗ್ ಮಾಡಿದ್ದನ್ನು ನೆಟ್ಟಿಗರು ಟೀಕಿಸುತ್ತಿದ್ದಾರೆ. ಇದೀಗ ಕೊಹ್ಲಿ ಸ್ಟ್ರೈಕ್ ರೇಟ್ ಬಗ್ಗೆ ಮಾತನಾಡುವವರಿಗೆಲ್ಲ ಗೌತಮ್ ಗಂಭೀರ್ ಉತ್ತರ ನೀಡಿದ್ದಾರೆ.

ವಿರಾಟ್ ಕೊಹ್ಲಿ ಸ್ಟ್ರೈಕ್​​ರೇಟ್ ಕುರಿತು ಮಾತನಾಡಿದ ಗಂಭೀರ್, ತಂಡದಲ್ಲಿ 11 ಆಟಗಾರರು ಒಂದೇ ರೀತಿಯ ಆಟದ ಶೈಲಿಯನ್ನು ಹೊಂದಿಲ್ಲ. ಪ್ರತಿಯೊಬ್ಬರ ಆಟವು ವಿಭಿನ್ನವಾಗಿರುತ್ತದೆ. ಕೊಹ್ಲಿ ಅವರು ಮ್ಯಾಕ್ಸ್‌ವೆಲ್‌ನಂತೆ ಆಡದಿರಬಹುದು, ಕೊಹ್ಲಿಯ ಹೊಡೆತಗಳು ಮ್ಯಾಕ್ಸಿಯಷ್ಟು ಉತ್ತಮವಾಗಿಲ್ಲದಿರಬಹುದು. ಆದರೆ, ತಂಡ ಸೋತರೂ 100 ಸ್ಟ್ರೈಕ್ ರೇಟ್ ಉತ್ತಮವಾಗಿದೆ. ಬ್ಯಾಟರ್‌ಗಳು ತಮ್ಮ ಸ್ಟ್ರೈಕ್ ರೇಟ್ ಅನ್ನು ಪರಿಸ್ಥಿತಿಗಳಿಗೆ ಅನುಗುಣವಾಗಿ ತಿರುಗಿಸುತ್ತಾರೆ ಎಂಬುದನ್ನು ಯಾರೂ ಮರೆಯಬಾರದು. ವಿರಾಟ್‌ನಂತಹ ದಿಗ್ಗಜ ಆಟಗಾರನನ್ನು ದೂಷಿಸುವುದು ಸಮಂಜಸವಲ್ಲ ಎಂದು ಗಂಭೀರ್​ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಈ ಸೀಸನ್​ನಲ್ಲಿ ಕೊಹ್ಲಿ 10 ಪಂದ್ಯಗಳಲ್ಲಿ 500 ರನ್ ಗಳಿಸಿದ್ದಾರೆ ಮತ್ತು ಅಗ್ರ ಸ್ಕೋರರ್ ಹಾಗೂ ಆರೆಂಜ್ ಕ್ಯಾಪ್ ಹೋಲ್ಡರ್ ಆಗಿ ಮುಂದುವರೆದಿದ್ದಾರೆ. ಸದಾ ಕೊಹ್ಲಿಯನ್ನು ದೂಷಿಸುತ್ತಿದ್ದ ಗಂಭೀರ್​ ಇದೀಗ ಕೊಹ್ಲಿ ಪರ ಬ್ಯಾಟ್​ ಬೀಸುತ್ತಿದ್ದಾರೆ. ಇದನ್ನು ಕೇಳಿದ ಅಭಿಮಾನಿಗಳು ಗಂಭೀರ್​ ಅವರಿಂದ ಇಂಥಾ ಮಾತು ನಿರೀಕ್ಷೆ ಮಾಡಿರಲಿಲ್ಲ ಎನ್ನುತ್ತಿದ್ದಾರೆ.

ಪಂದ್ಯದ ವಿಚಾರಕ್ಕೆ ಬರುವುದಾದರೆ, ಇಂದು ಗುಜರಾತಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 45ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್​ ಭಾರೀ ಅಂತರದಿಂದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಎದುರು ಹೀನಾಯ ಸೋಲು ಅನುಭವಿಸಿತು. ಮೊದಲು ಬ್ಯಾಟ್ ಮಾಡಿದ ಶುಭಮನ್ ಗಿಲ್ ಪಡೆ 20 ಓವರ್​ಗಳಲ್ಲಿ 201 ರನ್ ಕಲೆಹಾಕುವ ಮೂಲಕ ಆರ್​ಸಿಬಿಗೆ ಬೃಹತ್ ರನ್​ ಅನ್ನು ಚೇಸ್​ ಮಾಡುವಂತೆ ಸವಾಲು ಹಾಕಿತು. ಈ ಚಾಲೆಂಜ್ ಬೆನ್ನಟ್ಟಿದ ಆರ್​ಸಿಬಿ ವಿರಾಟ್​ ಕೊಹ್ಲಿ ಮತ್ತು ವಿಲ್​ ಜ್ಯಾಕ್ಸ್ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ 16ನೇ ಓವರ್​ಗೆ ಪಂದ್ಯವನ್ನು ವಶಪಡಿಸಿಕೊಂಡಿತು.

ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಆರ್​ಸಿಬಿ, ಗುಜರಾತ್​ ಟೈಟನ್ಸ್​ಗೆ ಬ್ಯಾಟಿಂಗ್ ಮಾಡುವಂತೆ ತಿಳಿಸಿತು. ಅದರಂತೆಯೇ ಸ್ಪೋಟಕ ಬ್ಯಾಟಿಂಗ್ ಮಾಡಿ, ತಂಡಕ್ಕೆ 200 ರನ್​ಗಳನ್ನು ಕಲೆಹಾಕಿತು. ಆರ್​ಸಿಬಿಗೆ ಈ ಬೃಹತ್ ಗುರಿಯನ್ನು ಚೇಸ್​ ಮಾಡುವಂತೆ ಸವಾಲು ಹಾಕಿತು. 201 ರನ್​ಗಳನ್ನು ಬೆನ್ನಟ್ಟುವ ಭರದಲ್ಲಿ ಫಾಫ್​ ಕೇವಲ 24 ರನ್​ಗೆ ಪೆವಿಲಿಯನ್​ನತ್ತ ಮುಖಮಾಡಿದರು. ಆದರೆ, ಇದೇ ಸೋಲಿಗೆ ಕಾರಣವಾಗಲು ಬಿಡುವುದಿಲ್ಲ ಎಂದು ಕ್ರೀಸ್​ಗೆ ಅಂಟಿಕೊಂಡ ವಿರಾಟ್ ಮತ್ತು ಜ್ಯಾಕ್ಸ್​ ಭರ್ಜರಿ ಜತೆಯಾಟ ಆಡುವ ಮೂಲಕ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net