ಬಿಟ್ಟುಕೊಡಲು ನಿರ್ಧರಿಸಿದಾಗ ಮಾತ್ರ...! ನಿವೃತ್ತಿ ವದಂತಿಗಳ ಬೆನ್ನಲ್ಲೇ 'ಕಿಂಗ್' ಕೊಹ್ಲಿ ಟ್ವೀಟ್​ ವೈರಲ್​ | Virat Kohli

ವಿಜಯವಾಣಿ (57)
Published on

ನವದೆಹಲಿ: ಟೀಮ್ ಇಂಡಿಯಾ ಕ್ರಿಕೆಟ್​ ದಿಗ್ಗಜ, ದಾಖಲೆಗಳ ಸರದಾರ, ರನ್​ಮಷಿನ್, ಅಭಿಮಾನಿಗಳ ನೆಚ್ಚಿನ ಕಿಂಗ್ ಆಗಿರುವ ವಿರಾಟ್​ ಕೊಹ್ಲಿ ಇದೀಗ ಆಸೀಸ್​ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಮೂಲಕ ಭಾರತ ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ದಾರೆ. ಇದು ಫ್ಯಾನ್ಸ್ ಮತ್ತು ಕ್ರಿಕೆಟ್​ ಪ್ರಿಯರಿಗೆ ಸಂತಸ ಸುದ್ದಿಯಾಗಿದ್ದೇ ಆದರೂ 2027ರ ಏಕದಿನ ವಿಶ್ವಕಪ್​ಗೂ ಮೊದಲೇ ಕೊಹ್ಲಿ ನಿವೃತ್ತಿ ಘೋಷಿಸುತ್ತಾರೆ ಎಂಬ ವದಂತಿಗಳು ಜಾಲತಾಣವನ್ನು ಸುತ್ತುವರೆದಿವೆ. ಹೀಗಿರುವಾಗಲೇ ವಿರಾಟ್​ ಮಾಡಿರುವ ಟ್ವೀಟ್​ವೊಂದು ಸದ್ಯ ಹಲವರ ಗೊಂದಲಕ್ಕೆ ತೆರೆ ಎಳೆದಿದೆ. ​

ಪ್ರಸ್ತುತ, ಟೆಸ್ಟ್​ ಮತ್ತು ಟಿ20 ಕ್ರಿಕೆಟ್​ಗೆ ಗುಡ್​ಬೈ ಹೇಳಿರುವ ವಿರಾಟ್​, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಮಾತ್ರ ಲಭ್ಯವಿರುತ್ತಾರೆ. ನಂತರದಲ್ಲಿ, ನಿವೃತ್ತಿ ಘೋಷಿಸುತ್ತಾರೆ ಎನ್ನಲಾಗಿದೆ. ಇದನ್ನು ಇನ್ನಷ್ಟು ಸತ್ಯ ಎನಿಸುವಂತೆ ಮಾಡಿದ್ದು, ಅವರ ಇತ್ತೀಚಿಗಿನ ಆರ್​ಸಿಬಿ ಜತೆಗಿನ ಒಪ್ಪಂದ ಮುಂದುವರಿಸುವ ವಿಚಾರ! ಐಪಿಎಲ್​ನ ಫ್ರಾಂಚೈಸಿಗೆ ಸಂಬಂಧಿಸಿದ ಹೊಸ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕಲು ಕೊಹ್ಲಿ ಹಿಂದೇಟು ಹಾಕಿದ್ದಾರೆ ಎಂಬ ಸುದ್ದಿ ಹೊರ ಬೀಳುತ್ತಿದ್ದಂತೆ ಇಂಥದ್ದೊಂದು ಚರ್ಚೆ ಎಲ್ಲೆಡೆ ಆರಂಭವಾಗಿದೆ. ಆದಾಗ್ಯೂ, ಈ ವದಂತಿಗಳಿಗೆ ಯಾವುದೇ ಆಧಾರವಿಲ್ಲ ಎಂದು ಆಪ್ತ ಮೂಲಗಳು ಸೂಚಿಸಿವೆ.

2027ರ ಏಕದಿನ ವಿಶ್ವಕಪ್​ವರೆಗೂ ರೋಕೊ ಜೋಡಿ ತಂಡದಲ್ಲಿ ಮುಂದುವರಿಯಲಿದೆ ಎಂಬ ಅಭಿಪ್ರಾಯವೂ ಇದೆ. ಹೀಗಾಗಿ ಕೊಹ್ಲಿ ಅವರ ಅಭಿಮಾನಿಗಳು ಅವರ ವೃತ್ತಿಜೀವನದ ಬಗ್ಗೆ ಪ್ರತಿಯೊಂದು ಸುದ್ದಿಯನ್ನು ಕುತೂಹಲದಿಂದ ನೋಡುತ್ತಿದ್ದಾರೆ. ನಿವೃತ್ತಿ ವದಂತಿಗಳ ಬೆನ್ನಲ್ಲೇ ಕೊಹ್ಲಿ ಟ್ವೀಟ್​ ಹಂಚಿಕೊಂಡಿದ್ದು, "ನೀವು ನಿಜವಾಗಲೂ ಸೋಲುವುದು, ನೀವ್ಯಾಗ ಬಿಟ್ಟುಕೊಡ್ತೀರೊ ಅಂದೇ" ಎಂದು ತಮ್ಮ ಅಧಿಕೃತ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಕೊಹ್ಲಿ ಟ್ವೀಟ್​ ಕ್ಷಣಮಾತ್ರದಲ್ಲಿ ವೈರಲ್ ಆಗಿದ್ದು, ನಿವೃತ್ತಿ ಬಗ್ಗೆ ಪ್ರಶ್ನಿಸುತ್ತಿದ್ದವರ ಬಾಯಿಯನ್ನು ಮುಚ್ಚಿಸಿದೆ,(ಏಜೆನ್ಸೀಸ್).

ಏಕದಿನ ಸರಣಿಯ ವೇಳಾಪಟ್ಟಿ

1. ಮೊದಲ ಪಂದ್ಯ: ಅ.19 (ಪರ್ತ್ ಕ್ರೀಡಾಂಗಣ)

2. ಎರಡನೇ ಪಂದ್ಯ: ಅ. 23 (ಅಡಿಲೇಡ್ ಕ್ರೀಡಾಂಗಣ)

3. ಮೂರನೇ ಪಂದ್ಯ: ಅ.25 (ಸಿಡ್ನಿ ಕ್ರೀಡಾಂಗಣ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net