ICC ಪುರುಷರ ಏಕದಿನ ಕ್ರಿಕೆಟರ್ ಪ್ರಶಸ್ತಿ​: 4ನೇ ಬಾರಿಗೆ ಈ ಪಟ್ಟವನ್ನು ಅಲಂಕರಿಸಿದ 'ರನ್​ ಮಷಿನ್'​!

ವಿಜಯವಾಣಿ - 2024-01-25T201939.209
Published on

ಹೊಸದಿಲ್ಲಿ: ಭಾರತೀಯ ಕ್ರಿಕೆಟ್​ ತಂಡದ ಮಾಜಿ ನಾಯಕ, ಸ್ಟಾರ್​ ಬ್ಯಾಟ್ಸ್​​ಮನ್​ ವಿರಾಟ್ ಕೊಹ್ಲಿಗೆ 2023ರ ಐಸಿಸಿ ವರ್ಷದ ಏಕದಿನ ಕ್ರಿಕೆಟಿಗ ಪಟ್ಟ ಒಲಿದುಬಂದಿದ್ದು, 4ನೇ ಬಾರಿಗೆ ಈ ಪ್ರಶಸ್ತಿಯನ್ನು ಕೊಹ್ಲಿ ತಮ್ಮ ಮುಡಿಗೇರಿಸಿಕೊಂಡಿದ್ದಾರೆ. 2023ರ ಮೊದಲು 2012, 2017 ಮತ್ತು 2018ರಲ್ಲಿ ಐಸಿಸಿ ವರ್ಷದ ಏಕದಿನ ಪ್ರಶಸ್ತಿಯನ್ನು ವಿರಾಟ್​ ಸ್ವೀಕರಿಸಿದ್ದರು.

27 ಪಂದ್ಯಗಳಲ್ಲಿ 1377 ರನ್ ಗಳಿಸಿದ ರನ್ ಮಷಿನ್, 2023ರ ವಿಶ್ವಕಪ್‌ನಲ್ಲಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಈ ಪ್ರಕ್ರಿಯೆಯಲ್ಲಿ 10 ಐಸಿಸಿ ಪ್ರಶಸ್ತಿಗಳನ್ನು ಹೊಂದಿರುವ ಏಕೈಕ ಆಟಗಾರ ಎಂಬ ಹೆಗ್ಗಳಿಕೆ ವಿರಾಟ್​ಗೆ ಸಲ್ಲುತ್ತದೆ. ​

ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಎರಡು ಶತಕಗಳನ್ನು ಬಾರಿಸುವ ಮೂಲಕ ಕೊಹ್ಲಿ 2024ರ ವರ್ಷವನ್ನು ಅತ್ಯುತ್ತಮ ರೀತಿಯಲ್ಲಿ ಆರಂಭಿಸಿದರು. 283 ರನ್‌ಗಳನ್ನು ಒಗ್ಗೂಡಿಸಿ ಪ್ಲೇಯರ್ ಆಫ್ ದಿ ಸೀರೀಸ್ ಪ್ರಶಸ್ತಿಯನ್ನು ಕೂಡ ಗೆದ್ದರು.

ಕಳೆದ ವರ್ಷ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನ 11 ಇನ್ನಿಂಗ್ಸ್‌ಗಳಲ್ಲಿ 765 ರನ್ ಗಳಿಸುವ ಮೂಲಕ ಕ್ರಿಕೆಟ್​ ದಿಗ್ಗಜ ಮಾಸ್ಟರ್ ಬ್ಲಾಸ್ಟರ್​ ಸಚಿನ್ ತೆಂಡೂಲ್ಕರ್ ಅವರ 20 ವರ್ಷಗಳ ಹಳೆಯ ದಾಖಲೆಯನ್ನು ಮುರಿದು ತನ್ನದೇ ಹೊಸ ದಾಖಲೆ ಬರೆದ ವಿರಾಟ್, ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ವಿಷಯಕ್ಕೆ ಭಾರೀ ಪ್ರಶಂಸೆ ವ್ಯಕ್ತಪಡಿಸಿದ ಅಭಿಮಾನಿಗಳು, ರನ್​ಗಳ ಸರದಾರರಾಗಿ ಮಿಂಚಿ ಎಂದು ಶುಭಹಾರೈಸಿದ್ದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net