

ಸೆಂಚುರಿಯನ್: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸತತ ಎರಡನೇ ವರ್ಷವೂ ಶತಕ ಸಿಡಿಸಲು ವಿಫಲರಾದರು. ಎರಡನೇ ಇನಿಂಗ್ಸ್‌ನಲ್ಲಿ ಕೇವಲ 18 ರನ್‌ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಕೊಹ್ಲಿ ತಮ್ಮ 71ನೇ ಮೂರಂಕಿ ಮೊತ್ತವನ್ನು ಈ ವರ್ಷವೂ ದಾಟಲಿಲ್ಲ. 2019ರಲ್ಲಿ ಈಡನ್‌ಗಾರ್ಡನ್‌ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಅಹರ್ನಿಶಿ ಟೆಸ್ಟ್‌ನಲ್ಲಿ ಕೊಹ್ಲಿ ಕಡೇ ಬಾರಿಗೆ ಶತಕ ಬಾರಿಸಿದ್ದರು. ಕರೊನಾ ಕಾಲದಲ್ಲಿ ಇದುವರೆಗೂ ಏಕೈಕ ಶತಕ ಸಿಡಿಸಿಲ್ಲ.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ವರ್ಷ 2008ರಲ್ಲಿ ಶತಕಗಳಿಸಿರಲಿಲ್ಲ. ಉತ್ತುಂಗ ಫಾರ್ಮ್‌ನಲ್ಲಿ 2017, 18ರಲ್ಲಿ ತಲಾ 11 ಶತಕ ಗಳಿಸಿದ್ದ ಕೊಹ್ಲಿ, 2019ರಲ್ಲಿ 7 ಶತಕ ಬಾರಿಸಿದ್ದರು. ಮತ್ತೊಂದೆಡೆ, ಭಾರತ ತಂಡ ವೇಗಿಗಳ ಕರಾರುವಾಕ್ ದಾಳಿ ನೆರವಿನಿಂದ ಆತಿಥೇಯ ದಕ್ಷಿಣ ಆಫ್ರಿಕಾಕ್ಕೆ ಆಘಾತ ನೀಡಿರುವ ಭಾರತ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಐತಿಹಾಸಿಕ ಗೆಲುವಿನತ್ತ ದಿಟ್ಟ ಹೆಜ್ಜೆ ಇಟ್ಟಿದೆ.
ಭಾರತ ನೀಡಿದ 305 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿರುವ ದಕ್ಷಿಣ ಆಫ್ರಿಕಾಕ್ಕೆ ನಾಯಕ ಡೀನ್ ಎಲ್ಗರ್ (52*ರನ್, 122 ಎಸೆತ, 7 ಬೌಂಡರಿ) ಏಕಾಂಗಿ ನಿರ್ವಹಣೆ ಮೂಲಕ ಆಸರೆಯಾದರೂ, ವೇಗಿಗಳಾದ ಜಸ್‌ಪ್ರೀತ್ ಬುಮ್ರಾ (22ಕ್ಕೆ 2), ಮೊಹಮದ್ ಶಮಿ (29ಕ್ಕೆ 1) ಹಾಗೂ ಮೊಹಮದ್ ಸಿರಾಜ್ (25ಕ್ಕೆ 1) ಒಳಗೊಂಡ ಬೌಲಿಂಗ್ ಪಡೆ ಆಘಾತ ನೀಡಿದೆ. ಅಂತಿಮ ದಿನದಾಟದಲ್ಲಿ ಭಾರತದ ಗೆಲುವಿಗೆ 6 ವಿಕೆಟ್ ಅಗತ್ಯವಿದ್ದರೆ, ದಕ್ಷಿಣ ಆಫ್ರಿಕಾ ತಂಡ ಇನ್ನೂ 211 ರನ್ ಪೇರಿಸಬೇಕಿದೆ. ಸ್ಥಳೀಯ ಹವಾಮಾನ ಮುನ್ಸೂಚನೆಯ ಪ್ರಕಾರ ಅಂತಿಮ ದಿನದಾಟಕ್ಕೆ ಮಳೆ ಅಡಚಣೆ ತರುವ ಭೀತಿ ಇದ್ದು, ಮಳೆರಾಯ ಬಿಡುವು ನೀಡಿದರೆ ವಿರಾಟ್ ಕೊಹ್ಲಿ ಬಳಗ ಜಯದ ನಗೆ ಬೀರಲಿದೆ.