

ನವದೆಹಲಿ: ಟೀಮ್ ಇಂಡಿಯಾ ಮಾಜಿ ನಾಯಕ ಹಾಗೂ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 15 ವರ್ಷ ಪೂರೈಸಿದರು. 2008ರ ಆಗಸ್ಟ್ 18ರಂದು ಶ್ರೀಲಂಕಾ ವಿರುದ್ಧ ಡಂಬುಲಾದಲ್ಲಿ ಏಕದಿನ ಪಂದ್ಯ ಆಡುವ ಮೂಲಕ 19 ವರ್ಷದ ಯುವ ಬ್ಯಾಟ್ಸ್ಮನ್ ಆಗಿ ಅವರು ಭಾರತ ತಂಡದ ಪರ ಪದಾರ್ಪಣೆ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಅವರ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.
ಮೊದಲ ಪಂದ್ಯದಲ್ಲಿ ಆರಂಭಿಕನಾಗಿ ಗೌತಮ್ ಗಂಭೀರ್ ಜತೆಗೆ ಇನಿಂಗ್ಸ್ ಆರಂಭಿಸಿದ್ದ ಕೊಹ್ಲಿ ಕೇವಲ 12 ರನ್ ಗಳಿಸಿದ್ದರು. ಭಾರತ ತಂಡ 146 ರನ್ಗೆ ಆಲೌಟ್ ಆಗಿದ್ದ ಪಂದ್ಯದಲ್ಲಿ 8 ವಿಕೆಟ್ಗಳಿಂದ ಸೋಲು ಕಂಡಿತ್ತು. ಕಳೆದ 15 ವರ್ಷಗಳಲ್ಲಿ ವಿಶ್ವದ ಸ್ಟಾರ್ ಬ್ಯಾಟ್ಸ್ಮನ್ ಆಗಿ ಬೆಳೆದಿರುವ ಕೊಹ್ಲಿ, ಹಲವಾರು ದಾಖಲೆಗಳ ಒಡೆಯರಾಗಿದ್ದಾರೆ. ಮೂರೂ ಮಾದರಿಯ ಕ್ರಿಕೆಟ್ನಲ್ಲಿ ರನ್ ಪ್ರವಾಹವನ್ನೇ ಹರಿಸಿದ್ದಾರೆ. 15 ವರ್ಷಗಳಲ್ಲಿ 501 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿ 25,582 ರನ್ ಸಿಡಿಸಿರುವ ಕೊಹ್ಲಿ ಸಾಧನೆಗೆ ಬಿಸಿಸಿಐ ಕೂಡ ಟ್ವಿಟರ್ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದೆ.
2008ರಲ್ಲಿ 19 ವಯೋಮಿತಿ ತಂಡದ ನಾಯಕರಾಗಿ ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟಿದ್ದ ಕೊಹ್ಲಿ, 2011ರ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯರೂ ಆಗಿದ್ದರು. ಆದರೆ ಅವರು ಭಾರತ ತಂಡದ ನಾಯಕರಾಗಿದ್ದಾಗ ಒಂದೂ ಐಸಿಸಿ ಟ್ರೋಫಿ ಗೆಲ್ಲದಿದ್ದುದು ಅವರಿಗೆ ಹಿನ್ನಡೆಯಾಗಿತ್ತು.
ಕೊಹ್ಲಿ ಇದುವರೆಗೆ 111 ಟೆಸ್ಟ್, 275 ಏಕದಿನ ಮತ್ತು 115 ಟಿ20 ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 8676, 12898 ಮತ್ತು 4008 ರನ್ ಬಾರಿಸಿದ್ದಾರೆ. ಟೆಸ್ಟ್ನಲ್ಲಿ 29, ಏಕದಿನದಲ್ಲಿ 46 ಮತ್ತು ಟಿ20ಯಲ್ಲಿ 1 ಶತಕಗಳ ಸಹಿತ ಒಟ್ಟು 76 ಶತಕ ಸಿಡಿಸಿದ್ದಾರೆ. ಸದ್ಯ ವಿಶ್ರಾಂತಿಯಲ್ಲಿರುವ 34 ವರ್ಷದ ಕೊಹ್ಲಿ, ಮುಂಬರುವ ಏಷ್ಯಾಕಪ್-ವಿಶ್ವಕಪ್ಗಳಲ್ಲಿ ಭಾರತ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಬೇಕಾಗಿದೆ.