

ಲಂಡನ್: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ವೇಗಿ ಜಸ್ಪ್ರೀತ್ ಬುಮ್ರಾ, ಪ್ರತಿಷ್ಠಿತ ಕ್ರಿಕೆಟ್ ಮ್ಯಾಗಝಿನ್ ‘ವಿಸ್ಡನ್’ ಹೆಸರಿಸಿರುವ ದಶಕದ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಮಹೇಂದ್ರ ಸಿಂಗ್ ಧೋನಿ ಮತ್ತು ಆರಂಭಿಕ ರೋಹಿತ್ ಶರ್ಮ ಸ್ಥಾನ ಪಡೆಯದಿರುವುದು ಅಚ್ಚರಿ ಸೃಷ್ಟಿಸಿದೆ. ಆಸ್ಟ್ರೇಲಿಯಾದ ಸೀಮಿತ ಓವರ್ ತಂಡದ ನಾಯಕ ಆರನ್ ಫಿಂಚ್ ಈ ತಂಡಕ್ಕೆ ನಾಯಕರಾಗಿದ್ದಾರೆ. ಶೇನ್ ವ್ಯಾಟ್ಸನ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಈ ತಂಡದಲ್ಲಿರುವ ಮತ್ತಿಬ್ಬರು ಆಸ್ಟ್ರೇಲಿಯನ್ನರು.
ಇಂಗ್ಲೆಂಡ್ನ ಜೋಸ್ ಬಟ್ಲರ್, ಡೇವಿಡ್ ವಿಲ್ಲಿ, ಅಫ್ಘಾನಿಸ್ತಾನದ ಮೊಹಮದ್ ನಬಿ, ರಶೀದ್ ಖಾನ್, ನ್ಯೂಜಿಲೆಂಡ್ನ ಕಾಲಿನ್ ಮನ್ರೊ ಮತ್ತು ಶ್ರೀಲಂಕಾದ ಲಸಿತ್ ಮಾಲಿಂಗ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ‘ದೇಶೀಯ ಟಿ20 ಕ್ರಿಕೆಟ್ನಲ್ಲಿ ಕೊಹ್ಲಿ ನಿರ್ವಹಣೆ ಸಾಧಾರಣವಾಗಿದೆ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್ ವಿಷಯದಲ್ಲಿ ಹೀಗೆ ಹೇಳಲಾಗದು. ಕೊಹ್ಲಿ ಅವರ 53 ರನ್ ಸರಾಸರಿ ಈ ದಶಕದ ಅತ್ಯುತ್ತಮವಾಗಿದೆ. ಉತ್ತಮ ಸ್ಥಿರತೆಯಲ್ಲೇ ಅವರು ರನ್ ಗಳಿಸಿದ್ದಾರೆ. ವೇಗ ಮತ್ತು ಸ್ಪಿನ್ ವಿರುದ್ಧ ಬಲಿಷ್ಠರಾಗಿದ್ದು, ವಿಕೆಟ್ ನಡುವಿನ ಓಟದಲ್ಲೂ ಚುರುಕು ಹೊಂದಿದ್ದಾರೆ. 3ನೇ ಕ್ರಮಾಂಕಕ್ಕೆ ಅವರು ಸೂಕ್ತ ಬ್ಯಾಟ್ಸ್ಮನ್. ಮೊದಲ ವಿಕೆಟ್ ಬೇಗನೆ ಬಿದ್ದಾಗ ಇನಿಂಗ್ಸ್ಗೆ ಆಧಾರ ವಾಗಬಲ್ಲರು ಮತ್ತು ಕ್ರೀಸ್ಗೆ ಅಂಟಿಕೊಂಡ ಬಳಿಕ ರನ್ಗತಿ ಏರಿಸಬಲ್ಲರು’ ಎಂದು ವಿಸ್ಡನ್ ತಿಳಿಸಿದೆ. ಕೊಹ್ಲಿ ಈ ಮುನ್ನ ವಿಸ್ಡನ್ನ ದಶಕದ ಟೆಸ್ಟ್ ಮತ್ತು ಏಕದಿನ ತಂಡದಲ್ಲೂ ಸ್ಥಾನ ಪಡೆದಿದ್ದರು. ಅಲ್ಲದೆ ದಶಕದ ಐವರು ಅಗ್ರ ಕ್ರಿಕೆಟಿಗರಲ್ಲಿ ಒಬ್ಬರೆನಿಸಿದ್ದರು. -ಪಿಟಿಐ