VIDEO: ಮೈದಾನದಲ್ಲೇ ಬೆನ್ ಸ್ಟೋಕ್ಸ್ ಜತೆ ವಿರಾಟ್ ಕೊಹ್ಲಿ ವಾಗ್ವಾದ ಮಾಡಿದ್ಯಾಕೆ..?

virat kohli and ben stokes for web
Published on

ಅಹಮದಾಬಾದ್: ಮೈದಾನದಲ್ಲಿ ಆಟಗಾರರ ನಡುವೆ ಪರಸ್ಪರ ವಾಗ್ವಾದ ಮಾಡುವುದು ಸರ್ವೇ ಸಾಮಾನ್ಯ. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲಿ ಎಷ್ಟೇ ಶಾಂತಿ ಪ್ರಿಯರಾಗಿ ವರ್ತಿಸಿದರೂ ಒಮ್ಮೊಮ್ಮೆ ಅಷ್ಟೇ ತಾಳ್ಮೆ ಕಳೆದುಕೊಳ್ಳುತ್ತಾರೆ. ಅದರಲ್ಲೂ ತಂಡದ ಸಹ ಆಟಗಾರರನ್ನು ಕೊಹ್ಲಿ ಎಂದು ಬಿಟ್ಟುಕೊಡುವುದಿಲ್ಲ. ಸಹ ಆಟಗಾರರ ಪರವಾಗಿ ಎಷ್ಟೋ ಬಾರಿ ಎದುರಾಳಿ ತಂಡದವರ ಮೇಲೆ ಕೊಹ್ಲಿ ವಾಗ್ವಾದ ನಡೆಸಿರುವ ಪ್ರಸಂಗಗಳು ನಡೆದಿವೆ. ವೇಗಿ ಮೊಹಮದ್ ಸಿರಾಜ್‌ರನ್ನು ಇಂಗ್ಲೆಂಡ್ ವೇಗಿ ಬೆನ್ ಸ್ಟೋಕ್ಸ್ ಕೆಣಕ್ಕಿದ್ದಕ್ಕೆ ಕೊಹ್ಲಿ ಮೈದಾನದಲ್ಲೇ ಮಾತಿನ ಚಕಮಕಿ ನಡೆಸಿದ ಪ್ರಸಂಗ ಗುರುವಾರ ನಡೆದಿದೆ.

ಪಂದ್ಯದ 13ನೇ ಓವರ್‌ನಲ್ಲಿ ವೇಗಿ ಮೊಹಮದ್ ಸಿರಾಜ್, ಬೆನ್ ಸ್ಟೋಕ್ಸ್‌ಗೆ ಬೌನ್ಸಿಂಗ್ ಎಸೆತವೊಂದನ್ನು ಎಸೆದರು. ಇದರಿಂದ ಕೆರಳಿದ ಸ್ಟೋಕ್ಸ್, ಸಿರಾಜ್‌ರನ್ನು ದಿಟ್ಟಿಸಿ ನೋಡಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಕೊಹ್ಲಿ, ಸ್ಟೋಕ್ಸ್ ಜತೆಗೆ ವಾಗ್ವಾದಕ್ಕೆ ನಿಂತರು. ಕ್ಷಣಾರ್ಧದಲ್ಲೇ ಇಬ್ಬರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆಯಿತು. ಈ ವೇಳೆ ಮೈದಾನದ ಅಂಪೈರ್‌ಗಳಾದ ನಿತಿನ್ ಮೆನನ್ ಹಾಗೂ ವೀರೇಂದ್ರ ಶರ್ಮ ಮಧ್ಯ ಪ್ರವೇಶಿಸಿ ಸ್ಟೋಕ್ಸ್-ಕೊಹ್ಲಿಯನ್ನು ವಾಪಸ್ ಕಳುಹಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ದಿನದಾಟ ಮುಕ್ತಾಯಗೊಂಡ ಘಟನೆ ಕುರಿತು ವೇಗಿ ಮೊಹಮದ್ ಸಿರಾಟ್ ವಿವರಿಸಿದ್ದಾರೆ. ಬೌನ್ಸಿಂಗ್ ಎಸೆತವನ್ನು ಎಸೆದಿದ್ದಕ್ಕೆ ಸ್ಟೋಕ್ಸ್ ದಿಟ್ಟಿಸಿ ನೋಡಿದರು. ಇದನ್ನು ಕೊಹ್ಲಿ ಗಮನಕ್ಕೆ ತಂದಿದ್ದೆ. ಬಳಿಕ ಸ್ಟೋಕ್ಸ್ ನಡೆಯನ್ನು ಕೊಹ್ಲಿ ಪ್ರಶ್ನೆ ಮಾಡಿದರು ಎಂದಿದ್ದಾರೆ.

ಟಾಸ್ ಜಯಿಸಿದ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಭಾರತದ ಅಕ್ಷರ್ ಪಟೇಲ್ (68ಕ್ಕೆ 4), ಆರ್.ಅಶ್ವಿನ್ (47ಕ್ಕೆ 3), ಮೊಹಮದ್ ಸಿರಾಜ್ (45ಕ್ಕೆ 2) ತ್ರಿಮೂರ್ತಿಗಳ ಮಾರಕ ದಾಳಿಗೆ ನಲುಗಿದ ಇಂಗ್ಲೆಂಡ್ 205 ರನ್‌ಗಳಿಗೆ ಸರ್ವಪತನ ಕಂಡಿತು. ಬಳಿಕ ಭಾರತ ತಂಡದ ಮೊದಲ ದಿನದಾಟದ ಅಂತ್ಯಕ್ಕೆ 1 ವಿಕೆಟ್‌ಗೆ 24 ರನ್ ಪೇರಿಸಿದ್ದು, ಇನಿಂಗ್ಸ್ ಮುನ್ನಡೆ ಸಾಧಿಸಲು ಇನ್ನು 181 ರನ್ ಗಳಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net