

ಮೊಹಾಲಿ: ವಿರಾಟ್ ಕೊಹ್ಲಿ ಮೊಹಾಲಿಯಲ್ಲಿ ಆಡಲಿರುವ ವೃತ್ತಿಜೀವನದ 100ನೇ ಟೆಸ್ಟ್ ಪಂದ್ಯಕ್ಕೆ ಪ್ರೇಕ್ಷಕರಿಗೆ ಪ್ರವೇಶ ಅವಕಾಶ ಕಲ್ಪಿಸದ ಬಿಸಿಸಿಐ ವಿರುದ್ಧ ಕ್ರಿಕೆಟ್ ಪ್ರೇಮಿಗಳು ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದಾರೆ. ಇತ್ತೀಚೆಗೆ ಟೆಸ್ಟ್ ನಾಯಕತ್ವ ತ್ಯಜಿಸುವ ಮುನ್ನ ಕೊಹ್ಲಿ, ಬಿಸಿಸಿಐ ಅಧಿಕಾರಿಗಳ ವಿರುದ್ಧವೇ ಹೇಳಿಕೆ ನೀಡಿದ್ದರು. ಅದಕ್ಕೀಗ ಸೇಡು ತೀರಿಸಿಕೊಳ್ಳಲಾಯಿತೇ ಎಂಬ ಅನುಮಾನವೂ ವ್ಯಕ್ತವಾಗಿದೆ.
ಪ್ರೇಕ್ಷಕರಿಗೆ ಸ್ಟೇಡಿಯಂಗೆ ಪ್ರವೇಶ ನೀಡದಿರಲು ಬಿಸಿಸಿಐ ಕರೊನಾ ಭೀತಿಯ ಕಾರಣವನ್ನು ನೀಡಿದೆ. ಆದರೆ ಬೆಂಗಳೂರಿನಲ್ಲಿ ನಡೆಯಲಿರುವ ಸರಣಿಯ 2ನೇ ಟೆಸ್ಟ್ ಪಂದ್ಯಕ್ಕೆ ಶೇ. 50 ಪ್ರೇಕ್ಷಕರಿಗೆ ಪ್ರವೇಶ ನೀಡಲಾಗುತ್ತಿದೆ. ಹೀಗಾಗಿ ಬಿಸಿಸಿಐನ ಈ ದ್ವಂದ್ವ ನಡೆ ಕ್ರಿಕೆಟ್ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಪಂಜಾಬ್ ಮತ್ತು ಕರ್ನಾಟಕದಲ್ಲಿನ ಕರೊನಾ ಪ್ರಕರಣಗಳಲ್ಲಿ ಹೆಚ್ಚಿನ ಅಂತರವಿಲ್ಲ. ಫೆಬ್ರವರಿ ತಿಂಗಳಲ್ಲಿ ಪಂಜಾಬ್‌ನಲ್ಲೂ ಕರೊನಾ ಪ್ರಕರಣಗಳು ಭಾರಿ ಇಳಿಕೆ ಕಂಡಿವೆ. ಇದರ ಹೊರತಾಗಿಯೂ ಬಿಸಿಸಿಐ, ಮೊಹಾಲಿಯಲ್ಲಿ ಮಾತ್ರ ಪ್ರೇಕ್ಷಕರಿಗೆ ನಿರ್ಬಂಧ ಹೇರಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ವಿರಾಟ್ ಕೊಹ್ಲಿ ನಡುವೆ ಇತ್ತೀಚೆಗೆ ನಡೆದಿರುವ ಜಟಾಪಟಿ ಇದಕ್ಕೆ ಪರೋಕ್ಷ ಕಾರಣವಾಗಿರಬಹುದೇ ಎಂಬ ಅನುಮಾನವನ್ನೂ ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ. ಯಾಕೆಂದರೆ ವಿರಾಟ್ ಕೊಹ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದು, ಟೆಸ್ಟ್ ಕ್ರಿಕೆಟ್‌ಗೂ ಪ್ರೇಕ್ಷಕರನ್ನು ಸೆಳೆಯುವಂಥ ಆಟಗಾರರಾಗಿದ್ದಾರೆ. ಮಾಜಿ ಕ್ರಿಕೆಟಿಗ ಸುನೀಲ್ ಗಾವಸ್ಕರ್ ಕೂಡ ಕೊಹ್ಲಿ 100ನೇ ಟೆಸ್ಟ್‌ಗೆ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸದ ಬಿಸಿಸಿಐ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
100ನೇ ಟೆಸ್ಟ್‌ಗೆ ಕೊಹ್ಲಿ ಅಭ್ಯಾಸ
ಮೊಹಾಲಿಯಲ್ಲಿ ವೃತ್ತಿಜೀವನದ 100ನೇ ಟೆಸ್ಟ್ ಪಂದ್ಯ ಆಡಲು ಸಜ್ಜಾಗುತ್ತಿರುವ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ, ಕಠಿಣ ಅಭ್ಯಾಸ ಆರಂಭಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿದ್ದ ಕೊಹ್ಲಿ, ಪಿಸಿಎ ಕ್ರೀಡಾಂಗಣದಲ್ಲಿ ಭಾನುವಾರದಿಂದಲೇ ಅಭ್ಯಾಸ ಆರಂಭಿಸಿದ್ದಾರೆ. ಟಿ20 ಸರಣಿಯಿಂದ ಬಿಡುವು ಪಡೆದಿದ್ದ ಮತ್ತೋರ್ವ ಆಟಗಾರ ರಿಷಭ್ ಪಂತ್ ಜತೆಗೆ ಕೊಹ್ಲಿ ಶನಿವಾರವೇ ಮೊಹಾಲಿ ತಲುಪಿದ್ದು, ಭಾನುವಾರವೇ ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ಆರಂಭಿಸಿದರು. ಈ ಮೂಲಕ ತಮ್ಮ ಮೈಲಿಗಲ್ಲಿನ ಟೆಸ್ಟ್‌ನಲ್ಲಿ ಕೊಹ್ಲಿ ಶತಕದ ಕೊರತೆ ನೀಗಿಸಲು ತೀವ್ರ ಹಂಬಲ ತೋರಿದ್ದಾರೆ. ಧರ್ಮಶಾಲಾದಲ್ಲಿ ಟಿ20 ಸರಣಿ ಕ್ಲೀನ್‌ಸ್ವೀಪ್ ಸಾಧಿಸಿದ ಬಳಿಕ ಟೆಸ್ಟ್ ತಂಡದ ಇತರ ಸದಸ್ಯರು ಸೋಮವಾರವಷ್ಟೇ ಮೊಹಾಲಿಗೆ ಬಂದಿಳಿದಿದ್ದರೆ, ಆರ್. ಅಶ್ವಿನ್, ಹನುಮ ವಿಹಾರಿ, ಶುಭಮಾನ್ ಗಿಲ್, ಜಯಂತ್ ಯಾದವ್, ಉಮೇಶ್ ಯಾದವ್, ಕೆಎಸ್ ಭರತ್ ಮತ್ತು ಸೌರಭ್ ಕುಮಾರ್ ಈ ಮೊದಲೇ ಆಗಮಿಸಿದ್ದರು.