ಐಪಿಎಲ್ ಆಸೆಯಿಂದ ವಿರಾಟ್​ಗೆ ಹೆದರುತ್ತಾರೆ!: ಆಸ್ಟ್ರೇಲಿಯಾ ಕ್ರಿಕೆಟಿಗರ ವಿರುದ್ಧ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್ ಆರೋಪ

clark april
Published on

ಮೆಲ್ಬೋರ್ನ್: ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ ಐಪಿಎಲ್​ನಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಳ್ಳುವುದಕ್ಕಾಗಿ ಆಸ್ಟ್ರೇಲಿಯಾದ ಆಟಗಾರರು, ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಇತರ ಆಟಗಾರರನ್ನು ನಿಂದಿಸಲು ಹೆದರುತ್ತಾರೆ. ಅಲ್ಲದೆ ಭಾರತ ತಂಡದ ಆಟಗಾರರೊಂದಿಗೆ ಅತಿ ವಿಧೇಯದಿಂದ ವರ್ತಿಸುತ್ತಾರೆ ಎಂದು ಮಾಜಿ ನಾಯಕ ಮೈಕೆಲ್ ಕ್ಲಾರ್ಕ್ ಆರೋಪಿಸಿದ್ದಾರೆ.

ಐಪಿಎಲ್ ಆರಂಭವಾಗುವುದಕ್ಕೆ ಮುನ್ನ ಭಾರತ-ಆಸ್ಟ್ರೇಲಿಯಾ ತಂಡಗಳ ಆಟಗಾರರ ನಡುವೆ ಸಾಕಷ್ಟು ವಾಗ್ವಾದಗಳು ನಡೆದ ದೃಷ್ಟಾಂತಗಳಿವೆ. ಸೈಮಂಡ್ಸ್- ಹರ್ಭಜನ್ ನಡುವಿನ ಜನಾಂಗೀಯ ನಿಂದನೆ ಪ್ರಕರಣಗಳು ಪ್ರಮುಖವಾದುದು. ಅಲ್ಲದೆ ಆಸೀಸ್ ಆಟಗಾರರೂ ಎದುರಾಳಿಯನ್ನು ನಿಂದಿಸುವುದರಲ್ಲಿ ಸಾಕಷ್ಟು ಸುದ್ದಿಯಾಗುತ್ತಿದ್ದರು. ಆದರೆ ಐಪಿಎಲ್ ಶುರುವಾದ ನಂತರ ಈ ಅಭ್ಯಾಸವನ್ನು ಆಸೀಸ್ ಆಟಗಾರರು ಬಿಟ್ಟಿದ್ದಾರೆ ಎಂಬುದು ಮೈಕೆಲ್ ಕ್ಲಾರ್ಕ್ ವಾದವಾಗಿದೆ.

‘ಕ್ರಿಕೆಟ್​ನಲ್ಲಿ ಹಣಕಾಸಿನ ವಿಚಾರದಲ್ಲಿ ಭಾರತ ಎಷ್ಟು ಶಕ್ತಿಶಾಲಿ ಎಂಬುದು ಎಲ್ಲರಿಗೂ ಗೊತ್ತಿದೆ. ಅಂತಾರಾಷ್ಟ್ರೀಯವಾಗಿ ಮಾತ್ರವಲ್ಲ, ಐಪಿಎಲ್ ಶುರುವಾದ ಬಳಿಕ ದೇಶೀಯವಾಗಿಯೂ ಭಾರತ ಪ್ರಬಲವಾಗಿದೆ. ಆದರೆ ಇತ್ತೀಚೆಗೆ ಆಸ್ಟ್ರೇಲಿಯನ್ ಕ್ರಿಕೆಟ್ ಮಾತ್ರವಲ್ಲ, ವಿಶ್ವದ ಇತರ ಕೆಲ ತಂಡಗಳ ಆಟಗಾರರೂ ಭಾರತದೆದುರು ಆಡುವಾಗ ಅತಿ ವಿಧೇಯದಿಂದ ವರ್ತಿಸುತ್ತಾರೆ. ಕೊಹ್ಲಿ ಅಥವಾ ಭಾರತದ ಇತರ ಆಟಗಾರರನ್ನು ನಿಂದಿಸಲು ಅವರು ಭಯಪಡುತ್ತಾರೆ. ಯಾಕೆಂದರೆ ಅವರೊಂದಿಗೆ ಏಪ್ರಿಲ್-ಮೇನಲ್ಲಿ ಆಡಬೇಕಾಗಿರುತ್ತದೆ’ ಎಂದು 2015ರ ವಿಶ್ವಕಪ್ ವಿಜೇತ ಆಸೀಸ್ ತಂಡದ ನಾಯಕ ಕ್ಲಾರ್ಕ್ ಅಭಿಪ್ರಾಯಪಟ್ಟಿದ್ದಾರೆ.

ಕೆಲ ಆಸೀಸ್ ಆಟಗಾರರು ಮೈದಾನದಲ್ಲಿ ಒರಟು ವರ್ತನೆ ತೋರುವ ಮನೋಭಾವ ಹೊಂದಿದ್ದರೂ, ಐಪಿಎಲ್ ಹರಾಜಿನಲ್ಲಿ ಹೆಚ್ಚಿನ ಮೌಲ್ಯಕ್ಕೆ ಮಾರಾಟವಾಗುವ ಸಲುವಾಗಿ ಸಂಯಮದಿಂದ ವರ್ತಿಸುತ್ತಾರೆ. ಎಂದು ಕ್ಲಾರ್ಕ್ ಹೇಳಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net