ಅನರ್ಹತೆ ವಿರುದ್ಧ ಮೇಲ್ಮನವಿ ಸಲ್ಲಿಸಿದ ವಿನೇಶ್​! ಎಲ್ಲರ ದೃಷ್ಟಿ ಈಗ ಸಿಎಎಸ್ ತೀರ್ಪಿನ​ ಮೇಲೆ! ಏನಿದು CAS?

Vinesh
Published on

ನವದೆಹಲಿ: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ​ ಮಹಿಳೆಯರ 50 ಕೆಜಿ ವಿಭಾಗದ ಕುಸ್ತಿ ಸ್ಪರ್ಧೆಯ ಫೈನಲ್​ ಪಂದ್ಯಕ್ಕೂ ಮುನ್ನ ಅನರ್ಹಗೊಳಿಸಿದ ಕ್ರಮವನ್ನು ಪ್ರಶ್ನಿಸಿ ಭಾರತೀಯ ಕುಸ್ತಿಪಟು ವಿನೇಶ್​ ಪೋಗಟ್ ಅವರು ಕೋರ್ಟ್​ ಆಫ್​ ಅರ್ಬಿಟ್ರೇಶನ್​ ಫಾರ್​ ಸ್ಫೋರ್ಟ್ಸ್​ (ಸಿಎಎಸ್​) ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.

ನಿಗದಿತ ತೂಕಕ್ಕಿಂತ 100 ಗ್ರಾಂ ಹೆಚ್ಚಿದ್ದಾರೆ ಎಂಬ ಕಾರಣಕ್ಕೆ ಫೈನಲ್​ ಪಂದ್ಯದಿಂದ ಅನರ್ಹಗೊಳಿಸಿದ ಬೆನ್ನಲ್ಲೇ ವಿನೇಶ್​ ಪೋಗಟ್​ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಇದಕ್ಕೂ ಮುನ್ನ ನಡೆದ ಸೆಮಿಫೈನಲ್​ ಪಂದ್ಯದಲ್ಲಿ 5-0 ಅಂತರದಲ್ಲಿ ಗೆದ್ದು ಫೈನಲ್​ಗೆ ಲಗ್ಗೆ ಇಡುವ ಮೂಲಕ ಒಲಿಂಪಿಕ್ಸ್​ ಇತಿಹಾಸದಲ್ಲಿ ಫೈನಲ್​ಗೆ ಅರ್ಹತೆ ಪಡೆದ ಮೊದಲ ಭಾರತೀಯ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ವಿನೇಶ್​ ಭಾಜನರಾಗಿದ್ದರು. ಆದರೆ, ಕೇವಲ 100 ಗ್ರಾಂ ಹೆಚ್ಚಾಗಿದ್ದಾರೆ ಎಂಬ ಕಾರಣಕ್ಕೆ ಒಲಿಂಪಕ್ಸ್​ನಿಂದ ಹೊರಬಿದ್ದು, ನಿರಾಸೆ ಅನುಭವಿಸಿದ್ದರು. ಚಿನ್ನದ ಪದಕದ ಆಸೆಯು ಕೂಡ ಕಮರಿ ಹೋಯಿತು.

ತನಗೆ ಬೆಳ್ಳಿ ಪದಕವಾದರೂ ನೀಡುವಂತೆ ವಿನೇಶ್​ ಕೇಳಿಕೊಂಡಿದ್ದಾರೆಂದು ಇಂಡಿಯಾ ಟುಡೆ ವರದಿ ಮಾಡಿದೆ. ಈ ವಿಚಾರದಲ್ಲಿ ಸಿಎಎಸ್​ ಇಂದು ತೀರ್ಪು ನೀಡುವ ಸಾಧ್ಯತೆ ಇದೆ. ಒಂದು ವೇಳೆ ಸಿಎಎಸ್​ ವಿನೇಶ್​ ಪರವಾಗಿ ತೀರ್ಪು ಪ್ರಕಟಿಸಿದರೆ, ವಿನೇಶ್​ಗೆ ಬೆಳ್ಳಿ ಪದಕ ಸಿಗಲಿದೆ. ತೀರ್ಪು ಅವರ ವಿರುದ್ಧ ಬಂದಲ್ಲಿ, ಯಾವುದೇ ಪದಕವಿಲ್ಲದೆ ಬರಿಗೈಯಲ್ಲಿ ವಾಪಸ್​ ಬರಬೇಕಾಗುತ್ತದೆ.

ಸಿಎಎಸ್​ ಏನು?

ಕೋರ್ಟ್​ ಆಫ್​ ಅರ್ಬಿಟ್ರೇಶನ್​ ಫಾರ್​ ಸ್ಫೋರ್ಟ್ಸ್​ (ಸಿಎಎಸ್​) ಒಂದು ಸ್ವತಂತ್ರ ಸಂಸ್ಥೆಯಾಗಿದ್ದು, 1984ರಲ್ಲಿ ಇದನ್ನು ಸ್ಥಾಪನೆ ಮಾಡಲಾಯಿತು. ಕ್ರೀಡೆಗೆ ಸಂಬಂಧಿತ ವ್ಯಾಜ್ಯಗಳನ್ನು ಮಧ್ಯಸ್ಥಿಕೆ ಅಥವಾ ಸಂಧಾನ ಮೂಲಕ ಪರಿಹರಿಸಲು ಇದನ್ನು ಸ್ಥಾಪಿಸಲಾಯಿತು. ಇದರ ಪ್ರಧಾನ ಕಚೇರಿ ಸ್ವಿಟ್ಜರ್ಲೆಂಡ್​ನ ಲೌಸನ್ನೆಯಲ್ಲಿದೆ. ಅಲ್ಲದೆ, ನ್ಯೂಯಾರ್ಕ್​ ನಗರ ಮತ್ತು ಸಿಡ್ನಿಯಲ್ಲೂ ಇದರ ಕೋರ್ಟ್​ಗಳಿವೆ. ಒಲಿಂಪಿಕ್ಸ್​ ಆತಿಥ್ಯ ವಹಿಸಿರುವ ಪ್ಯಾರಿಸ್​ನಲ್ಲೂ ತಾತ್ಕಾಲಿಕ ಕೋರ್ಟ್​ ಸೆಟಪ್​ ಮಾಡಲಾಗಿದೆ.

ಈ ಸಿಎಎಸ್​ ಯಾವುದೇ ಕ್ರೀಡಾ ಸಂಸ್ಥೆಯಿಂದ ಸ್ವತಂತ್ರವಾಗಿದೆ ಮತ್ತು ಇಂಟರ್ನ್ಯಾಷನಲ್ ಕೌನ್ಸಿಲ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ (ICAS) ನ ಆಡಳಿತಾತ್ಮಕ ಮತ್ತು ಹಣಕಾಸು ಪ್ರಾಧಿಕಾರದ ಅಡಿಯಲ್ಲಿ ಇದು ಕಾರ್ಯನಿರ್ವಹಿಸುತ್ತದೆ. ಸಿಎಎಸ್ ಕ್ರೀಡಾ ಕ್ಷೇತ್ರದಲ್ಲಿನ ಕಾನೂನು ವಿವಾದಗಳನ್ನು ಮಧ್ಯಸ್ಥಿಕೆಯ ಮೂಲಕ ಪರಿಹರಿಸುತ್ತದೆ. ಸಾಮಾನ್ಯ ನ್ಯಾಯಾಲಯಗಳಂತೆಯೇ ತೀರ್ಪು ಪ್ರಕಟಿಸುತ್ತದೆ. ಅಲ್ಲದೆ, ಸಂಧಾನದ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಲು ಅವಕಾಶ ಸಹ ನೀಡುತ್ತದೆ.

ವ್ಯಾಜ್ಯಾಗಳನ್ನು ಸಂಧಾನದ ಮೂಲಕ ಪರಿಹರಿಸಲು ಸಂಧಾನ ಸಮಿತಿ ಇರುತ್ತದೆ. ಈ ಸಮಿತಿಯಲ್ಲಿ ಮೂವರು ಮಧ್ಯಸ್ಥಗಾರರು ಇರುತ್ತಾರೆ. ವಿವಾದದ ಸಂದರ್ಭದಲ್ಲಿ ಎದುರಾಳಿ ಮತ್ತು ಪ್ರತಿ ಎದುರಾಳಿ ಒಬ್ಬೊಬ್ಬ ಮಧ್ಯಸ್ಥಗಾರರನ್ನು ಆಯ್ಕೆ ಮಾಡುತ್ತಾರೆ. ಮೂರನೇ ಮಧ್ಯಸ್ಥಗಾರನನ್ನು ಸೂಕ್ತ ವಿಭಾಗದ ಅಧ್ಯಕ್ಷರು ಆಯ್ಕೆ ಮಾಡುತ್ತಾರೆ. ಕೆಲವೊಂದು ಪ್ರಕರಣಗಳಲ್ಲಿ ಒಬ್ಬರೇ ಮಧ್ಯಸ್ಥಗಾರರು ಇರುತ್ತಾರೆ.

ಇನ್ನು ಸಿಎಎಸ್​ ಅನೇಕ ಕ್ರೀಡಾ ವಿವಾದಗಳಲ್ಲಿ ತನ್ನ ಅಂತಿಮ ತೀರ್ಪನ್ನು ಪ್ರಕಟಿಸಿದ ಉದಾಹರಣೆಗಳು ಸಹ ಇವೆ. ಕೆಲವು ಸಂದರ್ಭಗಳಲ್ಲಿ ಸ್ವಿಟ್ಜರ್ಲೆಂಡ್‌ನ ಫೆಡರಲ್ ಸುಪ್ರೀಂಕೋರ್ಟ್‌ಗೆ ಮೇಲ್ಮನವಿಗಳು ಸಲ್ಲಿಕೆಯಾಗುವ ಸಾಧ್ಯತೆಯು ಇರುತ್ತದೆ. ಅಂತಾರಾಷ್ಟ್ರೀಯ ಕ್ರೀಡಾ ಸಮುದಾಯದೊಳಗಿನ ವಿವಾದಗಳನ್ನು ಪರಿಹರಿಸುವಲ್ಲಿ ಸಿಎಎಸ್​ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಕ್ರೀಡೆ ಸಂಬಂಧಿತ ವಿವಾದಗಳ ಪರಿಹಾರಕ್ಕಾಗಿ ವಿಶೇಷ ಮತ್ತು ಸಮರ್ಥ ವೇದಿಕೆಯನ್ನು ಇದು ಒದಗಿಸುತ್ತದೆ.

ವಿನೇಶ್​ ಅನರ್ಹಗೊಂಡಿದ್ದೇಕೆ?

ಮಹಿಳೆಯರ 50 ಕೆಜಿ ಕುಸ್ತಿ ಸ್ಪರ್ಧೆಯ ಸೆಮಿಫೈನಲ್‌ನಲ್ಲಿ ವಿನೇಶ್ ಪೋಗಟ್​ ಅವರು ಕ್ಯೂಬಾದ ಉಸ್ನೆಲಿಸ್ ಗುಜ್ಮನ್ ಲೋಪೆಜ್ ಅವರನ್ನು 5-0 ಅಂತರದಿಂದ ಸೋಲಿಸಿ ಫೈನಲ್ ತಲುಪಿದರು. ಫೈನಲ್ ಪಂದ್ಯಕ್ಕೂ ಮುನ್ನ ಮಂಗಳವಾರ ಆಕೆಯ ತೂಕವನ್ನು ಪರಿಶೀಲಿಸಲಾಯಿತು. ಆದರೆ, ವಿನೇಶ್ ಅವರು ನಿಗದಿತ 50 ಕೆಜಿಗಿಂತ 100 ಗ್ರಾಂಗಳಷ್ಟು ತೂಕವನ್ನು ಹೊಂದಿದ್ದರಿಂದ ಅನರ್ಹಗೊಳಿಸಲಾಯಿತು. ತೂಕ ಹೆಚ್ಚಾಗಿರುವುದು ವಿನೇಶ್​ ಅವರ ಅರಿವಿಗೆ ಬಂದಾಗ, ಅವರು ಕೂಡ ತೂಕ ನಷ್ಟಕ್ಕೆ ಹರಸಾಹಸ ಪಟ್ಟಿದ್ದಾರೆಂದು ತಿಳಿದುಬಂದಿದೆ. ವಿನೇಶ್ ತೂಕ ನಿಗದಿತ 50 ಕೆಜಿಗಿಂತ 2 ಕೆಜಿ ಹೆಚ್ಚಿತ್ತು ಎನ್ನಲಾಗಿದೆ. ಅದನ್ನು ಇಳಿಸಲು ರಾತ್ರಿಯಿಡೀ ಶ್ರಮಿಸಿದ್ದಾರೆ. ಜಾಗಿಂಗ್, ಸ್ಕಿಪ್ಪಿಂಗ್ ಮತ್ತು ಸೈಕ್ಲಿಂಗ್ ಮಾಡಿದ್ದಾರೆ. ಈ ರೀತಿ ಮಾಡಿದರೂ ನಿರೀಕ್ಷಿತ ಫಲಿತಾಂಶ ಬರದ ಕಾರಣ, ಆಕೆಯ ಕೋಚ್ ಮತ್ತು ಸಿಬ್ಬಂದಿ ಸೇರಿ ವಿನೇಶ್‌ ದೇಹದಿಂದ ಸ್ವಲ್ಪ ರಕ್ತವನ್ನು ಸಹ ತೆಗೆದಿದ್ದಾರೆ. ಅಲ್ಲದೆ, ಆಕೆಯ ಕೂದಲನ್ನೂ ಸಹ ಕತ್ತರಿಸಿದ್ದಾರೆ. ಇಷ್ಟೆಲ್ಲ ಪ್ರಯತ್ನಗಳನ್ನು ಮಾಡಿದರೂ ಅಂತಿಮ ಪರೀಕ್ಷೆಯ ವೇಳೆ 100 ಗ್ರಾಂ ಅಧಿಕ ತೂಕ ಹೊಂದಿದ್ದರು. ಹೀಗಾಗಿ ಒಲಿಂಪಿಕ್ಸ್​ ಸಂಘಟಕರು ಆಕೆಯನ್ನು ಅನರ್ಹಗೊಳಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net