ಖೇಲೋ ಇಂಡಿಯಾದಲ್ಲಿ ಹಳ್ಳಿ ಪ್ರತಿಭೆ

kelo jan 25 2020
Published on

ದೇಶಿ ಕ್ರೀಡೆ ಖೋ ಖೋ ಆಟದಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾನೆ ಕರುನಾಡ ಕುವರ ಲಕ್ಷಣ ಮಾರುತಿ ಹಳಿಗೌಡ್ರ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರಿನ ನಿವಾಸಿಯಾದ ಈ ಹಳ್ಳಿ ಪ್ರತಿಭೆ ಈಗ ರಾಷ್ಟ್ರೀಯ ಮಟ್ಟದಲ್ಲಿ ಮಿಂಚಲಿದ್ದಾನೆ.

ಅಸ್ಸಾಂನ ಗುವಾಹಟಿಯಲ್ಲಿ ನಡೆದ, ಕೇಂದ್ರ ಸರ್ಕಾರ ಆಯೋಜಿಸಿದ್ದ 3ನೇ ಖೇಲೋ ಇಂಡಿಯಾ ಸ್ಪರ್ಧೆಯಲ್ಲಿ ಕರ್ನಾಟಕದ ಪರವಾಗಿ ರಾಷ್ಟ್ರಮಟ್ಟದ ಖೋ ಖೋ ಪಂದ್ಯದಲ್ಲಿ ಭಾಗವಹಿಸುವ ಮೂಲಕ ಕರ್ನಾಟಕದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾನೆ.

ಶ್ರೀ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ 15 ವರ್ಷದ ಲಕ್ಷ್ಮಣ, 6 ವರ್ಷದ ಬಾಲಕನಿದ್ದಾಗಲೇ ಖೋ ಖೋ ಆಟದಲ್ಲಿ ಪಳಗಿದ್ದ. ಪಾಲಕರು ಕೂಡ ಈತನಿಗೆ ಉತ್ತೇಜನ ನೀಡುತ್ತಿದ್ದರು. ಆದರೆ ದುರದೃಷ್ಟವಶಾತ್ ಈತನ ತಂದೆ ತೀರಿ ಹೋದರು. ಈ ದುಃಖದ ನಡುವೆಯೂ ತನ್ನ ಗುರಿಯ ಸಾಧನೆ ಬಿಡದೇ ಇಂದು ವಿಖ್ಯಾತಿ ಗಳಿಸಿದ್ದಾನೆ ಈ ಬಾಲಕ. ಇವನ ಆಟದ ವೈಖರಿ ನೋಡಿ ಅದೇ ಶಾಲೆಯ ದೈಹಿಕ ಶಿಕ್ಷಣದ ಶಿಕ್ಷಕರಾದ ಹಾಗೂ ತಮ್ಮ ಖೋ ಖೋ ತಂಡವನ್ನು ಸತತ 3 ಬಾರಿ ರಾಷ್ಟ್ರಮಟ್ಟಕ್ಕೆ ಕೊಂಡೊಯ್ದ ಈರಣ್ಣಾ ಹಳಿಗೌಡ್ರ ಇವನಿಗೆ ಇನ್ನಷ್ಟು ಉತ್ತೇಜನ ನೀಡಿದರು.

ಇವರ ಮಾರ್ಗದರ್ಶನದಿಂದಾಗಿ ಈತ ಸ್ಕೂಲ್ ಗೇಮ್ ಫೆಡರೇಷನ್ ಆಫ್ ಇಂಡಿಯಾ ಆಯೋಜಿಸುವ ಶಾಲಾ ಮಕ್ಕಳ ಖೋ ಖೋ ಪಂದ್ಯಾವಳಿಯಲ್ಲಿ ಮೂರು ವರ್ಷಗಳಿಂದ ಭಾಗವಹಿಸುತ್ತಿದ್ದು, ಪ್ರತಿ ಬಾರಿಯೂ ರಾಷ್ಟ್ರಮಟ್ಟದಲ್ಲಿ ರಾಜ್ಯತಂಡವನ್ನು ಪ್ರತಿನಿಧಿಸುತ್ತಿದ್ದಾನೆ. ‘ಸತತ ಪರಿಶ್ರಮ, ಅಮ್ಮನ ಧೈರ್ಯ, ಚಿಕ್ಕಪ್ಪ ಹಾಗೂ ಸೋದರಮಾವಂದಿರ ಪ್ರೋತ್ಸಾಹದಿಂದ ನಾನು ಇಂದು ಈ ಮಟ್ಟಕ್ಕೆ ಬಂದಿರುವೆ’ ಎನ್ನುತ್ತಾನೆ ಲಕ್ಷ್ಮಣ.

ಪ್ರತಿನಿತ್ಯ ತನ್ನ ಅಭ್ಯಾಸದ ಜತೆಗೆ ಮನೆಯ ಜವಾಬ್ದಾರಿಯನ್ನೂ ನಿರ್ವಹಿಸಿ ಇಷ್ಟೊಂದು ಸಾಧನೆ ಮಾಡಿದ್ದು ನಮ್ಮೂರಿಗೆ ಕೀರ್ತಿ ಕಳಸವಿದ್ದಂತೆ ಎಂದು ಅವನ ಮಾರ್ಗದರ್ಶಕರು ಹೆಮ್ಮೆಪಡುತ್ತಾರೆ.

ಅನಿಲ ಬೆಳಕೂಡ ಬೆಳಗಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net