VIDEO | ಮುತ್ತಯ್ಯ ಮುರಳೀಧರನ್ ಬಯೋಪಿಕ್ ಹೆಸರು, ಮೋಷನ್ ಪೋಸ್ಟರ್ ಅನಾವರಣ

murli 800 web
Published on

ಚೆನ್ನೈ: ಶ್ರೀಲಂಕಾದ ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳೀಧರನ್ ಅವರ ಬಯೋಪಿಕ್ ತಮಿಳಿನಲ್ಲಿ ನಿರ್ಮಾಣಗೊಳ್ಳುತ್ತಿರುವುದು ಮತ್ತು ಇದರಲ್ಲಿ ಸ್ಟಾರ್ ನಟ ವಿಜಯ್ ಸೇತುಪತಿ ನಟಿಸಲಿದ್ದಾರೆ ಎಂಬುದು ಈಗಾಗಲೆ ಸುದ್ದಿಯಾಗಿತ್ತು. ಇದೀಗ ಸಿನಿಮಾದ ಹೆಸರು ಮತ್ತು ಮೋಷನ್ ಪೋಸ್ಟರ್ ಕೂಡ ಅನಾವರಣಗೊಂಡಿದೆ.

ಮುರಳೀಧರನ್ ಟೆಸ್ಟ್ ಕ್ರಿಕೆಟ್ ಕಬಳಿಸಿರುವ ವಿಶ್ವದಾಖಲೆಯ 800 ವಿಕೆಟ್‌ಗಳ ಪ್ರತೀಕವಾಗಿ ಸಿನಿಮಾಗೆ ‘800’ ಎಂದು ಹೆಸರಿಡಲಾಗಿದೆ. ಇದರೊಂದಿಗೆ ಬಿಡುಗಡೆಯಾಗಿರುವ ಮೋಷನ್ ಪೋಸ್ಟರ್‌ನಲ್ಲಿ ಗ್ರಾಫಿಕ್‌ಗಳ ಮೂಲಕ ಸಿನಿಮಾದಿಂದ ಏನನ್ನು ನಿರೀಕ್ಷಿಸಬಹುದು ಎಂಬ ಬಗ್ಗೆ ಚಿಕ್ಕ ಸುಳಿವು ನೀಡಲಾಗಿದೆ.

ಶ್ರೀಲಂಕಾದಲ್ಲಿ ಯುದ್ಧದ ವಾತಾವರಣದ ನಡುವೆ ಮುರಳೀಧರನ್ ಯಾವ ರೀತಿ ಬೆಳೆದುಬಂದರು. ‘ಚೆಂಡು ಎಸೆಯುತ್ತಾರೆ’ ಆಸ್ಟ್ರೇಲಿಯಾದಲ್ಲಿ ಅಂಪೈರ್‌ರಿಂದ ತೀರ್ಪು ಎದುರಿಸಿದ ಮತ್ತು ಬೌಲಿಂಗ್ ಶೈಲಿಯ ಕಠಿಣ ಪರೀಕ್ಷೆಗಳನ್ನು ಎದುರಿಸಿದ ಬಗ್ಗೆ ಸಿನಿಮಾದಲ್ಲಿ ಚಿತ್ರಣಗಳಿರುವುದು ಸ್ಪಷ್ಟವಾಗಿದೆ.

‘ಸಿನಿಮಾದಲ್ಲಿ ವಿಜಯ್ ಸೇತುಪತಿ ಅವರಂಥ ನಟ ನನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯ. ಕಳೆದ ಕೆಲ ತಿಂಗಳಿನಿಂದ ಸಿನಿಮಾದ ಕ್ರಿಯೇಟಿವ್ ಟೀಮ್ ನನ್ನೊಂದಿಗೆ ಕೆಲಸ ಮಾಡಿದೆ. ಮುಂದಿನ ದಿನಗಳಲ್ಲೂ ಈ ಪ್ರಾಜೆಕ್ಟ್‌ಗೆ ನನ್ನ ಪೂರ್ಣ ಬೆಂಬಲ ನೀಡುತ್ತೇನೆ’ ಎಂದು ಮುರಳೀಧರನ್ ಈ ಮುನ್ನ ಹೇಳಿದ್ದರು.

ಸಿನಿಮಾವನ್ನು ಈ ವರ್ಷದ ಅಂತ್ಯದೊಳಗೆ ಬಿಡುಗಡೆ ಮಾಡುವ ಯೋಜನೆ ಇದ್ದರೂ, ಕರೊನಾ ಹಾವಳಿಯಿಂದಾಗಿ ಇದಕ್ಕೆ ಹಿನ್ನಡೆಯಾಗಿದೆ. ತಮಿಳಿನಲ್ಲಿ ಸಿನಿಮಾ ಸಿದ್ಧವಾಗುತ್ತಿದ್ದರೂ, ಇತರ ಕೆಲ ಭಾಷೆಗಳಲ್ಲೂ ಡಬ್ಬಿಂಗ್ ಮಾಡಿ ವಿಶ್ವದೆಲ್ಲೆಡೆ ಸಿನಿಮಾವನ್ನು ಬಿಡುಗಡೆ ಮಾಡುವ ಯೋಜನೆಯೂ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net