

ವಡೋದರ: ವೇಗಿ ವಾಸುಕಿ ಕೌಶಿಕ್ (51ಕ್ಕೆ 5) ಚೊಚ್ಚಲ ಐದು ವಿಕೆಟ್ ಗೊಂಚಲು ಹಾಗೂ ಶತಕ ವಂಚಿತ ಅನೀಶ್ ಕೆವಿ (93 ರನ್, 83 ಎಸೆತ, 9 ಬೌಂಡರಿ, 2 ಸಿಕ್ಸರ್) ಆಟದ ನೆರವಿನಿಂದ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಸೌರಾಷ್ಟ್ರ ಎದುರು 60 ರನ್‌ಗಳ ಬೃಹತ್ ಗೆಲುವು ದಾಖಲಿಸಿದೆ. ಇದರೊಂದಿಗೆ ಹೊಸವರ್ಷ ಆರಂಭಿಸಿರುವ ಮಯಾಂಕ್ ಅಗರ್ವಾಲ್ ಪಡೆ ಆಡಿರುವ 5 ಪಂದ್ಯಗಳಲ್ಲಿ 4 ಗೆಲುವು, 1 ಸೋಲಿನೊಂದಿಗೆ 16 ಅಂಕ ಕಲೆಹಾಕಿ ನಾಕೌಟ್ ಸ್ಥಾನ ಬಹುತೇಕ ಖಾತ್ರಿಪಡಿಸಿಕೊಂಡಿದೆ.
ಎಡಿಎಸ್‌ಎ ರೈಲ್ವೇಸ್ ಗ್ರೌಂಡ್‌ನಲ್ಲಿ ಶುಕ್ರವಾರ ನಡೆದ ಸಿ ಗುಂಪಿನ ಪಂದ್ಯದಲ್ಲಿ ಟಾಸ್ ಸೋತ ಕರ್ನಾಟಕ ಮೊದಲು ಬ್ಯಾಟಿಂಗ್‌ಗೆ ಇಳಿಯಿತು. ಅಗರ್ವಾಲ್ (69 ರನ್, 65 ಎಸೆತ, 7 ಬೌಂಡರಿ, 1 ಸಿಕ್ಸರ್) ಹಾಗೂ ನಿಕಿನ್ ಜೋಸ್ (34) ಉತ್ತಮ ಆರಂಭ ಒದಗಿಸಿದರು. ಬಳಿಕ ಅಗರ್ವಾಲ್-ಅನೀಶ್ ನಡುವಿನ ಶತಕದ ಜತೆಯಾಟದ ನೆರವಿನಿಂದ 7 ವಿಕೆಟ್‌ಗೆ 349 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಪ್ರತಿಯಾಗಿ ಹಾರ್ವಿಕ್ ದೇಸಾಯಿ (114 ರನ್, 102 ಎಸೆತ, 10 ಬೌಂಡರಿ, 4 ಸಿಕ್ಸರ್) ಶತಕದ ಬಲದಿಂದ ತಿರುಗೇಟು ನೀಡಿದ ಸೌರಾಷ್ಟ್ರ 2 ವಿಕೆಟ್‌ಗೆ 241 ರನಗಳಿಸಿ ಸುಸ್ಥಿತಿಯಲ್ಲಿತ್ತು.ನಂತರ ವಿ.ಕೌಶಿಕ್ ಹಾಗೂ ಶ್ರೇಯಸ್ ಗೋಪಾಲ್ (63ಕ್ಕೆ 4)ದಾಳಿಗೆ ತತ್ತರಿಸಿ 47.5 ಓವರ್‌ಗಳಲ್ಲಿ 289 ರನ್‌ಗಳಿಗೆ ಸರ್ವಪತನ ಕಂಡಿತು.
ಕರ್ನಾಟಕ: 7 ವಿಕೆಟ್‌ಗೆ 349 (ನಿಕಿನ್ 34, ಮಯಾಂಕ್ 69, ಅನೀಶ್ 93, ಸ್ಮರಣ್ 40, ಕೆಎಲ್ ಶ್ರೀಜಿತ್ 40, ಅಭಿನವ್ 44*, ಹಾರ್ದಿಕ್ 27, ಶ್ರೇಯಸ್ ಗೋಪಾಲ್ 7*, ಡಿಎ ಜಡೇಜಾ 61ಕ್ಕೆ 3, ಪ್ರಣವ್ 59ಕ್ಕೆ 2).
ಸೌರಾಷ್ಟ್ರ: 47.5 ಓವರ್‌ಗಳಲ್ಲಿ 289 (ಹಾರ್ವಿಕ್ 114, ತಾರಂಗ್ 33, ಜಯ್ 40, ಅರ್ಪಿತ್ 40, ಚಿರಾಗ್ 14, ರುಚಿತ್ 13, ವಿ.ಕೌಶಿಕ್ 51ಕ್ಕೆ 5, ಶ್ರೇಯಸ್ ಗೋಪಾಲ್ 63ಕ್ಕೆ 4).
ಮಯಾಂಕ್-ಅನೀಶ್ ಆಧಾರ
ಹಾಲಿ ಟೂರ್ನಿಯಲ್ಲಿ ಭರ್ಜರಿ ಾರ್ಮ್ ಮುಂದುವರಿಸಿರುವ ಮಯಾಂಕ್ ಅಗರ್ವಾಲ್ ಜತೆಯಾಗಿ ನಿಕಿನ್ ರಾಜ್ಯಕ್ಕೆ ಉತ್ತಮ ಆರಂಭ ಒದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 46 ಎಸೆತಗಳಲ್ಲಿ 41 ರನ್ ಪೇರಿಸಿದರು. ನಂತರ ಅಗರ್ವಾಲ್ ಜತೆಯಾದ ಅನೀಶ್ ತಂಡದ ಮೊತ್ತ ಹೆಚ್ಚಿಸಿದರು. ಈ ಜೋಡಿ ಎರಡನೇ ವಿಕೆಟ್‌ಗೆ 120 ಎಸೆತಗಳಲ್ಲಿ 137 ರನ್ ಕಸಿದರು. ಅಗರ್ವಾಲ್ ಸತತ 4ನೆ ಪಂದ್ಯದಲ್ಲಿ 50 ಪ್ಲಸ್ ರನ್ ಕೊಡುಗೆ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ಸ್ಮರಣ್ (40), ಕೆಎಲ್ ಶ್ರೀಜಿತ್ (29) ಹಾಗೂ ಹಾರ್ದಿಕ್ ರಾಜ್ (27) ತಂಡಕ್ಕೆ ನೆರವಾದರು. ಸ್ಲಾಗ್ ಓವರ್‌ಗಳಲ್ಲಿ ಅಭಿನವ್ ಮನೋಹರ್ (44*) ಬಿರುಸಿನಾಟದಿಂದ ಕರ್ನಾಟಕ 350 ರನ್‌ಗಳ ಸವಾಲಿನ ಗುರಿ ನೀಡಿತು.
ಕರ್ನಾಟಕಕ್ಕೆ ಮುಂದಿನ ಪಂದ್ಯ
ಎದುರಾಳಿ: ನಾಗಾಲ್ಯಾಂಡ್
ಯಾವಾಗ: ಭಾನುವಾರ
ಆರಂಭ: ಬೆಳಗ್ಗೆ 9