ವಿಜಯ್ ಹಜಾರೆ ಟ್ರೋಫಿ ನಾಕೌಟ್: ಕರ್ನಾಟಕ ತಂಡಕ್ಕೆ ಪಡಿಕ್ಕಲ್, ಪ್ರಸಿದ್ಧ ಕೃಷ್ಣ ಬಲ

New Project (2)
Published on

ಬೆಂಗಳೂರು: ಆಸ್ಟ್ರೇಲಿಯಾ ಪ್ರವಾಸ ಮುಕ್ತಾಯಗೊಂಡ ಬೆನ್ನಲ್ಲೇ ಭಾರತ ಟೆಸ್ಟ್ ತಂಡದ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್ ಹಾಗೂ ವೇಗಿ ಪ್ರಸಿದ್ಧ ಕೃಷ್ಣ ಕರ್ನಾಟಕ ತಂಡಕ್ಕೆ ಮರಳಿದ್ದಾರೆ. ವಡೋದರದಲ್ಲಿ ಜನವರಿ 9ರಿಂದ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿ ದೇಶೀಯ ಏಕದಿನ ಟೂರ್ನಿಯ ನಾಕೌಟ್ ಪಂದ್ಯಗಳಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಸೋಮವಾರ ಕರ್ನಾಟಕ ತಂಡವನ್ನು ಪ್ರಕಟಿಸಿದೆ. 16 ಆಟಗಾರರ ತಂಡದಲ್ಲಿ ಮೂರು ಬದಲಾವಣೆ ಮಾಡಲಾಗಿದೆ.

ಪಡಿಕ್ಕಲ್, ಪ್ರಸಿದ್ಧ ಕೃಷ್ಣ ಆಗಮನ ರಾಜ್ಯ ತಂಡಕ್ಕೆ ಹೆಚ್ಚಿನ ಬಲ ತುಂಬಲಿದ್ದು, ಆಲ್ರೌಂಡರ್ ಯಶೋವರ್ಧನ್ ಪರಂತಪ್ ಇನ್ನೋರ್ವ ಹೊಸ ಸೇರ್ಪಡೆಯಾಗಿದ್ದಾರೆ. ಲೀಗ್ ಹಂತದ ಪಂದ್ಯದಲ್ಲಿ ಗಾಯದ ಸಮಸ್ಯೆಗೆ ತುತ್ತಾಗಿರುವ ವೇಗಿ ವೈಶಾಕ್ ವಿಜಯ್ ಕುಮಾರ್ ಜತೆಗೆ ಕಿಶನ್ ಎಸ್. ಬಿದರೆ ಮತ್ತು ಆಲ್ರೌಂಡರ್ ಮನೋಜ್ ಭಾಂಡಗೆ ಅವರನ್ನು ನಾಕೌಟ್ ಪಂದ್ಯಗಳಿಂದ ಕೈ ಬಿಡಲಾಗಿದೆ. ಕರ್ನಾಟಕ ತಂಡ ಶನಿವಾರ ಬರೋಡ ಎದುರು ಕ್ವಾರ್ಟರ್‌ೈನಲ್‌ನಲ್ಲಿ ಕಾದಾಟ ನಡೆಸಲಿದೆ.

ರಾಜ್ಯ ತಂಡ: ಮಯಾಂಕ್ ಅಗರ್ವಾಲ್ (ನಾಯಕ), ಶ್ರೇಯಸ್ ಗೋಪಾಲ್ (ಉಪನಾಯಕ), ನಿಕಿನ್ ಜೋಸ್, ದೇವದತ್ ಪಡಿಕ್ಕಲ್, ಅನೀಶ್ ಕೆವಿ, ಸ್ಮರಣ್ ಆರ್., ಶ್ರೀಜಿತ್ ಕೆಎಲ್ (ವಿ.ಕೀ), ಅಭಿನವ್ ಮನೋಹರ್, ಹಾರ್ದಿಕ್ ರಾಜ್, ಪ್ರಸಿದ್ಧ ಕೃಷ್ಣ, ಕೌಶಿಕ್ ವಿ., ವಿದ್ಯಾಧರ್ ಪಾಟೀಲ್, ಅಭಿಲಾಷ್ ಶೆಟ್ಟಿ, ಪ್ರವೀಣ್ ದುಬೆ, ಲವನೀತ್ ಸಿಸೋಡಿಯಾ (ವಿ.ಕೀ) ಹಾಗೂ ಯಶೋವರ್ಧನ್ ಪರಂತಪ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net