

ಲಿಸ್ಬಾನ್: ಪೋರ್ಚುಗಲ್ನ ಕ್ರಿಸ್ಟಿಯಾನೋ ರೊನಾಲ್ಡೋ ಅವರು ಅಂತರರಾಷ್ಟ್ರೀಯ ಫುಟ್ಬಾಲ್ನಲ್ಲಿ ಅತಿ ಹೆಚ್ಚು ಗೋಲ್ಗಳನ್ನು ಸಾಧಿಸಿರುವ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಇಂದು(ಸೆಪ್ಟೆಂಬರ್2) ನಡೆದ ಫಿಫಾ ವರ್ಲ್ಡ್ ಕಪ್ 2022 ಪಂದ್ಯಾವಳಿಯ ಖ್ವಾಲಿಫೈಯರ್ಸ್ನಲ್ಲಿ ತಮ್ಮ ತಂಡಕ್ಕೆ ಅರ್ಹತೆ ಗಳಿಸುತ್ತಾ, ಈ ಮೈಲಿಗಲ್ಲನ್ನು ಸಾಧಿಸಿದ್ದಾರೆ.
ಪೋರ್ಚುಗಲ್ನಲ್ಲಿರುವ 'ಎಸ್ಟಾಡಿಯೊ ಅಲ್ಗಾರ್ವೆ' ಕ್ರೀಡಾಂಗಣದಲ್ಲಿ ಐರ್ಲೆಂಡ್ ತಂಡದ ವಿರುದ್ಧದ ರೋಮಾಂಚಕ ಫುಟ್ಬಾಲ್ ಪಂದ್ಯದಲ್ಲಿ ಪೋರ್ಚುಗಲ್ ತಂಡ 2:1 ಸ್ಕೋರ್ನಿಂದ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ 'ಗೋಲ್ ಮೆಷಿನ್' ಎಂದು ಕರೆಯಲ್ಪಡುವ 36 ವರ್ಷದ ರೊನಾಲ್ಡೊ ಈ ಐತಿಹಾಸಿಕ ಗೋಲ್ ಪಡೆದ ವಿಡಿಯೋಗಳು ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಪಂದ್ಯದ ಕೊನೆಯ ಕ್ಷಣಗಳಲ್ಲಿ ರೊನಾಲ್ಡೊ ತಮ್ಮ ಸಹಆಟಗಾರ ಪಾಸ್ ಮಾಡಿದ ಬಾಲನ್ನು ತಲೆಯಿಂದ ಹೊಡೆದು ಎದುರಾಳಿಗಳ ಗೋಲ್ಗೆ ಕಳುಹಿಸಿದರು. ತನ್ಮೂಲಕ ತಂಡಕ್ಕಾಗಿ ಈಖ್ವಲೈಸರ್ ಪಡೆದದ್ದಲ್ಲದೆ, ಇರಾನಿನ ಆಟಗಾರ ಅಲಿ ಡಾಯಿ ಅವರ 109 ಅಂತರರಾಷ್ಟ್ರೀಯ ಗೋಲ್ಗಳ ದಾಖಲೆಯನ್ನು ರೊನಾಲ್ಡೊ ಮುರಿದರು. ನಂತರ ಮತ್ತೊಂದು ಅಂತಿಮ ಕ್ಷಣದ ಗೋಲ್ ಹೊಡೆದು, ಪೋರ್ಚುಗಲ್ ತಂಡಕ್ಕೆ ಜಯ ಗಳಿಸಿಕೊಟ್ಟರು. ಅದರೊಂದಿಗೇ, ತಮ್ಮ ಈವರೆಗಿನ ಗೋಲ್ಗಳ ಸಂಖ್ಯೆಯನ್ನು 111ಕ್ಕೆ ಏರಿಸಿಕೊಂಡರು.
ತಮ್ಮ ತಂಡದ ಗೆಲುವನ್ನು ಆಚರಿಸುತ್ತಾ ರೊನಾಲ್ಡೊ ತಮ್ಮ ಅಂಗಿಯನ್ನು ತೆಗೆದು ಸಂಭ್ರಮಿಸಿದರು. ಆದರೆ ಇದಕ್ಕಾಗಿ ಎಲ್ಲೋ ಕಾರ್ಡ್ ಪಡೆದ ರೊನಾಲ್ಡೊ ಮುಂದಿನ ಮಂಗಳವಾರ ನಡೆಯುವ ಅಜರ್ಬೈಜನ್ ವಿರುದ್ಧದ ಪಂದ್ಯದಲ್ಲಿ ಆಡಲು ಸಾಧ್ಯವಾಗುವುದಿಲ್ಲ. ತದನಂತರ ಮುಂದಿನ ಶನಿವಾರ ತಮ್ಮ ಮ್ಯಾಂಚೆಸ್ಟರ್ ಯುನೈಟೆಡ್ ತಂಡ ನ್ಯೂಕಾಸಲ್ ಯುನೈಟೆಡ್ ವಿರುದ್ಧ ಆಡಲಿರುವ ಪಂದ್ಯದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)