

ಹೈದರಾಬಾದ್: ಇಂದಿನಿಂದ ಭಾರತದಲ್ಲಿ ವಿಶ್ವಕಪ್ ಮಹಾಹಬ್ಬ ಶುರುವಾಗಲಿದೆ. ಆದರೆ, ಅದಕ್ಕೂ ಮುನ್ನವೇ ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿರುವ ಕೊಳಕು ಸೀಟುಗಳ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಲ್ಲಿನ ಆಡಳಿತ ಮಂಡಳಿ ವಿರುದ್ಧ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ.
ಗಮನಾರ್ಹ ಸಂಗತಿ ಏನೆಂದರೆ ಹೈದರಾಬಾದ್ನ ಉಪ್ಪಾಳದಲ್ಲಿರುವ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ವಿಶ್ವಕಪ್ ಟೂರ್ನಿಯ ಮೂರು ಪಂದ್ಯಗಳು ನಡೆಯಲಿವೆ.
ಕ್ರಿಕೆಟ್ ಬರಹಗಾರ, ವಿಮರ್ಶಕ ಮತ್ತು ವೀಕ್ಷಕ ವಿವರಣೆಗಾರ ಸಿ.ವೆಂಕಟೇಶ್ ಅವರು ಸ್ಟೇಡಿಯಂನ ಸೀಟುಗಳ ಸ್ಥಿತಿಯನ್ನು ಪ್ರದರ್ಶಿಸುವ ಅನೇಕ ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ಕ್ರೀಡಾಭಿಮಾನಿಗಳು ಕುಳಿತುಕೊಳ್ಳುವ ಸೀಟುಗಳು ಪಕ್ಷಿಗಳ ಹಿಕ್ಕೆಗಳಿಂದಲೇ ತುಂಬಿ ಹೋಗಿವೆ. ನಿನ್ನೆ (ಅ.04) ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನದ ನಡುವೆ ಇದೇ ಸ್ಟೇಡಿಯಂನಲ್ಲಿ ಅಭ್ಯಾಸ ಪಂದ್ಯ ನಡೆಯಿತು. ಈ ವೇಳೆ ಕೊಳಕು ಸೀಟುಗಳ ದರ್ಶನವಾಗಿದೆ.
ಉಪ್ಪಾಳ್ ಸ್ಟೇಡಿಯಂನಲ್ಲಿ ಯಾವುದು ಬದಲಾವಣೆಯಾಗಿಲ್ಲ. ಕೆಲವು ವಿಂಡೋ ಡ್ರೆಸ್ಸಿಂಗ್ ಮತ್ತು ಪ್ರೇಕ್ಷಕರ ಮೂಲಸೌಕರ್ಯವನ್ನು ಮಾತ್ರ ಪೂರ್ಣವಾಗಿ ಕಾಳಜಿ ವಹಿಸಲಾಗಿಲ್ಲ ಎಂದು ವೆಂಕಟೇಶ್ ಅವರು ಸ್ಟೇಡಿಯಂ ಮತ್ತು ಕೊಳಕು ಸೀಟುಗಳು ಫೋಟೋವನ್ನು ಶೇರ್ ಮಾಡಿಕೊಂಡು ಅಸಮಾಧಾನ ಹೊರಹಾಕಿದ್ದಾರೆ.
ಅನೇಕರು ಫೋಟೋದ ಅಧಿಕೃತತೆಯ ಬಗ್ಗೆ ವೆಂಕಟೇಶ್ ಅವರನ್ನು ಪ್ರಶ್ನೆ ಮಾಡಿದ್ದು, ಮತ್ತೊಂದು ಫೋಟೋ ಶೇರ್ ಮಾಡುವ ಮೂಲಕ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ಪಂದ್ಯದ ನಡುವೆ ಕೊಳಕು ಸೀಟುಗಳ ದೃಶ್ಯಗಳುಳ್ಳ ವಿಡಿಯೋವನ್ನು ಸಹ ಶೇರ್ ಮಾಡುವ ಮೂಲಕ ಪ್ರಶ್ನಿಸಿದವರಿಗೆ ಸಾಕ್ಷಿ ಸಮೇತ ಉತ್ತರ ನೀಡಿದ್ದಾರೆ.
ನಾನು ಶೇರ್ ಮಾಡಿದ ಫೋಟೋಗಳು ಹಳೆಯದು ಎಂದವರಿಗೆ ಈ ಫೋಟೋಗಳು. ನಾನು ಮೈದಾನದಲ್ಲಿ ತುಂಬಾ ಪ್ರಸ್ತುತನಾಗಿದ್ದೆ ಎಂದು ವೆಂಕಟೇಶ್ ಬರೆದುಕೊಂಡಿದ್ದಾರೆ. ಆದರೆ, ದೇಶದ ಹೊರಗಿರುವ ಕೆಲವರು ಇದನ್ನೇ ಬಂಡವಾಳ ಮಾಡಿಕೊಂಡು ಭಾರತವನ್ನು ದೂಷಿಸುತ್ತಿದ್ದಾರೆ. ಅವರಿಗೆ ಹೇಳಬಯಸುವುದೇನೆಂದರೆ, ಇಡೀ ಸ್ಟೇಡಿಯಂ ಈ ರೀತಿ ಇಲ್ಲ. ಕೊಳಕು ಆಸನಗಳು ಪಶ್ಚಿಮ ಟೆರೇಸ್‌ನಲ್ಲಿ ಮಾತ್ರ ಕಂಡುಬಂದವು. ಆದರೆ, ಉಳಿದ ಕ್ರೀಡಾಂಗಣವನ್ನು ಹೊಚ್ಚ ಹೊಸ ಸೀಟುಗಳೊಂದಿಗೆ ನವೀಕರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ವಿಶ್ವಕಪ್ಗು ಮೊದಲು ಎಲ್ಲ ಕುರ್ಚಿಗಳನ್ನು ಬದಲಾಯಿಸಲು ಹೈದರಾಬಾದ್ ಕ್ರಿಕೆಟ್ ಅಸೊಸಿಯೇಸನ್ಗೆ ಸಾಕಷ್ಟು ಸಮಯ ಇಲ್ಲದಿರುವಂತೆ ಕಾಣುತ್ತದೆ. ಆದರೆ, ಪಂದ್ಯಕ್ಕೂ ಮುನ್ನ ಹಳೆಯ ಕುರ್ಚಿಗಳನ್ನು ಸ್ವಚ್ಛಗೊಳಿಸಲಾಗಿದೆ. ಸ್ಟೇಡಿಯಂನಲ್ಲಿನ ಉಳಿದ ಸೌಲಭ್ಯಗಳು ಅತ್ಯುತ್ತಮವಾಗಿದ್ದು, ಭಾರತದ ಆತಿಥ್ಯ ಸಾಮರ್ಥ್ಯದ ಬಗ್ಗೆ ಯಾರಿಗೂ ಯಾವುದೇ ಅನುಮಾನ ಬೇಡ ಎಂದು ವೆಂಕಟೇಶ್ ಹೇಳಿದ್ದಾರೆ.
ಅಂದಹಾಗೆ 2023ರ ಐಸಿಸಿ ವಿಶ್ವಕಪ್‌ಗೂ ಮುಂಚಿತವಾಗಿ ಹತ್ತು ಅಭ್ಯಾಸ ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಹೈದರಾಬಾದ್ ಆಯೋಜಿಸಿತ್ತು. 15 ಎಕರೆಗಳಷ್ಟು ವಿಸ್ತಾರವಾದ ರಾಜೀವ್ ಗಾಂಧಿ ಕ್ರೀಡಾಂಗಣವು 39,200 ಆಸನ ಸಾಮರ್ಥ್ಯವನ್ನು ಹೊಂದಿದೆ. (ಏಜೆನ್ಸೀಸ್)