

ಮೆಲ್ಬೋರ್ನ್: ಕ್ರೀಡಾ ಚಟುವಟುಟಿಕೆಗಳಿಗೆ ಮಳೆ, ಮಂದಬೆಳಕು ಮತ್ತಿತರ ಪ್ರತಿಕೂಲ ಹವಾಮಾನಗಳಿಂದ ಅಡಚಣೆಯಾಗುವುದು ಸಾಮಾನ್ಯ. ಕೆಲವೊಮ್ಮೆ ಪ್ರೇಕ್ಷಕರು ಕ್ರೀಡಾಂಗಣಕ್ಕೆ ನುಗ್ಗಿ ಪಂದ್ಯಗಳಿಗೆ ಅಡ್ಡಿ ಪಡಿಸುತ್ತಾರೆ. ಆದರೆ ಈಗ ಕರೊನಾ ಹಾವಳಿಯಿಂದಾಗಿ ಬಹುತೇಕ ಎಲ್ಲ ಕ್ರೀಡಾಸ್ಪರ್ಧೆಗಳು ಖಾಲಿ ಕ್ರೀಡಾಂಗಣಗಳಲ್ಲೇ ನಡೆಯುತ್ತಿವೆ. ಈ ನಡುವೆ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ನಲ್ಲಿ ನಡೆದ ಫುಟ್ಬಾಲ್ ಪಂದ್ಯವೊಂದಕ್ಕೆ ಅನಿರೀಕ್ಷಿತವಾಗಿ ಅಡಚಣೆ ಉಂಟಾಗಿದೆ. ಇದಕ್ಕೆ ಕಾರಣ ಕಾಂಗರೂಗಳು ಮೈದಾನಕ್ಕೆ ನುಗ್ಗಿದ್ದು!
ಕಮ್ಯುನಿಟಿ ಫುಟ್ಬಾಲ್ ಪಂದ್ಯದ ವೇಳೆ ಕಾಂಗರೂಗಳು ಮೈದಾನಕ್ಕೆ ನುಗ್ಗಿದ ದೃಶ್ಯಗಳು ಕ್ಯಾಮರಾದಲ್ಲೂ ಸೆರೆಯಾಗಿದ್ದು, ಈ ವಿಡಿಯೋ ಈಗ ವೈರಲ್ ಆಗಿದೆ. ಆಸ್ಟ್ರೇಲಿಯನ್ ಫುಟ್ಬಾಲ್ ಲೀಗ್ನ ಟ್ವಿಟರ್ ಖಾತೆಯಲ್ಲೂ ಈ ದೃಶ್ಯದ ವಿಡಿಯೋ ಪ್ರಕಟಗೊಂಡಿದ್ದು, ಲಕ್ಷಾಂತರ ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.