

ಲಂಡನ್: ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯಗಳನ್ನು ಆಗಾಗ್ಗೆ ಹಂಚಿಕೊಳ್ಳುವ ಮಾಜಿ ಇಂಗ್ಲೆಂಡ್ ನಾಯಕ ಮೈಕೆಲ್ ವಾಘನ್ ಟ್ವಿಟರ್‌ನಲ್ಲಿ ನಗುತರಿಸುವ ಕ್ರಿಕೆಟ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಯುರೋಪಿಯನ್ ಕ್ರಿಕೆಟ್ ಸರಣಿಯ ಪಂದ್ಯವೊಂದರಲ್ಲಿ ನಡೆದ ಕೆಲವು ವಿಲಕ್ಷಣ ಫೀಲ್ಡಿಂಗ್ ಪ್ರಯತ್ನಗಳನ್ನು ಈ ವಿಡಿಯೋ ತೋರಿಸುತ್ತದೆ.
ವರ್ಮ್‌ಡೊ ಸಿಸಿ ಆಟಗಾರರು ಗೊಂದಲ ಪಟ್ಟುಕೊಂಡು ಚೆಂಡನ್ನು ಮತ್ತೆ ಮತ್ತೆ ಬಿಟ್ಟು, ಸ್ಟಾಕ್‌ಹೋಮ್ ಸೂಪರ್ ಕಿಂಗ್ಸ್ ಬ್ಯಾಟ್ಸ್‌ಮನ್‌ಗಳಿಗೆ ನಾಲ್ಕು ರನ್‌ಗಳನ್ನು ಪಡೆಯುವ ಅವಕಾಶ ನೀಡುವ ಈ ಪ್ರಸಂಗ ಕ್ರಿಕೆಟ್ ಅಭಿಮಾನಿಗಳಲ್ಲಿ ನಗೆ ಉಕ್ಕಿಸಿದೆ. ಈ ತಮಾಷೆಯ ವೀಡಿಯೋಗೆ ಬಲಗೈ ಆರಂಭಿಕ ಬ್ಯಾಟ್ಸ್‌ಮನ್ ಆಗಿದ್ದ ವಾಘನ್, "ನೌ ದಿಸ್ ಈಸ್ ಪ್ರಾಪರ್ ಕ್ರಿಕೆಟ್ !!" (ಸರಿಯಾದ ಕ್ರಿಕೆಟ್ ಅಂದರೆ ಇದು ನೋಡಿ) ಎನ್ನುವ ಶೀರ್ಷಿಕೆ ಕೊಟ್ಟು ವ್ಯಂಗ್ಯ ಮಾಡಿದ್ದಾರೆ! ನೀವೂ ಆ ವಿಡಿಯೋ ನೋಡಿ -
ಈ ವೀಡಿಯೊವನ್ನು ಅವರ ಅಭಿಮಾನಿಗಳು ಉತ್ತಮವಾಗಿ ಸ್ವೀಕರಿಸಿದ್ದಾರೆ, ಅನೇಕರು ವೀಡಿಯೋದಲ್ಲಿ ಕಾಣುವ ವಿಭಿನ್ನ ತಮಾಷೆಯ ಅಂಶಗಳನ್ನು ಎತ್ತಿತೋರಿಸಿದ್ದಾರೆ. ಫೀಲ್ಡರ್ಗಳು ಚೆಂಡನ್ನು ಹೇಗೆ ಹೇಗೋ ಎಸೆಯುತ್ತಿದ್ದರೆ ರನ್ ಪಡೆಯುತ್ತಿರುವ ಬ್ಯಾಟ್ಸ್ಮನ್ಗಳು ಕೂಡ ತಮ್ಮದೇ ಸವಾಲುಗಳನ್ನು ಎದುರಿಸುವುದನ್ನು ಕಾಣಬಹುದು. ಏಕೆಂದರೆ ರನ್ನರ್ ಓಡುತ್ತಾ ಇರಬೇಕಾದರೆ ಅವನ ಪ್ಯಾಡ್ ಉದುರಿಹೋಗುತ್ತದೆ!
ಇದನ್ನು ಗಮನಿಸಿದ ಅಭಿಮಾನಿಯೊಬ್ಬರು, "ನೀವು ಪ್ರತಿ ಬಾರಿ ನೋಡಿದಾಗಲೂ ಹೊಸದೊಂದು ಅಂಶವನ್ನು ಗುರುತಿಸಬಹುದು, ನನ್ನ ನೆಚ್ಚಿನ ಭಾಗವೆಂದರೆ ನಾನ್ಸ್ಟ್ರೈಕರ್ ಕೊನೆಯ ಎರಡು ರನ್‌ಗಳನ್ನು ತೊಡರಿಕೊಂಡು ಓಡುವುದು... ಏಕೆಂದರೆ ಅವನ ಪ್ಯಾಡ್ ಉದುರಿಹೋಗಲಿದೆ" ಎಂದು ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ