VIDEO| ಮಹಿಳೆಯರ ಟಿ20 ಕ್ರಿಕೆಟ್​ ನಡುವೆ ಫೀಲ್ಡ್​ಗಿಳಿದ ನಾಯಿ!

dogc
Published on

ಡಬ್ಲಿನ್​: ಕ್ರಿಕೆಟ್​ ಪಂದ್ಯಗಳ ನಡುವೆ ಅಭಿಮಾನಿಗಳು ಮೈದಾನದೊಳಕ್ಕೆ ಪ್ರವೇಶಿಸಿಬಿಡುವ ಹಲವು ಪ್ರಸಂಗಗಳು ನಡೆಯುತ್ತಿರುತ್ತವೆ. ಈ ಬಾರಿ ನಾಯಿಯೊಂದು ಮೈದಾನಕ್ಕಿಳಿದಿದ್ದು, ಬಾಲ್​ಅನ್ನು ಕಚ್ಚಿಕೊಂಡು ಆಟಗಾರರನ್ನು ಬಾಲು ವಾಪಸ್​ ಕೊಡಲು ಆಟಾಡಿಸಿದ ಪ್ರಸಂಗ ಐರ್ಲೆಂಡಿನಲ್ಲಿ ನಡೆದಿದೆ. ಈ ನಗೆ ಉಕ್ಕಿಸುವ ದೃಶ್ಯಾವಳಿಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಉತ್ತರ ಐರ್ಲೆಂಡಿನ ಮಗೇರಮೆಸಾನ್​ನಲ್ಲಿರುವ ಬ್ರೆಡಿ ಕ್ರಿಕೆಟ್​ ಕ್ಲಬ್​ ಮೈದಾನದಲ್ಲಿ ಬ್ರೆಡಿ ಮತ್ತು ಸಿಎಸ್​ಎನ್​ಐ ಮಹಿಳಾ ತಂಡಗಳ ನಡುವೆ ಆಲ್​ ಐರ್ಲೆಂಡ್​ ಟಿ20 ಕಪ್​ ಸೆಮಿಫೈನಲ್​ ಪಂದ್ಯ ನಡೆಯುತ್ತಿತ್ತು. ಬ್ಯಾಟಿಂಗ್​ ಮಾಡುತ್ತಿದ್ದ ಅಬ್ಬಿ ಲೆಖಿ ಚೆಂಡನ್ನು ಆಫ್​ಸೈಡ್​​ ಪ್ರದೇಶಕ್ಕೆ ಹೊಡೆದಾಗ ಫೀಲ್ಡರ್​, ರನ್​ ಔಟ್​ ಮಾಡಲು ವಿಕೆಟ್​ ಕೀಪರ್​ ರಾಚೆಲ್​ ಹೆಪ್​ಬರ್ನ್​ಗೆ ಚೆಂಡನ್ನು ಪಾಸ್​ ಮಾಡಿದರು. ಆದರೆ ಹೆಪ್​ಬರ್ನ್​ ಅವರು ವಿಕೆಟ್​ ಕಡೆ ಎಸೆದ ಬಾಲ್​ ವಿಕೆಟ್ಟನ್ನು ಮಿಸ್​ ಮಾಡಿ ಆಚೆಗೆ ಹೋಯಿತು. ಆ ಸಮಯಕ್ಕೆ ಕ್ರೀಡಾಂಗಣ ಪ್ರವೇಶಿಸಿದ್ದ ಪುಟಾಣಿ ನಾಯಿಯೊಂದು, ಚೆಂಡನ್ನು ಕಚ್ಚಿಕೊಂಡು ಹೊರಟಿತು. ಆಟ ಸ್ಥಗಿತಗೊಂಡಂತೆ, ಫೀಲ್ಡರ್​ಗಳು ಚೆಂಡನ್ನು ವಾಪಸ್​ ಪಡೆಯಲು ನಾಯಿಯನ್ನು ಹಿಡಿಯುವ ಪ್ರಯತ್ನ ಆರಂಭಿಸಿದರು.

ತಾನೂ ಚೆಂಡಿನೊಂದಿಗೆ ಆಟವಾಡುವ ತವಕದಿಂದ ಮೈದಾನದ ತುಂಬಾ ಓಡಾಡುತ್ತಿದ್ದ ನಾಯಿಯ ಮಾಲೀಕನಾದ ಬಾಲಕನೊಬ್ಬ​ ಅದನ್ನು ಹಿಡಿಯಲು ಓಡಿಬಂದ. ಕೊನೆಗೆ, ನಾನ್​ ಸ್ಟ್ರೈಕರ್​ ಅಯೋಫೆ ಫಿಶರ್​ ಬಳಿ ಆ ನಾಯಿ ಚೆಂಡನ್ನು ಬಿಟ್ಟಿತು. ಈ ಪ್ರಸಂಗ ಆಟಗಾರರಲ್ಲಿ ಉಲ್ಲಾಸ ಮೂಡಿಸಿದರೆ, ಪ್ರೇಕ್ಷಕರ ಮೊಗಗಳಲ್ಲಿ ನಗೆ ಅರಳಿತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net