

ನಾಗ್ಪುರ: ವಿದರ್ಭದ ಮಹಿಳಾ ಕ್ರಿಕೆಟರ್ ಸಲೋನಿ ಅಲೋಟ್, ತಮ್ಮ ಮನೆಗೆ ಕಳ್ಳತನಕ್ಕೆ ಬಂದಿದ್ದ ಕಳ್ಳನ ಜತೆಗೆ 10 ನಿಮಿಷಗಳ ಕಾಲ ಹೋರಾಟ ನಡೆಸಿ ಆತನನ್ನು ಹಿಡಿಯುವಲ್ಲಿ ಸಫಲರಾಗಿದ್ದಾರೆ. ಅವರ ಈ ಸಾಹಸವನ್ನು ನೆರೆಹೊರೆಯವರು ಮತ್ತು ವಿದರ್ಭ ಪೊಲೀಸರು ಪ್ರಶಂಸಿಸಿದ್ದಾರೆ. ಜತೆಗೆ ಆಕೆಯ ಹೆಸರನ್ನು ಶೌರ್ಯ ಪ್ರಶಸ್ತಿಗೆ ಶಿಫಾರಸು ಮಾಡುವ ಚಿಂತನೆ ನಡೆಸಿದ್ದಾರೆ.
ವಿದರ್ಭದ ಮಾಜಿ ಕ್ರಿಕೆಟಿಗ ದಿವಂಗತ ಭೋಜರಾಜ್ ಅಲೋಟ್ ಮಗಳಾಗಿರುವ ಸಲೋನಿ, ಭಾರತ ಮಹಿಳಾ ತಂಡದ ಮಾಜಿ ವಿಕೆಟ್ ಕೀಪರ್ ಅಂಜು ಜೈನ್ ಅವರಿಂದ ತರಬೇತಿ ಪಡೆದಿದ್ದಾರೆ. 2018-19ರ ಸಾಲಿನಲ್ಲಿ ವಿದರ್ಭ ಪರ 23 ವಯೋಮಿತಿ ರಾಷ್ಟ್ರೀಯ ಕ್ರಿಕೆಟ್ ಟೂರ್ನಿಯಲ್ಲಿ ವಿಕೆಟ್ ಕೀಪರ್-ಬ್ಯಾಟುಗಾರ್ತಿಯಾಗಿ ಆಡಿದ್ದ ಸಲೋನಿ, ನಂತರ ವಿದ್ಯಾಭ್ಯಾಸ ಸಲುವಾಗಿ ಕ್ರೀಡೆಯಿಂದ ದೂರ ಉಳಿದಿದ್ದರು. 24 ವರ್ಷದ ಅವರೀಗ ಕೆಮಿಕಲ್ ಇಂಜಿನಿಯರ್ ಆಗಿದ್ದಾರೆ.
ಏನಿದು ಘಟನೆ: ಕಳೆದ ಭಾನುವಾರ ಸಂಬಂಧಿಕರ ಮನೆಗೆ ತೆರಳಿದ್ದ ಸಲೋನಿ ಕುಟುಂಬ ರಾತ್ರಿ 1.30ರವರೆಗೆ ಸ್ವಾಮಿ ಕಾಲನಿಯಲ್ಲಿರುವ ಮನೆಗೆ ಮರಳಿತ್ತು. ಸಲೋನಿ ತಾಯಿ ಅಂಜು ಕಾರಿನಿಂದ ಇಳಿದು ಮೊದಲು ಮನೆಕಡೆ ನಡೆದಿದ್ದರು. ಆಗ ಅಲ್ಲೇ ಬಚ್ಚಿಟ್ಟುಕೊಂಡಿದ್ದ ಕಳ್ಳನನ್ನು ನೋಡಿ ಕಿರುಚಿದ್ದರು. ಆಗ ಕಾರಿನಿಂದ ಇಳಿದ ಸಲೋನಿ, ಓಡುತ್ತಿದ್ದ ಕಳ್ಳನನ್ನು ಬೆನ್ನಟ್ಟಿ ಆತನೊಂದಿಗೆ 10 ನಿಮಿಷಗಳ ಕಾಲ ಸೆಣಸಾಡಿದ್ದರು. ಗಲಾಟೆ ಕೇಳಿ ಅಲ್ಲಿಗೆ ಬಂದ ನೆರೆಹೊರೆಯವರ ಸಹಾಯದಿಂದ ಬಳಿಕ ಕಳ್ಳನನ್ನು ಹಿಡಿದಿಟ್ಟುಕೊಂಡು ಪೊಲೀಸರಿಗೆ ಒಪ್ಪಿಸಿದ್ದರು. ಈ ಸೆಣಸಾಟದ ವೇಳೆ ಸಲೋನಿ ಕೈಗೆ ತರಚಿದ ಗಾಯಗಳಾಗಿವೆ. ಕಳ್ಳನನ್ನು ಮಧ್ಯಪ್ರದೇಶ ಮೂಲದ ಧನರಾಜ್ ಪಂಚೇಶ್ವರ್ ಎಂದು ಪೊಲೀಸರು ಗುರುತಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆತನ ಬಳಿ ಇದ್ದ ಚೀಲದಲ್ಲಿ ಉದ್ದದ ಬ್ಲೇಡ್ಗಳು, ಸ್ಕ್ರೂಡ್ರೖೆವರ್ ಮತ್ತಿತರ ಹರಿತವಾದ ಸಲಕರಣಗಳು ಪತ್ತೆಯಾಗಿವೆ. ಕಳ್ಳನ ಜತೆ ಅಷ್ಟು ಸಮಯ ಬರಿಗೈಯಲ್ಲಿ ಹೋರಾಡಿ ಹಿಡಿದ ಸಲೋನಿ ಸಾಹಸ ಪ್ರಶಂಸಾರ್ಹ ಎಂದು ಪೊಲೀಸ್ ಇನ್ಸ್ಪೆಕ್ಟರ್ ಸುನೀಲ್ ಗಂಗುರ್ಡೆ ತಿಳಿಸಿದ್ದಾರೆ. -ಏಜೆನ್ಸೀಸ್