

ನಾಗ್ಪುರ: ಕೋವಿಡ್-19 ಮಹಾಮಾರಿ ಇಡೀ ಜಾಗತಿಕ ಕ್ರೀಡಾಲೋಕವನ್ನೇ ಸ್ತಬ್ಧಗೊಳಿಸಿದೆ. ಈ ವೇಳೆ ನಿಗದಿಯಾಗಿದ್ದ ಬಹುತೇಕ ಕ್ರೀಡಾಕೂಟಗಳು ಮುಂದೂಡಿಕೆಯಾಗಿರುವುದು ಹೊಸ ವಿಷಯವೇನಲ್ಲ. ಇದೀಗ ಹಸೆಮಣೆ ಏರಲು ಅಣಿಯಾಗಿದ್ದ ವಿದರ್ಭ ಕ್ರಿಕೆಟ್ ತಂಡದ ಮೂವರು ಆಟಗಾರರು ಮದುವೆ ಸಮಾರಂಭವನ್ನೇ ಮುಂದೂಡಿದ್ದಾರೆ.
ಆಲ್ರೌಂಡರ್ ಆದಿತ್ಯ ಸರ್ವಾಟೆ, ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಅಕ್ಷಯ್ ವಾಡ್ಕರ್ ಹಾಗೂ ವೇಗಿ ರಜನೀಶ್ ಗುರ್ಬಾನಿ ಲಾಕ್ಡೌನ್ನಿಂದಾಗಿ ಮದುವೆ ಮುಂದೂಡಿದ್ದಾರೆ. ಆದಿತ್ಯ ಸರ್ವಾಟೆ-ಅರುಣಿತಾ ಜೋಡಿ ಮದುವೆ ಏಪ್ರಿಲ್ 27ರಂದು ನಿಗದಿಯಾಗಿದ್ದರೆ, ವಾಡ್ಕರ್ ಹಾಗೂ ಗುರ್ಬಾನಿ ಮದುವೆ ಕ್ರಮವಾಗಿ ಮೇ 2 ಹಾಗೂ 18ರಂದು ನಿಶ್ಚಯವಾಗಿತ್ತು. ‘ವಿದರ್ಭ 2ನೇ ಬಾರಿಗೆ ರಣಜಿ ಟ್ರೋಫಿ ಜಯಿಸಿದ ಕ್ಷಣಕ್ಕೆ ಸಾಕ್ಷಿಯಾಗಿದ್ದೆ, ಆವಾಗಲೇ ನಾವು ಸರಳ ಮದುವೆ ಬಗ್ಗೆ ಯೋಜನೆ ರೂಪಿಸಿದ್ದೆವು’ ಎಂದು ಅರುಣಿತಾ ಹೇಳಿದ್ದಾರೆ.
ಆದರೆ, ವಾಡ್ಕರ್ ಅವರ ಭಾವಿ ಪತ್ನಿ ಶ್ರುತಿಕಾ ಮಾತ್ರ ಅದ್ದೂರಿಯಾಗಿ ಮದುವೆಯಾಗುವ ಕನಸು ಹೊಂದಿದ್ದಾರೆ. ನಾಗ್ಪುರ ಕೋವಿಡ್-19 ರೆಡ್ ಜೋನ್, ಹೀಗಾಗಿ ಮದುವೆ ಸಮಾರಂಭ ಮುಂದೂಡುತ್ತಿದ್ದೇವೆ ಎಂದು ರಜನೀಶ್ ಗುರ್ಬಾನಿ ತಂದೆ ನರೇಶ್ ಗುರ್ಬಾನಿ ತಿಳಿಸಿದ್ದಾರೆ. ಎರಡು ಕುಟುಂಬಗಳು ಮತ್ತೊಮ್ಮೆ ಚರ್ಚೆ ನಡೆಸಿ ಹೊಸ ದಿನಾಂಕ ನಿರ್ಧರಿಸಲಿದ್ದೇವೆ ಎಂದಿದ್ದಾರೆ.