ಬೆಳಗಾವಿ ಸ್ಪೋರ್ಟ್ಸ್ ಕ್ಲಬ್ ತಂಡಕ್ಕೆ ಗೆಲುವು

h18-durga cup
Published on

ಹುಬ್ಬಳ್ಳಿ: ಶ್ರೀ ದುರ್ಗಾ ಕಪ್ ಕ್ರಿಕೆಟ್ ಟೂರ್ನಾಮೆಂಟ್​ನ ಬುಧವಾರ ನಡೆದ ಪಂದ್ಯಾವಳಿಯಲ್ಲಿ ದುರ್ಗಾ ಕ್ರಿಕೆಟ್ ಅಕಾಡೆಮಿ (ಬಿ) ತಂಡದ ವಿರುದ್ಧ ಬೆಳಗಾವಿ ಸ್ಪೋರ್ಟ್ಸ್ ಕ್ಲಬ್ ತಂಡವು 144 ರನ್​ಗಳಿಂದ ಭರ್ಜರಿ ಜಯ ಗಳಿಸಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬೆಳಗಾವಿ ಸ್ಪೋರ್ಟ್ಸ್ ಕ್ಲಬ್​ನ ಅರ್ನವ್ ಕುಂದಪ್ಪ 57 ಎಸೆತಗಳಲ್ಲಿ14 ಬೌಂಡರಿಗಳ ಅಮೋಘ 97 ರನ್ ಪೇರಿಸಿದರೆ, ಅಶುತೋಷ ಹಿರೇಮಠ 27 ಎಸೆತಗಳಲ್ಲಿ40 ರನ್​ಗಳನ್ನು ತಂಡದ ಖಾತೆಗೆ ಸೇರಿಸಿದರು.

ನೀಲ್ ಪವಾರ 25 ಎಸೆತಗಳಲ್ಲಿ 27 ರನ್ ಬಾರಿಸಿದರು. ಬೆಳಗಾವಿ ಸ್ಪೋರ್ಟ್ಸ್ ಕ್ಲಬ್ ತಂಡ 25 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 214 ಗಳ ಬೃಹತ್ ಮೊತ್ತವನ್ನು ಪೇರಿಸಿತು. ದುರ್ಗಾ ಕ್ರಿಕೆಟ್ ಅಕಾಡೆಮಿ ತಂಡದ ಶ್ರೇಯಸ್ ಆರ್. 4 ಓವರ್​ಗಳಲ್ಲಿ 23 ರನ್ ನೀಡಿ 2 ವಿಕೆಟ್ ಪಡೆದರು. ತಂಡದ ಮಿಕ್ಕ ಬೌಲರ್​ಗಳು ಎದುರಾಳಿ ತಂಡದ ಬ್ಯಾಟ್ಸ್​ಮನ್​ಗಳನ್ನು ಕಟ್ಟಿ ಹಾಕುವಲ್ಲಿ ವಿಫಲವಾದರು.

ಬೆಳಗಾವಿ ಸ್ಪೋರ್ಟ್ಸ್ ಕ್ಲಬ್ ನೀಡಿದ 214 ರನ್​ಗಳ ಬೃಹತ್ ಮೊತ್ತ ಬೆನ್ನು ಹತ್ತಿದ ದುರ್ಗಾ ಕ್ರಿಕೆಟ್ ಅಕಾಡೆಮಿ ತಂಡ 22 ಓವರ್ ಗಳಲ್ಲಿ ತನ್ನೆಲ್ಲ್ ವಿಕೆಟ್​ಗಳನ್ನು ಕಳೆದುಕೊಂಡು ಕೇವಲ 70 ರನ್ ಪೇರಿಸಿ, ಎದುರಾಳಿ ತಂಡದ ಎದುರು 144 ರನ್​ಗಳಿಂದ ಸೋಲೊಪ್ಪಿಕೊಂಡಿತು.

ದುರ್ಗಾ ಕ್ರಿಕೆಟ್ ಅಕಾಡೆಮಿ ತಂಡದ ಪರವಾಗಿ ಮೋಕ್ಷಿತ 14 ರನ್ ಗಳಿಸಿದ್ದು ಬಿಟ್ಟರೆ ತಂಡದ ಬೇರಾವ ಆಟಗಾರರು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು.

ಬೆಳಗಾವಿ ಸ್ಪೋರ್ಟ್ಸ್ ಕ್ಲಬ್​ನ ಉತ್ಕರ್ಷ ಬಿ., 5 ಓವರ್​ಗಳಲ್ಲಿ 24 ರನ್ ನೀಡಿ 2 ವಿಕೆಟ್ ಪಡೆದರೆ, ಸುರೇಂದ್ರ ಎಂ. 1 ಓವರ್​ನಲ್ಲಿ 1 ರನ್ ನೀಡಿ 2 ವಿಕೆಟ್ ಕಬಳಿಸಿದರು. ಭರ್ಜರಿ ಬ್ಯಾಟಿಂಗ್ ಮೂಲಕ ತಂಡದ ಮೊತ್ತ ಹೆಚ್ಚಿಸಿದ ಅರ್ನವ್ ಕುಂದಪ್ಪ ಅವರನ್ನು ಮ್ಯಾನ್ ಆಫ್ ದಿ ಮ್ಯಾಚ್ ಎಂದು ಘೊಷಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net