

ತುಮಕೂರು: ರಾಜ ಮಹಾರಾಜರು ತಮ್ಮ ಬುದ್ದಿಮತ್ತೆ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಚದರುಂಗ ಆಟವಾಡುತ್ತಿದ್ದರು. ಅಂತಹ ಕ್ರೀಡೆಯನ್ನು ಭಾರತವು ಇಡೀ ಪ್ರಪಂಚಕ್ಕೆ ಕೊಡುಗೆಯಾಗಿ ನೀಡಿದೆ ಎಂದು ರಾಮಕೃಷ್ಣ- ವಿವೇಕಾನಂದ ಆಶ್ರಮದ ಅಧ್ಯಕ್ಷ ವೀರೇಶಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಹನುಮಂತ ಪುರದ ಕೋಲ್ಹಾಪುರ ದಮ್ಮ ಸಮುದಾಯ ಭವನದಲ್ಲಿ ನ್ಯೂ ತುಮಕೂರು ಡಿಸ್ಟ್ರಿಕ್ಟ್ ಚೆಸ್ ಅಕಾಡೆಮಿ ಹಾಗೂ ದಿ ಯುನೈಟೆಡ್ ಕರ್ನಾಟಕ ಚೆಸ್ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಚೆಸ್ ಪಂದ್ಯಾವಳಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಆಟದಲ್ಲಿ ಭಾಗವಹಿಸುವಿಕೆ ಬಹುಮುಖ್ಯ ಎಂದರು.
ಚೆಸ್ ಮನಸ್ಸಿಗೆ ಕಸರತ್ತು ನೀಡುತ್ತದೆ. ದೈಹಿಕ ಶ್ರಮವನ್ನು ಅವಲಂಬಿಸಿ ಆಡುವ ಕ್ರೀಡೆಗಳ ನಡುವೆ ಮನಸ್ಸಿನ ಕಸರತ್ತನ್ನು ಅವಲಂಬಿಸಿ ಆಡುವ ಕ್ರೀಡೆಗಳಲ್ಲಿ ಚೆಸ್‌ಗೆ ಪ್ರಾಮುಖ್ಯತೆ ಇದೆ. ಶಾರೀರಕವಾಗಿ ಕೆಲಸ ಮಾಡುವವರನ್ನು ನಿರ್ವಹಿಸುವವನು, ನಿಯಂತ್ರಿಸುವವನು ಮಾನಸಿಕವಾಗಿ ಯೋಚಿಸುತ್ತಾನೆ. ಚೆಸ್‌ನಲ್ಲಿ ಭಾಗವಹಿಸುವ ಮಕ್ಕಳು ಶೈಕ್ಷಣಿಕವಾಗಿಯೂ ಚರುಕಾಗಿರುತ್ತಾರೆ.
ಓದಿನಲ್ಲಿ ಹೆಚ್ಚು ಏಕಾಗ್ರತೆ ಸಾಧಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ಶ್ರೀದೇವಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್ ಮಾತನಾಡಿ, ನಗರದಲ್ಲಿ ಉತ್ತಮವಾದ ವೇದಿಕೆ ಸೃಷ್ಟಿ ಮಾಡಲಾಗಿದೆ. ತುಮಕೂರಿನಲ್ಲಿ ಹೊಸದಾದ ಚೆಸ್ ಆರ್ಗನೈಸೇಷನ್ ಪ್ರಾರಂಭ ಮಾಡಲಾಗಿದೆ. ಇದು ತುಮಕೂರು ಭಾಗದ ಮಕ್ಕಳಿಗೆ ಒಂದು ಭಾಗ್ಯವೇ ಸರಿ. ಚೆಸ್ ಆಟ ಭಾರತದ ಪ್ರಾಚೀನ ಕಾಲದಿಂದಲೂ ಬಂದ ಕ್ರೀಡೆಯಾಗಿದೆ. ಕಾಲ ಕಾಲಕ್ಕೆ ಇದು ಬದಲಾವಣೆಯಾದರೂ ಈ ಶತಮಾನದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ಪಡೆದಿದೆ ಎಂದು ತಿಳಿಸಿದರು. ವಿದ್ಯಾವಾಹಿನಿ ಸಂಸ್ಥೆ ಕಾರ್ಯದರ್ಶಿ ಎನ್. ಬಿ.ಪ್ರದೀಪ್ ಕುಮಾರ್, ಸೇಂಟ್ ಮೇರಿಸ್ ಶಾಲೆಯ ಮುಖ್ಯಶಿಕ್ಷಕಿ ಮೇರಿ ಕ್ರಿಸ್ಟಿನಾ, ಸ್ನೇಹ ಮನೋವಿಕಾಸ ಕೇಂದ್ರದ ಮನೋವೈದ್ಯ ಡಾ.ಲೋಕೇಶ್‌ಬಾಬು, ಮಧುಕರ್, ಯುಕೆಸಿಎ ಪ್ರಧಾನ ಕಾರ್ಯದರ್ಶಿ ಮಂಜುನಾಥ್‌ಜೈನ್, ಕಾರ್ಯಕ್ರಮ ಆಯೋಜಕಿ ಮಾಧುರಿ, ಡಾ.ಪದ್ಮಾಕ್ಷಿ ಲೋಕೇಶ್ ಉಪಸ್ಥಿತರಿದ್ದರು.
ಶೇಟ್ ಪ್ರಜ್ವಲ್ ಚಾಂಪಿಯನ್ : ರಾಜ್ಯ ಮುಕ್ತ ರ‌್ಯಾಪಿಡ್ ಹಾಗೂ ಬ್ಲಿಟ್ಜ್ ಚೆಸ್ ಪಂದ್ಯಾವಳಿಯಲ್ಲಿ ತುಮಕೂರಿನ ಶೇಟ್ ಪ್ರಜ್ವಲ್ 2 ವಿಭಾಗದಲ್ಲೂ ಪ್ರಥಮ ಸ್ಥಾನ ಪಡೆದು ನಾಗಣ್ಣ ಹಾನರಬಲ್ ಅವಾರ್ಡ್ ಪಡೆದರು. ಬೆಂಗಳೂರಿನ ಪಾರ್ಥಸಾರಥಿ ರ‌್ಯಾಪಿಡ್ ವಿಭಾಗದಲ್ಲಿ ಹಾಗೂ ಬ್ಲಿಟ್ಜ್ ವಿಭಾಗದಲ್ಲಿ ಬೆಂಗಳೂರಿನ ಲಿಖಿತ್ ಚಿಲುಕಿರಿ ರನ್ನರ್‌ಅಪ್ ಆಗಿ ಹೊರಹೊಮ್ಮಿದರು. ಇದರೊಂದಿಗೆ ಶೇಟ್ ಪ್ರಜ್ವಲ್ ಜೊತೆ ರನ್ನರ್‌ಅಪ್‌ಗಳಿಬ್ಬರೂ ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ. ಹಿರೇಮಠಾಧ್ಯಕ್ಷ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಬಹುಮಾನ ವಿತರಿಸಿದರು.
ಚೆಸ್ ಅಕಾಡೆಮಿ ಪ್ರಾರಂಭ: ಚದುರಂಗ ಇತ್ತೀಚೆಗೆ ಪ್ರಾಮುಖ್ಯತೆ ಪಡೆದಿದೆ. ತುಮಕೂರಿನಲ್ಲಿ ಚೆಸ್ ಅಕಾಡೆಮಿ ಪ್ರಾರಂಭ ಮಾಡಿರುವುದು ಸಂತಸದ ವಿಷಯ. ಶ್ರೀಗಳು ಹೇಳಿದಂತೆ ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ, ಆದರೆ, ಕಲಾಂ ಹೇಳಿದಂತೆ ಇಂದು ಸೋತವನು ನಾಳೆ ಗೆಲ್ಲಲು ಪ್ರಯತ್ನಿಸುತ್ತಾನೆ. ಸೋಲೆ ಗೆಲುವಿನ ಸೋಪಾನ ಎಂಬಂತೆ ಗೆಲುವಿಗೆ ಪಾಠವಾಗುತ್ತದೆ ಎಂದು ವಿದ್ಯಾನಿಕೇತನ್ ವಿದ್ಯಾಸಂಸ್ಥೆ ಅಧ್ಯಕ್ಷ ಡಾ.ಜಯರಾಮರಾವ್ ಹೇಳಿದರು.