

ಗ್ವಾಲಿಯರ್: ವೇಗಿ ಅರ್ಷದೀಪ್ ಸಿಂಗ್ (14ಕ್ಕೆ 3) ಹಾಗೂ ಮೂರು ವರ್ಷಗಳ ನಂತರ ರಾಷ್ಟ್ರೀಯ ತಂಡದ ಪರ ಕಣಕ್ಕಿಳಿದ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ (31ಕ್ಕೆ 3) ಬಿಗಿ ಬೌಲಿಂಗ್ ದಾಳಿಯ ನಿರ್ವಹಣೆಯ ಬಲದಿಂದ ಯುವ ಭಾರತ ತಂಡ ಮೊದಲ ಟಿ20 ಪಂದ್ಯದಲ್ಲಿ ಪ್ರವಾಸಿ ಬಾಂಗ್ಲಾದೇಶ ಎದುರು 7 ವಿಕೆಟ್‌ಗಳಿಂದ ಗೆದ್ದು, ಶುಭಾರಂಭ ಕಂಡಿದೆ. ಇದರೊಂದಿಗೆ ಸೂರ್ಯಕುಮಾರ್ ಪಡೆ ಮೂರು ಪಂದ್ಯಗಳ ಸರಣಿಯಲ್ಲಿ 1-0ಯಿಂದ ಮುನ್ನಡೆ ಸಾಧಿಸಿದೆ.
ನೂತನ ಶ್ರೀಮಂತ್ ಮಾಧವ್‌ರಾವ್ ಸಿಂಧಿಯಾ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಬಾಂಗ್ಲಾದೇಶ, ಆಲ್ರೌಂಡರ್ ಮೆಹಿದಿ ಹಸನ್ ಮಿರಾಜ್ (35*ರನ್, 32 ಎಸೆತ,3 ಬೌಂಡರಿ) ಆಸರೆಯಲ್ಲಿ 19.5 ಓವರ್‌ಗಳಲ್ಲಿ 127 ರನ್‌ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ಹಾರ್ದಿಕ್ ಪಾಂಡ್ಯ (39*ರನ್, 16 ಎಸೆತ, 5 ಬೌಂಡರಿ,2ಸಿಕ್ಸರ್) ಬಿರುಸಿನಾಟದ ಬಲದಿಂದ ಟೀಮ್ ಇಂಡಿಯಾ 11.5 ಓವರ್‌ಗಳಲ್ಲಿ 3 ವಿಕೆಟ್‌ಗೆ 132 ರನ್‌ಗಳಿಸಿ ಇನ್ನೂ 49 ಎಸೆತ ಇರುವಂತೆಯೇ ಗೆಲುವಿನ ಸಂಭ್ರಮ ಕಂಡಿತು.
ಹಾರ್ದಿಕ್ ಬಿರುಸಿನಾಟ: ಸ್ಪರ್ಧಾತ್ಮಕ ಮೊತ್ತದ ಚೇಸಿಂಗ್‌ಗೆ ಇಳಿದ ಭಾರತಕ್ಕೆ ಸಂಜು ಸ್ಯಾಮ್ಸನ್ (29) ಹಾಗೂ ಅಭಿಷೇಕ್ ಶರ್ಮ (16) ಬಿರುಸಿನ ಆರಂಭ ಒದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 12 ಎಸೆತಗಳಲ್ಲಿ 25 ರನ್ ಕಸಿದರು. ಆದರೆ ವಿಕೆಟ್ ನಡುವಿನ ಓಟದ ಗೊಂದಲದಲ್ಲಿ ಅಭಿಷೇಕ್ ರನೌಟ್ ಆದರು. ಬಳಿಕ ಸಂಜು ಜತೆಯಾದ ಸೂರ್ಯ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಚೇಸಿಂಗ್‌ಗೆ ವೇಗ ನೀಡಿದರು. ಇವರಿಬ್ಬರು 2ನೇ ವಿಕೆಟ್‌ಗೆ 21 ಎಸೆತಗಳಲ್ಲಿ 40 ರನ್ ಕಸಿದರು. ಈ ಜೋಡಿಗೆ ಮುಸ್ತಾಫಿಜುರ್ ಬ್ರೇಕ್ ನೀಡಿದರು. ಪವರ್ ಪ್ಲೇಯಲ್ಲಿ 63 ರನ್‌ಗಳಿಸಿದ ಟೀಮ್ ಇಂಡಿಯಾ ಪಂದ್ಯದಲ್ಲಿ ಹಿಡಿತ ಸಾಧಿಸಿತು. ಸೂರ್ಯ ನಿರ್ಗಮನದ ಬಳಿಕ, ಉತ್ತಮ ಲಯದಲ್ಲಿದ್ದ ಸಂಜು ಕೂಡ ಔಟಾಗಿ ನಿರಾಸೆ ಮೂಡಿಸಿದರು. ಆಗ ಜತೆಯಾದ ಹಾರ್ದಿಕ್ ಪಾಂಡ್ಯ ಹಾಗೂ ನಿತೀಶ್ ಕುಮಾರ್ (15*) ಮುರಿಯದ 4ನೇ ವಿಕೆಟ್‌ಗೆ 24 ಎಸೆತಗಳಲ್ಲಿ 52 ರನ್ ಗಳಿಸಿ ತಂಡವನ್ನು ದಡ ಸೇರಿಸಿದರು. ಎರಡು ಬೌಂಡರಿ ಸಹಿತ ಒಂದು ಸಿಕ್ಸರ್ ಸಿಡಿಸಿದ ಪಾಂಡ್ಯ ಗೆಲುವು ಸಾರಿದರು.