

ವಡೋದರ: ಯುವ ಎಡಗೈ ಸ್ಪಿನ್ನರ್ ವೈಷ್ಣವಿ ಶರ್ಮ (39ಕ್ಕೆ 5) ಮಾರಕ ಬೌಲಿಂಗ್ ದಾಳಿಯ ಬಲದಿಂದ ಭಾರತ ತಂಡ ಮಹಿಳೆಯರ ಏಕದಿನ ಸರಣಿಯ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಪ್ರವಾಸಿ ಜಿಂಬಾಬ್ವೆ ವಿರುದ್ಧ 8 ವಿಕೆಟ್ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಸ್ಮೃತಿ ಮಂದನಾ ಬಳಗ ಸರಣಿಯಲ್ಲಿ 3-0 ಕ್ಲೀನ್ಸ್ವೀಪ್ ಸಾಧಿಸಿದೆ.
ಕೋಟಂಬಿ ಸ್ಟೇಡಿಯಂನಲ್ಲಿ ಬುಧವಾರ ನಡೆದ ಸರಣಿಯ ಔಪಚಾರಿಕ ಕಾದಾಟದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದ ಜಿಂಬಾಬ್ವೆ ತಂಡ, 39.5 ಓವರ್ಗಳಲ್ಲಿ ಕೇವಲ 131 ರನ್ಗಳಿಗೆ ಆಲೌಟ್ ಆಯಿತು. ವೈಷ್ಣವಿ ಜತೆಗೆ ವೇಗಿಗಳಾದ ಕ್ರಾಂತಿ ಗೌಡ್ (23ಕ್ಕೆ 2) ಮತ್ತು ಸಯಾಲಿ ಸತ್ಗರೆ (11ಕ್ಕೆ 2) ದಾಳಿಗೆ ಜಿಂಬಾಬ್ವೆ ತಂಡ ಕಂಗೆಟ್ಟಿತು. ಪ್ರತಿಯಾಗಿ ಭಾರತ ತಂಡ 17 ಓವರ್ಗಳಲ್ಲೇ 2 ವಿಕೆಟ್ ನಷ್ಟದಲ್ಲಿ 133 ರನ್ ಗಳಿಸಿ ಜಯಭೇರಿ ಬಾರಿಸಿತು. ನಾಯಕಿ ಸ್ಮೃತಿ ಮಂದನಾ ಬದಲಿಗೆ ಇನಿಂಗ್ಸ್ ಆರಂಭಿಸಿದ ಯಸ್ತಿಕಾ ಭಾಟಿಯಾ (0) ಮೊದಲ ಎಸೆತದಲ್ಲೇ ಔಟಾದರೆ, ಹರ್ಲೀನ್ ಡಿಯೋಲ್ (19) ಕೂಡ ಹೆಚ್ಚು ನಿಲ್ಲಲಿಲ್ಲ. ಬಳಿಕ ಪ್ರತಿಕಾ ರಾವಲ್ (59* ರನ್, 56 ಎಸೆತ, 4 ಬೌಂಡರಿ, 3 ಸಿಕ್ಸರ್) ಮತ್ತು 4ನೇ ಕ್ರಮಾಂಕದಲ್ಲಿ ಆಡಿದ ಶೆಫಾಲಿ ವರ್ಮ (51*ರನ್, 26 ಎಸೆತ, 6 ಬೌಂಡರಿ, 3 ಸಿಕ್ಸರ್) ಬಿರುಸಿನ ಅರ್ಧಶತಕ ಸಿಡಿಸಿ, 33 ಓವರ್ಗಳು ಬಾಕಿ ಇರುವಂತೆಯೇ ಭಾರತವನ್ನು ಗೆಲುವಿನ ದಡ ಸೇರಿಸಿದರು. ಇವರಿಬ್ಬರು ಮುರಿಯದ 3ನೇ ವಿಕೆಟ್ಗೆ 50 ಎಸೆತಗಳಲ್ಲಿ 74 ರನ್ ಜತೆಯಾಟವಾಡಿದರು.
ಜಿಂಬಾಬ್ವೆ: 39.5 ಓವರ್ಗಳಲ್ಲಿ 131 (ಮುಪಚಿಕ್ವಾ 37, ಟಿರಿಪಾನೊ 4, ಎನ್ಕೊಮೊ 35, ಧುರುರು 20, ಗ್ವಾಂಜುರ 10, ವೈಷ್ಣವಿ ಶರ್ಮ 39ಕ್ಕೆ 5, ಕ್ರಾಂತಿ 23ಕ್ಕೆ 2, ಸಯಾಲಿ 11ಕ್ಕೆ 2), ಭಾರತ: 17 ಓವರ್ಗಳಲ್ಲಿ 2 ವಿಕೆಟ್ಗೆ 133 (ಪ್ರತಿಕಾ 59*, ಹರ್ಲೀನ್ 19, ಶೆಫಾಲಿ 51*, ಸಿಬಂಡ 18ಕ್ಕೆ 1). ಪಂದ್ಯಶ್ರೇಷ್ಠ: ವೈಷ್ಣವಿ ಶರ್ಮ, ಸರಣಿಶ್ರೇಷ್ಠ: ಪ್ರತಿಕಾ ರಾವಲ್ (220 ರನ್).
*2: ವೈಷ್ಣವಿ ಶರ್ಮ (20 ವರ್ಷ, 314 ದಿನ) ಏಕದಿನ ಕ್ರಿಕೆಟ್ನಲ್ಲಿ 5 ವಿಕೆಟ್ ಗೊಂಚಲು ಪಡೆದ 2ನೇ ಅತಿ ಕಿರಿಯ ಭಾರತೀಯರೆನಿಸಿದರು. ದೀಪ್ತಿ ಶರ್ಮ 2016ರಲ್ಲಿ 18 ವರ್ಷ, 179 ದಿನ ವಯಸ್ಸಿನಲ್ಲೇ ಈ ಸಾಧನೆ ಮಾಡಿದ್ದು ದಾಖಲೆಯಾಗಿದೆ.
*5: ವೈಷ್ಣವಿ ಶರ್ಮ ಏಕದಿನ ಕ್ರಿಕೆಟ್ನಲ್ಲಿ ಸತತ 2 ಇನಿಂಗ್ಸ್ಗಳಲ್ಲಿ 4 ಪ್ಲಸ್ ವಿಕೆಟ್ ಗಳಿಸಿದ 5ನೇ ಭಾರತೀಯರೆನಿಸಿದರು. ನೀತು ಡೇವಿಡ್, ಗೌಹರ್ ಸುಲ್ತಾನ, ದೀಪ್ತಿ ಶರ್ಮ, ರೇಣುಕಾ ಸಿಂಗ್ ಹಿಂದಿನ ಸಾಧಕಿಯರು.