

ಶಾರ್ಜಾ: ಯುವ ಬ್ಯಾಟರ್ ವೈಭವ್ ಸೂರ್ಯವಂಶಿ (67 ರನ್, 36 ಎಸೆತ, 6 ಬೌಂಡರಿ, 5 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ 8 ಬಾರಿಯ ಚಾಂಪಿಯನ್ ಭಾರತ ತಂಡ 19 ವಯೋಮಿತಿ ಏಷ್ಯಾಕಪ್ ಏಕದಿನ ಕ್ರಿಕೆಟ್ ಟೂರ್ನಿಯ ಸೆಮಿೈನಲ್‌ನಲ್ಲಿ ಶ್ರೀಲಂಕಾ ಎದುರು 7 ವಿಕೆಟ್‌ಗಳ ಗೆಲುವು ದಾಖಲಿಸಿದೆ. ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಬಾಂಗ್ಲಾದೇಶ ಎದುರು ಪ್ರಶಸ್ತಿಗಾಗಿ ಸೆಣಸಲಿದೆ.
ಶಾರ್ಜಾ ಕ್ರಿಕೆಟ್ ಗ್ರೌಂಡ್‌ನಲ್ಲಿ ಶುಕ್ರವಾರ ನಡೆದ ಸೆಮಿೈನಲ್‌ನಲ್ಲಿ ಟಾಸ್ ಗೆದ್ದ ಲಂಕಾ ಮೊದಲು ಬ್ಯಾಟಿಂಗ್‌ಗೆ ಇಳಿಯಿತು. ಲಕ್‌ವಿನ್ ಅಬೇಯ್‌ಸಿಂಘೆ (69 ರನ್, 110 ಎಸೆತ, 3 ಬೌಂಡರಿ, 2 ಸಿಕ್ಸರ್) ಬ್ಯಾಟಿಂಗ್ ನಡುವೆಯೂ ಚೇತನ್ ಶರ್ಮ (34ಕ್ಕೆ 3) ಸಹಿತ ಇತರ ಬೌಲರ್‌ಗಳ ಸಂಘಟಿತ ದಾಳಿಗೆ 46.2 ಓವರ್‌ಗಳಲ್ಲಿ 173 ರನ್‌ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗ ಆಯುಷ್ ಮಹಾತ್ರೆ (34) ಹಾಗೂ 13 ವರ್ಷದ ವೈಭವ್ ಸೂರ್ಯವಂಶಿ ಒದಗಿಸಿದ ಉತ್ತಮ ಆರಂಭದ ಬಲದಿಂದ ಭಾರತ 21.4 ಓವರ್‌ಗಳಲ್ಲಿ 3 ವಿಕೆಟ್‌ಗೆ 175 ರನ್‌ಗಳಿಸಿ ಹ್ಯಾಟ್ರಿಕ್ ಗೆಲುವಿನ ನಗೆ ಬೀರಿತು. ವೈಭವ್ ಸೂರ್ಯವಂಶಿಗೆ ಇದು ಸತತ 2ನೇ ಅರ್ಧಶತಕ ಎನಿಸಿದೆ.
ಶ್ರೀಲಂಕಾ: 46.2 ಓವರ್‌ಗಳಲ್ಲಿ 173 (ದುಲ್‌ನಿತ್ 2, ಶರುಜನ್ 42, ಲಕ್‌ವಿನ್ 69, ವಿಹಾಸ್ 14, ಚೇತನ್ ಶರ್ಮ 34ಕ್ಕೆ 2,ಕಿರಣ್ 32ಕ್ಕೆ 2, ಆಯುಷ್ 37ಕ್ಕೆ 2). ಭಾರತ: 22.1 ಓವರ್‌ಗಳಲ್ಲಿ 174 (ಆಯುಷ್ 34, ವೈಭವ್ 67, ಸಿದ್ದಾರ್ಥ್ 22, ಅಮಾನ್ 25*, ಕೆಪಿ ಕಾರ್ತಿಕೇಯಾ 11*, ಪ್ರವೀಣ್ 27ಕ್ಕೆ 1). ಪಂದ್ಯಶ್ರೇಷ್ಠ: ವೈಭವ್ ಸೂರ್ಯವಂಶಿ.
ಬಾಂಗ್ಲಾಗೆ ಶರಣಾದ ಪಾಕ್
ದಿನದ ಮೊದಲ ಸೆಮಿಫೈನಲ್‌ನಲ್ಲಿ ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಮಣಿಸಿದ ಬಾಂಗ್ಲಾದೇಶ ಸತತ 2ನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ಮೊದಲು ಬ್ಯಾಟಿಂಗ್‌ಗೆ ಇಳಿದ ಪಾಕ್, 37 ಓವರ್‌ಗಳಲ್ಲಿ 116 ರನ್‌ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ಬಾಂಗ್ಲಾ 22.1 ಓವರ್‌ಗಳಲ್ಲಿ 3 ವಿಕೆಟ್‌ಗೆ 120 ರನ್‌ಗಳಿಸಿ ಜಯದ ಸಂಭ್ರಮ ಕಂಡಿತು.
*9. ಭಾರತ ತಂಡ ದಾಖಲೆಯ 9ನೇ ಬಾರಿಗೆ ಟೂರ್ನಿಯಲ್ಲಿ ಫೈನಲ್‌ಗೇರಿದೆ. 1989,2003, 2013/14, 2016, 2018, 2019, 2021ರಲ್ಲಿ ಫೈನಲ್‌ಗೇರಿದ್ದ ಭಾರತ ಚಾಂಪಿಯನ್ ಎನಿಸಿತ್ತು.
ನಾಳೆ ಫೈನಲ್
ಭಾರತ-ಬಾಂಗ್ಲಾದೇಶ
ಆರಂಭ: ಬೆಳಗ್ಗೆ 10.30
ನೇರಪ್ರಸಾರ: ಸೋನಿ ಸ್ಪೋರ್ಟ್ಸ್