

Vaibhav Suryavanshi : ಅಂಡರ್-19 ಟೆಸ್ಟ್‌ನಲ್ಲಿ ಶತಕ ಬಾರಿಸಿದ ಬೆನ್ನಲ್ಲೇ 13 ವರ್ಷದ ವೈಭವ್ ಸೂರ್ಯವಂಶಿಯನ್ನು ಐಪಿಎಲ್ ಫ್ರಾಂಚೈಸಿ ರಾಜಸ್ಥಾನ ರಾಯಲ್ಸ್ ರಾತ್ರೋರಾತ್ರಿ ಸ್ಟಾರ್ ಆಗಿ ಪರಿವರ್ತಿಸಿದೆ. ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ 1 ಕೋಟಿ 10 ಲಕ್ಷ ರೂಪಾಯಿ ಕೊಟ್ಟು ಸೂರ್ಯವಂಶಿಯನ್ನು ರಾಜಸ್ಥಾನ ತಂಡ ಖರೀದಿಸಿದೆ. ಈ ಮೂಲಕ ಐಪಿಎಲ್ ಹರಾಜಿನಲ್ಲೇ ಮಾರಾಟವಾದ ಅತ್ಯಂತ ಕಿರಿಯ ಆಟಗಾರನೆಂಬ ಹೆಗ್ಗಳಿಕೆಯನ್ನು ಸೂರ್ಯವಂಶಿ ಹೊಂದಿದ್ದಾರೆ.
ಎಂದೂ ಎದುರು ನೋಡದ ಉತ್ತಮ ಅವಕಾಶವೊಂದು ವೈಭವ್ ಸೂರ್ಯವಂಶಿಗೆ ಸಿಕ್ಕಿಗೆ. ಭಾರತೀಯ ಕ್ರಿಕೆಟ್‌ನ ಅತ್ಯುತ್ತಮ ನಾಯಕ ಮತ್ತು ಕೋಚ್‌ಗಳಲ್ಲಿ ಒಬ್ಬರಾದ ರಾಹುಲ್ ದ್ರಾವಿಡ್ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸೂರ್ಯವಂಶಿಗೆ ಸಿಕ್ಕಿದೆ. ವೃತ್ತಿಜೀವನದಲ್ಲಿ ಬೆಳೆಯಲು ಇದಕ್ಕಿಂತ ದೊಡ್ಡ ಅವಕಾಶ ಮತ್ತೊಂದಿಲ್ಲ ಎನ್ನಬಹುದು. ದ್ರಾವಿಡ್ ಅವರು ರಾಜಸ್ಥಾನ ರಾಯಲ್ಸ್ ತಂಡದ ಮುಖ್ಯ ಕೋಚ್ ಆಗಿದ್ದಾರೆ.
ತಾಜಾ ಸಂಗತಿ ಏನೆಂದರೆ, ವೈಭವ್ ಸೂರ್ಯವಂಶಿ ಅವರು ಭಾರತದ ಸ್ಟಾರ್ ಕ್ರಿಕೆಟಿಗರನ್ನು ಬಿಟ್ಟು ತನ್ನ ರೋಲ್ ಮಾಡೆಲ್ ಆಗಿ ಖ್ಯಾತ ವಿದೇಶಿ ಆಟಗಾರನ ಹೆಸರನ್ನು ಹೇಳಿದ್ದಾರೆ. ಆ ವಿದೇಶಿ ಆಟಗಾರ ಯಾರು ಎಂಬುದನ್ನು ನಾವೀಗ ತಿಳಿಯೋಣ.
ವೆಸ್ಟ್ ಇಂಡೀಸ್ ಕ್ರಿಕೆಟ್ ದಂತಕಥೆ ಬ್ರಿಯಾನ್ ಲಾರಾ ಅವರು ತನ್ನ ಆರಾಧ್ಯ ದೈವ ಎಂದು ವೈಭವ್ ಸೂರ್ಯವಂಶಿ ಬಹಿರಂಗಪಡಿಸಿದ್ದಾರೆ. ಪ್ರಸ್ತುತ, ಸೂರ್ಯವಂಶಿ ದುಬೈನ ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್-19 ಪಂದ್ಯವನ್ನು ಆಡುತ್ತಿದ್ದಾರೆ. ಪಂದ್ಯಕ್ಕೂ ಮುನ್ನ ಸೋನಿ ಸ್ಪೋರ್ಟ್ಸ್ ಜೊತೆ ಸೂರ್ಯವಂಶಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ನಿಮ್ಮ ಹೆಸರು ಕೆಟ್ಟದಾಗಿ ಪ್ರಚಾರ ಪಡೆದುಕೊಳ್ಳುತ್ತಿದೆ ಎಂದು ಕಾಮೆಂಟೇಟರ್ ಒಬ್ಬರು ಕೇಳಿದರು. ಇದಕ್ಕೆ ಉತ್ತರಿಸಿದ ಸೂರ್ಯವಂಶಿ, ಸದ್ಯ ನಾನು ನನ್ನ ಆಟದ ಮೇಲೆ ಮಾತ್ರ ಕೇಂದ್ರೀಕರಿಸುತ್ತಿದ್ದೇನೆ. ನನ್ನ ವಿರುದ್ಧ ವಿಶೇಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ದುರುದ್ದೇಶಪೂರಿತ ಪ್ರಚಾರಗಳಿಂದ ನಾನು ತಲೆಕೆಡಿಸಿಕೊಂಡಿಲ್ಲ. ನಾನು ಏಷ್ಯಾ ಕಪ್ ಮೇಲೆ ಗಮನ ಕೇಂದ್ರೀಕರಿಸಲು ಬಯಸುತ್ತೇನೆ ಎಂದರು.
ಸೂರ್ಯವಂಶಿ ವಯಸ್ಸನ್ನು ಮರೆಮಾಚಿ, ಸುಳ್ಳು ಹೇಳಿದ್ದಾರೆ ಎಂಬ ಆರೋಪ ಇತ್ತೀಚೆಗಷ್ಟೇ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸೂರ್ಯವಂಶಿ ಪ್ರತಿಕ್ರಿಯಿಸಿದ್ದಾರೆ. ಅಂದಹಾಗೆ ಬಿಹಾರ ಮೂಲದ ಸೂರ್ಯವಂಶಿ, ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಆಸ್ಟ್ರೇಲಿಯಾ U-19 ವಿರುದ್ಧದ ಟೆಸ್ಟ್‌ನಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಆಗಿದ್ದಾರೆ. ಆ ಪಂದ್ಯದಲ್ಲಿ ಸೂರ್ಯವಂಶಿ 62 ಎಸೆತಗಳಲ್ಲಿ 104 ರನ್ ಗಳಿಸಿದ್ದರು. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ತ್ರಿಶತಕ ಬಾರಿಸಿದ ಸಾಧನೆಯನ್ನೂ ಮಾಡಿದ್ದಾರೆ. (ಏಜೆನ್ಸೀಸ್)