ಐಪಿಎಲ್​ ಪದಾರ್ಪಣೆ ಪಂದ್ಯದಲ್ಲೇ ಅದ್ಭುತ ಆಟ: ದೈತ್ಯನಂತೆ ಸ್ಫೋಟಿಸಿ, ಕೊನೆಯಲ್ಲಿ ಮಗುವಾಗಿ ಬದಲಾದ ವೈಭವ್​! Vaibhav Suryavanshi

Vaibhav Suryavanshi
Published on

Vaibhav Suryavanshi : ವೈಭವ್ ಸೂರ್ಯವಂಶಿ ಇನ್ನೂ ಹುಡುಗ. ಆತನಿಗೆ ಕೇವಲ 14 ವರ್ಷ ವಯಸ್ಸಷ್ಟೇ. ಆದರೆ, ಆತ ಬ್ಯಾಟಿಂಗ್ ಮಾಡಿದ ರೀತಿಯಂತೂ ಅದ್ಭುತವಾಗಿತ್ತು. ಹೌದು ಪ್ರಸ್ತುತ ನಡೆಯುತ್ತಿರುವ ಐಪಿಎಲ್‌ನಲ್ಲಿ ಪದಾರ್ಪಣೆ ಪಂದ್ಯದಲ್ಲೇ ವೈಭವ್ ಸೂರ್ಯವಂಶಿ ಮಿಂಚಿನಂತೆ ಆಡಿದನು.

ಲಖನೌ ಸೂಪರ್ ಜೈಂಟ್ಸ್ (LSG) ವಿರುದ್ಧದ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ, ಇತಿಹಾಸ ಸೃಷ್ಟಿಸಿದರು. ತಾನು ಎದುರಿಸಿದ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದರು. ಶಾರ್ದೂಲ್ ಠಾಕೂರ್ ಎಸೆದ ಚೆಂಡನ್ನು ಕವರ್‌ ಮೇಲೆ ತಿರುಗಿಸಿ ಅದ್ಭುತ ಸಿಕ್ಸರ್‌ ಅಬ್ಬರಿಸಿದರು. ಇದರೊಂದಿಗೆ, ವೈಭವ್ ತನ್ನ ಮೊದಲ ಪಂದ್ಯದಲ್ಲಿ ಸಿಕ್ಸರ್‌ನೊಂದಿಗೆ ಇನ್ನಿಂಗ್ಸ್ ಪ್ರಾರಂಭಿಸಿದ ಅತ್ಯಂತ ಕಿರಿಯ ಆಟಗಾರನಾದನು. ರಾಜಸ್ಥಾನ ರಾಯಲ್ಸ್ ತಂಡವು ಈ 14 ವರ್ಷದ ಹುಡುಗನನ್ನು ಹರಾಜಿನಲ್ಲಿ 1.10 ಕೋಟಿ ರೂ.ಗೆ ಖರೀದಿಸಿತು.

ವೈಭವ್ ಕೇವಲ 14 ವರ್ಷ ವಯಸ್ಸಿನವನು. ಆದರೆ ಅವನು ಆಡುವ ರೀತಿ ಅದ್ಭುತ ಎಂದು ಹೇಳಲಾಗುತ್ತದೆ. ವೈಭವ್ ಒಬ್ಬ ಅನುಭವಿ ಬ್ಯಾಟ್ಸ್‌ಮನ್‌ನಂತೆ ಆಡುವ ರೀತಿ ಆಶ್ಚರ್ಯಕರವಾಗಿದೆ. ಎಲ್ಲರೂ ಅವನ ಬ್ಯಾಟಿಂಗ್‌ಗೆ ಮಾರುಹೋಗಿದ್ದಾರೆ. ಅನುಭವಿ ಮತ್ತು ಅಸಾಧಾರಣ ಬೌಲರ್‌ಗಳನ್ನು ಹಲವು ಬಾರಿ ಎದುರಿಸಿದ ರೀತಿಯಲ್ಲೇ ಈ 14 ವರ್ಷದ ಹುಡುಗ ತುಂಬಾ ಆತ್ಮವಿಶ್ವಾಸದಿಂದ ಆಡಿದನು. ಅವನ ಹೊಡೆತಗಳು ಎಲ್ಲರನ್ನೂ ಬೆರಗುಗೊಳಿಸಿದವು.

ಆರಂಭಿಕ ಇನ್ನಿಂಗ್ಸ್‌ನಲ್ಲಿ ದೈತ್ಯನಂತೆ ಆಡಿದ ವೈಭವ್, ಕೊನೆಯಲ್ಲಿ ಮಗುವಾಗಿ ಬದಲಾದರು. ಅವರು ಔಟಾದಾಗ ಮಗುವಾಗಿ ಬದಲಾದರು. ವೈಭವ್ ಮೈದಾನದಿಂದ ಹೊರಡುವಾಗ ಕಣ್ಣೀರು ಹಾಕುತ್ತಿದ್ದರು. ವೈಭವ್ ಸ್ವಲ್ಪ ಹೊತ್ತು ಕ್ರೀಸ್‌ನಲ್ಲಿಯೇ ಇದ್ದು ತಮ್ಮ ತಂಡಕ್ಕೆ ಹೆಚ್ಚಿನ ಕೊಡುಗೆ ನೀಡಬೇಕೆಂದು ಭಾವಿಸಿದ್ದರು. ದುರಾದೃಷ್ಟವಶಾತ್ ಸ್ಟಂಪ್​ ಔಟ್​ ಆದರು. ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಲು ಉತ್ತಮ ಅವಕಾಶವನ್ನು ಕಳೆದುಕೊಂಡಿದ್ದಕ್ಕೆ ತುಂಬಾ ದುಃಖಿತರಾಗಿದರು. ಮಕ್ಕಳು ಪಂದ್ಯ ಆಡುವಾಗ ಔಟಾದಾಗ ಅಳುವಂತೆಯೇ, ವೈಭವ್ ಸೂರ್ಯವಂಶಿ ಕೂಡ ಅಳುತ್ತಾ ಹೊರಟರು.

ಈ ಪಂದ್ಯದಲ್ಲಿ ವೈಭವ್ 20 ಎಸೆತಗಳಲ್ಲಿ 34 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 3 ಸಿಕ್ಸರ್‌ಗಳು ಮತ್ತು 2 ಬೌಂಡರಿಗಳು ಸೇರಿದ್ದವು. ಆರಂಭಿಕ ಇನ್ನಿಂಗ್ಸ್‌ನಲ್ಲಿ ಚಾಂಪಿಯನ್‌ನಂತೆ ಆಡಿದ ಈ 14 ವರ್ಷದ ಬಾಲಕ ಔಟಾದಾಗ ಭಾವುಕನಾದ. ಲಖನೌ ಬೌಲರ್ ಮಾರ್ಕ್ರಾಮ್ ಬೌಲಿಂಗ್​ನಲ್ಲಿ ಔಟಾಗಿ, ಡಗೌಟ್‌ಗೆ ಹೋಗುವಾಗ ಕಣ್ಣೀರು ಹಾಕಿದರು.

ಅಂದಹಾಗೆ ಸಂಜು ಸ್ಯಾಮ್ಸನ್ ಆರ್‌ಆರ್‌ನಿಂದ ಹೊರಗುಳಿದಿದ್ದರು ಮತ್ತು ಅವರ ಸ್ಥಾನದಲ್ಲಿ 14 ವರ್ಷದ ವೈಭವ್ ಸೂರ್ಯವಂಶಿ ಪದಾರ್ಪಣೆ ಮಾಡಿದರು. ವೈಭವ್ ಐಪಿಎಲ್‌ನಲ್ಲಿ ಆಡಿದ ಅತ್ಯಂತ ಕಿರಿಯ ಆಟಗಾರ ಎಂಬ ಇತಿಹಾಸವನ್ನು ಸೃಷ್ಟಿಸಿದರು.

ಪಂದ್ಯದ ವಿಚಾರಕ್ಕೆ ಬಂದರೆ, ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಲಖನೌ 54 ರನ್‌ಗಳಿಗೆ ಅಗ್ರ ಮೂವರು ಬ್ಯಾಟರ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆಗ ಜತೆಗೂಡಿದ ಮಾರ್ಕ್ರಮ್ ಹಾಗೂ ಬಡೋನಿ ಸಮಯೋಚಿತ ಆಟದ ಬಲದಿಂದ 5 ವಿಕೆಟ್‌ಗೆ 180 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು. ಪ್ರತಿಯಾಗಿ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ (74 ರನ್, 52 ಎಸೆತ, 5 ಬೌಂಡರಿ, 4 ಸಿಕ್ಸರ್) ಜೈಸ್ವಾಲ್ ಹಾಗೂ 14 ವರ್ಷದ ವೈಭವ್ ಒದಗಿಸಿದ ಭರ್ಜರಿ ಆರಂಭದ ನಡುವೆಯೂ ರಾಜಸ್ಥಾನ ತಂಡ 5 ವಿಕೆಟ್‌ಗೆ 178 ರನ್‌ಗಳಿಸಲಷ್ಟೇ ಶಕ್ತಗೊಂಡಿತು. ಇದರೊಂದಿಗೆ ಸತತ 2ನೇ ಪಂದ್ಯದಲ್ಲಿ ಅಂತಿಮ ಓವರ್‌ನಲ್ಲಿ 9 ರನ್‌ಗಳಿಸಲಾಗದೆ ಗೆಲುವಿನ ಸನಿಹದಲ್ಲಿ ಮುಗ್ಗರಿಸಿತು.

ಸವಾಲಿನ ಮೊತ್ತದ ಚೇಸಿಂಗ್‌ಗೆ ಇಳಿದ ರಾಜಸ್ಥಾನಕ್ಕೆ ಜೈಸ್ವಾಲ್ ಹಾಗೂ ವೈಭವ್ ಹಾಲಿ ಸೀಸನ್‌ನಲ್ಲಿ ಕನಸಿನ ಆರಂಭ ಒದಗಿಸಿದರು. ಜೈಸ್ವಾಲ್ ಬಿರುಸಿನಾಟಕ್ಕೆ ಸಮರ್ಥ ಬೆಂಬಲ ಒದಗಿಸಿದ ವೈಭವ್ ಸಿಕ್ಕ ಅವಕಾಶವನ್ನು . ಜೈಸ್ವಾಲ್-ವೈಭವ್ ಜೋಡಿ ಮೊದಲ ವಿಕೆಟ್‌ಗೆ 52 ಎಸೆತಗಳಲ್ಲಿ 85 ರನ್‌ಗಳಿಸಿ ಪಂದ್ಯದ ಗತಿ ಬದಲಾಯಿಸಿದರು. ಜೈಸ್ವಾಲ್ 31 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ವೈಭವ್ ನಿರ್ಗಮನದ ಬಳಿಕ ನಿತೀಶ್ ರಾಣಾ (8) ನಿರಾಸೆ ಮೂಡಿಸಿದರು. ಅರ್ಧಶತಕ ಬಳಿಕ ಮತ್ತಷ್ಟು ಬಿರುಸಿನಾಟಕ್ಕಿಳಿದ ಜೈಸ್ವಾಲ್ ಚೇಸಿಂಗ್ ಸುಲಭಗೊಳಿಸಿದರು. ಜೈಸ್ವಾಲ್- ರಿಯಾನ್ ಪರಾಗ್ (39) ಮೂರನೇ ವಿಕೆಟ್‌ಗೆ 43 ಎಸೆತಗಳಲ್ಲಿ 62 ರನ್ ಸೇರಿಸಿ ಬಲ ತುಂಬಿದರು. 18ನೇ ಓವರ್‌ನಲ್ಲಿ ಇವರಿಬ್ಬರ ವಿಕೆಟ್ ಪಡೆದ ಆವೇಶ್ ಪಂದ್ಯ ತಿರುಗಿಸಿದರು. ಆವೇಶ್ ಖಾನ್ ಎಸೆದ ಅಂತಿಮ ಓವರ್‌ನಲ್ಲಿ 9 ರನ್ ಬೇಕಿದ್ದಾಗ (1,2,ವಿಕೆಟ್,0, 2,1) 3ನೇ ಎಸೆತದಲ್ಲಿ ಶಿಮ್ರೊನ್ ಹೆಟ್ಮೆಯರ್ (12) ಔಟಾದರು. ನಂತರ ಶುಭಂ ದುಬೆ (3*) ಹಾಗೂ ಧ್ರುವ ಜುರೆಲ್ (6*) ದಡ ಸೇರಿಸುವಲ್ಲಿ ಎಡವಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net