ಫೋನ್​ ಸ್ವಿಚ್​ ಆನ್​ ಮಾಡುತ್ತಿದ್ದಂತೆ 500 ಮಿಸ್ಡ್​ ಕಾಲ್: ದ್ರಾವಿಡ್​ ಎಚ್ಚರಿಕೆ ನೆನೆದ ವೈಭವ್​! Vaibhav Suryavanshi

Vaibhav Suryavanshi
Published on

Vaibhav Suryavanshi : ಪ್ರಸ್ತುತ ಅಂತಿಮ ಹಂತಕ್ಕೆ ಬಂದಿರುವ 18ನೇ ಆವೃತ್ತಿಯ ಐಪಿಎಲ್ ಸೀಸನ್​ನಿಂದ ರಾಜಸ್ಥಾನ ರಾಯಲ್ಸ್ ತಂಡ ಹೊರಬಿದ್ದಿರಬಹುದು ಆದರೆ, ಒಬ್ಬ ಹುಡುಗನ ಆಗಮನವು ಮಾತ್ರ ಫ್ರಾಂಚೈಸಿಯನ್ನು ಅನನ್ಯವಾಗಿಸಿದೆ!

ಹೌದು, 14 ವರ್ಷದ ವೈಭವ್ ಸೂರ್ಯವಂಶಿ 18 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಶತಕ ಬಾರಿಸಿದ ಅತ್ಯಂತ ವೇಗದ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಟೀಮ್ ಇಂಡಿಯಾದ ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಪ್ರಸ್ತುತ ರಾಜಸ್ಥಾನಕ್ಕೆ ತರಬೇತಿ ನೀಡುತ್ತಿದ್ದಾರೆ. ದ್ರಾವಿಡ್ ಅವರ ದೃಢ ಸಲಹೆ ಮತ್ತು ಎಚ್ಚರಿಕೆಗಳು ವೈಭವ್ ಮೇಲೆ ಸಕಾರಾತ್ಮಕ ಪರಿಣಾಮ ಬೀರಿವೆ, ವಿಶೇಷವಾಗಿ ದ್ರಾವಿಡ್​ ಅವರು ವೈಭವ್​ನನ್ನು ಸಾಣೆ ಹಿಡಿದಿದ್ದಾರೆ.

ಬ್ಯಾಟಿಂಗ್ ಮೇಲೆ ಗಮನಹರಿಸಲು ಮತ್ತು ಎಲ್ಲ ಸಮಯದಲ್ಲೂ ಲಭ್ಯವಿರುವಂತೆ ದ್ರಾವಿಡ್​ ಅವರು ನೀಡಿದ ಎಚ್ಚರಿಕೆ ಆಟದ ಮೇಲೆ ಗಮನ ಹರಿಸುವಂತೆ ಮಾಡಿತು ಎಂದು ವೈಭವ್ ಸ್ವತಃ ಹೇಳಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ 35 ಎಸೆತಗಳಲ್ಲಿ ಶತಕ ಗಳಿಸಿದಾಗ, ಅವರ ಫೋನ್‌ಗೆ 500ಕ್ಕೂ ಹೆಚ್ಚು ಮಿಸ್ಡ್ ಕಾಲ್‌ಗಳು ಬಂದವು ಎಂದು ವೈಭವ್​ ಇದೇ ಸಂದರ್ಭದಲ್ಲಿ ಹೇಳಿದರು. ಆದರೆ, ಆಟದ ಮೇಲೆ ಗಮನಹರಿಸಲು ದ್ರಾವಿಡ್ ತಮ್ಮ ಫೋನ್ ಅನ್ನು ಸ್ವಿಚ್ ಆಫ್ ಮಾಡಲು ಸೂಚಿಸಿದರು ಆದರೆ, ಶತಕದ ನಂತರ, ಎಲ್ಲ ಕರೆಗಳು ತನ್ನನ್ನು ಹೊಗಳಲು ಬಂದವು ಎಂದು ವೈಭವ್ ಹೇಳಿದರು.

ಕಳೆದ ಮೂರ್ನಾಲ್ಕು ತಿಂಗಳುಗಳಿಂದ ನಾನು ಪಡುತ್ತಿರುವ ಕಠಿಣ ಪರಿಶ್ರಮಕ್ಕೆ ಫಲ ಸಿಕ್ಕಿದೆ. ಅಭ್ಯಾಸದಲ್ಲಿ ನನ್ನ ದೌರ್ಬಲ್ಯಗಳನ್ನು ನಿವಾರಿಸಿಕೊಂಡಿರುವುದರಿಂದ ಪಂದ್ಯಗಳಲ್ಲಿ ಆಡುವುದು ಸುಲಭವಾಗಿದೆ. ವಿಶೇಷವಾಗಿ ಪರಿಸ್ಥಿತಿಗಳಿಗೆ ಅನುಗುಣವಾಗಿ ಹೇಗೆ ಆಡಬೇಕೆಂದು ನಾನು ಕಲಿತಿದ್ದೇನೆ. ತಂಡ ಗೆಲ್ಲಲು ಅಗತ್ಯವಾದ ಬ್ಯಾಟಿಂಗ್ ಶೈಲಿಯನ್ನು ನಾನು ಅಳವಡಿಸಿಕೊಂಡಿದ್ದೇನೆ. ನನ್ನ ಸಾಮರ್ಥ್ಯಗಳು ನನಗೆ ತಿಳಿದಿವೆ. ತಂಡಕ್ಕೆ ಏನು ಬೇಕು ಮತ್ತು ಆ ಸಮಯದಲ್ಲಿ ಪರಿಸ್ಥಿತಿಗಳು ಏನೆಂದು ನನಗೆ ತಿಳಿದಿದೆ. ಹೀಗಾಗಿ ನಾವು ಇದಿಷ್ಟನ್ನು ಮನಸ್ಸಿನಲ್ಲಿಟ್ಟುಕೊಂಡು ಉತ್ತಮ ಸಾಧನೆ ಮಾಡಬೇಕು ಎಂದು ರಾಜಸ್ಥಾನ ರಾಯಲ್ಸ್ ತಂಡದ ಮುಖ್ಯ ಕೋಚ್ ದ್ರಾವಿಡ್ ಅವರೊಂದಿಗಿನ ವಿಡಿಯೋದಲ್ಲಿ ವೈಭವ್ ಹೇಳಿದರು.

ಈ ವಿಡಿಯೋವನ್ನು ಐಪಿಎಲ್ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ಸಂದರ್ಭದಲ್ಲಿ ದ್ರಾವಿಡ್ ಹದಿಹರೆಯದ ಆಟಗಾರನನ್ನು ಅಭಿನಂದಿಸಿದರು ಮತ್ತು ನಿಜವಾದ ಸವಾಲುಗಳು ಮುಂದಿವೆ ಎಂದು ನೆನಪಿಸಿದರು. ಈ ಸೀಸನ್​ನಲ್ಲಿ 7 ಪಂದ್ಯಗಳನ್ನು ಆಡಿದ ಸೂರ್ಯವಂಶಿ 252 ರನ್ ಗಳಿಸಿದರು. ಅವರು 206.56 ಸ್ಟ್ರೈಕ್ ರೇಟ್‌ನೊಂದಿಗೆ ಸರಾಸರಿ 36 ರನ್ ಗಳಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net