

ಹುಬ್ಬಳ್ಳಿ : ಉತ್ತರಾಖಂಡದ ಕಾಶಿಪುರದಲ್ಲಿ ಜು. 4 ರಿಂದ 7 ರವರೆಗೆ ಆಯೋಜಿಸಿದ್ದ 19ನೇ ಅಖಿಲ ಭಾರತ ರೈಲ್ವೆ ಪವರ್ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ನೈಋತ್ಯ ರೈಲ್ವೆ ವಲಯ ತಂಡ ಚಾಂಪಿಯನ್ಶಿಪ್ ಪಡೆದುಕೊಂಡಿದೆ.
ಪವರ್ಲಿಫ್ಟಿಂಗ್ ಚಾಂಪಿಯನ್ ಆಗಿರುವ ತಂಡದ ಸದಸ್ಯರನ್ನು ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ ಅವರು ಬುಧವಾರದಂದು ಹುಬ್ಬಳ್ಳಿಯ ಪ್ರಧಾನ ಕಚೇರಿಯಲ್ಲಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ, ತಂಡದ ಸದಸ್ಯರ ಪರಿಶ್ರಮದಿಂದ ಇಂತಹ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಶ್ಲಾಘಿಸಿದರು.
ನೈಋತ್ಯ ರೈಲ್ವೆಯ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಯು. ಸುಬ್ಬರಾವ್, ಉಪ ಹಣಕಾಸು ಸಲಹೆಗಾರ ಹಾಗೂ ನೈಋತ್ಯ ರೈಲ್ವೆ ಸ್ಪೋರ್ಟ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಅಜಯ ಜೈನ್ ಹಾಗೂ ಇತರರು ಹಾಜರಿದ್ದರು.