PHOTOS| ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಟ್ ಪುತ್ರಿಯ ಮೊದಲ ಚಿತ್ರ, ಹೆಸರು ಪ್ರಕಟ

bolt
Published on

ಬೆಂಗಳೂರು: ವಿಶ್ವ ಅತಿ ವೇಗದ ಓಟಗಾರರೆನಿಸಿರುವ ಜಮೈಕಾದ ಸ್ಪ್ರಿಂಟ್ ದಿಗ್ಗಜ ಉಸೇನ್ ಬೋಲ್ಟ್ 2 ತಿಂಗಳ ಹಿಂದೆಯಷ್ಟೇ ಅಪ್ಪನಾಗಿದ್ದರು. ಅವರ ಗೆಳತಿ ಕಸಿ ಬೆನ್ನೆಟ್​ ಹೆಣ್ಣು ಮಗುವಿಗೆ ಜನ್ಮನೀಡಿದ್ದರು. ಇದೀಗ ಬೋಲ್ಟ್ ಮುದ್ದಾದ ಮಗಳ ಮೊದಲ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ ಮತ್ತು ಮಗುವಿನ ಹೆಸರನ್ನೂ ಪ್ರಕಟಿಸಿದ್ದಾರೆ.

33 ವರ್ಷದ ಉಸೇನ್ ಬೋಲ್ಟ್ ಗೆಳತಿ ಕಸಿ ಬೆನ್ನೆಟ್ ಗರ್ಭಿಣಿಯಾಗಿರುವ ಸುದ್ದಿಯನ್ನು ವರ್ಷದ ಆರಂಭದಲ್ಲೇ ಬಹಿರಂಗಪಡಿಸಿದ್ದರು. ಕಳೆದ ಮೇ 14ರಂದು ಕಸಿ ಹೆಣ್ಣು ಮಗುವಿಗೆ ಜನ್ಮನೀಡಿರುವ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೀಗ ಮಗುವಿಗೆ 'ಒಲಿಂಪಿಯಾ ಲೈಟ್ನಿಂಗ್ ಬೋಲ್ಟ್' ಎಂದು ನಾಮಕರಣ ಮಾಡಿದ್ದಾರೆ. 11 ಒಲಿಂಪಿಕ್ಸ್ ಸ್ವರ್ಣ ಪದಕಗಳ ಒಡೆಯ ಬೋಲ್ಟ್, 2008, 2012 ಮತ್ತು 2016ರ ಒಲಿಂಪಿಕ್ಸ್​ನಲ್ಲಿ 100, 200 ಮೀಟರ್ ಓಟದಲ್ಲಿ ಪ್ರಾಬಲ್ಯ ಸಾಧಿಸಿದ್ದರು. 2017ರಲ್ಲಿ ಅವರು ನಿವೃತ್ತಿ ಹೊಂದಿದ್ದರು. 100 ಮೀಟರ್ ಓಟವನ್ನು 9.58 ಸೆಕೆಂಡ್​ಗಳಲ್ಲಿ ಓಡಿದ ವಿಶ್ವದಾಖಲೆ ಈಗಲೂ ಅವರ ಹೆಸರಿನಲ್ಲಿದೆ.

ಬೋಲ್ಟ್ ಸಂಗಾತಿ ಕಸಿ ಬೆನ್ನೆಟ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಮಂಗಳವಾರ ಮಗುವಿನ ಜತೆಗೆ ನಡೆಸಿರುವ ವಿಶೇಷ ಫೋಟೋಶೂಟ್​ನ ಚಿತ್ರಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. 'ನನ್ನ ಗರ್ಲ್​ಫ್ರೆಂಡ್​ ಕಸಿ ಬೆನ್ನೆಟ್​ ಜನ್ಮದಿನದ ಶುಭಾಶಯಗಳು. ನಾನು ನಿನ್ನ ವಿಶೇಷ ದಿನವನ್ನು ನಿನ್ನೊಂದಿಗೆ ಕಳೆಯುವ ಅವಕಾಶ ಪಡೆದಿದ್ದೆನೆ. ನಾನೇನನ್ನೂ ಬಯಸುವುದಿಲ್ಲ. ಆದರೆ ನಿನ್ನ ಸಂತೋಷವನ್ನು ಬಯಸುತ್ತೇನೆ ಮತ್ತು ನಿನ್ನ ಮುಖದಲ್ಲಿ ನಗು ಉಳಿಸಿಕೊಳ್ಳಲು ನನ್ನ ಶ್ರೇಷ್ಠ ಪ್ರಯತ್ನ ನಡೆಸುವುದನ್ನು ಮುಂದುವರಿಸುತ್ತೇನೆ. ನಾವಿಬ್ಬರೂ ಪುತ್ರಿ ಒಲಿಂಪಿಯಾ ಲೈಟ್ನಿಂಗ್ ಬೋಲ್ಟ್ ಅವಳೊಂದಿಗೆ ಹೊಸ ಅಧ್ಯಾಯವನ್ನು ಜತೆಯಾಗಿ ಆರಂಭಿಸಿದ್ದೇವೆ' ಎಂದು ಬೋಲ್ಟ್ ಬರೆದುಕೊಂಡಿದ್ದಾರೆ. ಆಕಾಶಕ್ಕೆ ಬೆರಳು ತೋರಿಸಿ ನಿಲ್ಲುವ ಬೋಲ್ಟ್ ಅವರ ವಿಶೇಷ ಶೈಲಿಗೆ 'ಲೈಟ್ನಿಂಗ್ ಬೋಲ್ಟ್' ಎಂಬ ಹೆಸರಿದೆ. ಅವರು ಅದನ್ನೇ ಮಗಳಿಗೂ ಇಟ್ಟಿರುವುದು ವಿಶೇಷವಾಗಿದೆ.

ಕ್ರೀಡಾಲೋಕದಲ್ಲಿ ಇಬ್ಬರು ಒಲಿಂಪಿಯಾ!

ಕ್ರೀಡಾಲೋಕದಲ್ಲಿ ಈಗ ಇಬ್ಬರು ಕ್ರೀಡಾದಿಗ್ಗಜರಿಗೆ ಒಲಿಂಪಿಯಾ ಹೆಸರಿನ ಪುತ್ರಿ ಇರುವಂತಾಗಿದೆ. ಅಮೆರಿಕದ ಟೆನಿಸ್ ತಾರೆ ಸೆರೇನಾ ವಿಲಿಯಮ್ಸ್ ಅವರ ಪುತ್ರಿಯ ಹೆಸರು ಅಲೆಕ್ಸಿಸ್ ಒಲಿಂಪಿಯಾ. ಸೆರೇನಾ ಕೂಡ ಒಲಿಂಪಿಕ್ಸ್ನಲ್ಲಿ 4 ಸ್ವರ್ಣ ಪದಕ ಜಯಿಸಿದ ಸಾಧನೆ ಮಾಡಿದ್ದಾರೆ.  2 ವರ್ಷದ ಒಲಿಂಪಿಯಾ ಈಗಾಗಲೆ ಅಮ್ಮನ ಜತೆಗೆ ಕೋರ್ಟ್ಗೆ ಇಳಿದು ಅಭ್ಯಾಸವನ್ನೂ ನಡೆಸುತ್ತಿದ್ದರೆ, ಇತ್ತ ಉಸೇನ್ ಬೋಲ್ಟ್ ಕೂಡ ಪುತ್ರಿಗೆ ಒಲಿಂಪಿಯಾ ಎಂದು ಹೆಸರಿಟ್ಟಿರುವುದು ಕಾಕತಾಳೀಯವೆನಿಸಿದೆ. ಮುಂದೆ ಕ್ರೀಡಾಲೋಕದಲ್ಲಿ ಇಬ್ಬರು ಒಲಿಂಪಿಯಾ ಸದ್ದು ಮಾಡುವ ನಿರೀಕ್ಷೆಯೂ ಹರಡಿದೆ. ಬೋಲ್ಟ್ ಕೂಡ ಪುತ್ರಿಗೆ ಒಲಿಂಪಿಯಾ ಎಂದು ಹೆಸರಿಟ್ಟಿರುವುದಕ್ಕೆ ಟ್ವಿಟರ್​ನಲ್ಲಿ ಪ್ರತಿಕ್ರಿಯಿಸಿರುವ 38 ವರ್ಷದ ಸೆರೇನಾ, 'ಲವ್' ಇಮೋಜಿಗಳನ್ನು ಟ್ವೀಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net