ಸ್ವಿಟೋಲಿನಾ, ವೆಕಿಕ್ ಶುಭಾರಂಭ: ಹೊರಬಿದ್ದ ಸಕ್ಕರಿ

New-Project-5-1
Published on

ನ್ಯೂಯಾರ್ಕ್: ಸೋಮವಾರ ಆರಂಭಗೊಂಡ ವರ್ಷದ 4ನೇ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿ ಯುಎಸ್ ಓಪನ್ ಮೊದಲ ದಿನವೇ ಗ್ರೀಸ್‌ನ ಮರಿಯಾ ಸಕ್ಕರಿ ಗಾಯಗೊಂಡು ಪಂದ್ಯದಿಂದ ನಿವೃತ್ತಿಗೊಂಡರು. ಮಹಿಳಾ ಸಿಂಗಲ್ಸ್‌ನ ಆರಂಭಿಕ ಸುತ್ತಿನಲ್ಲಿ 9ನೇ ಶ್ರೇಯಾಂಕಿತೆ ಸಕ್ಕರಿ, ಚೀನಾದ ಯಾನ್ ವಾಂಗ್ ಎದುರು ಮೊದಲ ಸೆಟ್‌ನಲ್ಲಿ 2-6 ರಿಂದ ಹಿನ್ನಡೆ ಅನುಭವಿಸಿದರು. ಆಗ ಭುಜ ಹಾಗೂ ಕುತ್ತಿ ಭಾಗದಲ್ಲಿ ಕಾಣಿಸಿಕೊಂಡ ನೋವಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ಪಡೆದರು. ಆದರೆ ಆಟ ಮುಂದುವರಿಸಲು ಸಾಧ್ಯವಾಗದೆ ಪಂದ್ಯದಿಂದ ಹಿಂದೆ ಸರಿದರು. ಇದರೊಂದಿಗೆ ಶ್ರೇಯಾಂಕ ರಹಿತೆ ವಾಂಗ್ ಸುಲಭವಾಗಿ ಮುಂದಿನ ಸುತ್ತಿಗೇರಿದರು.

12ನೇ ಶ್ರೇಯಾಂಕಿತೆ ಡೆರಿಯಾ ಕಸಟ್ಕಿನಾ 6-2,6-4 ನೇರಸೆಟ್‌ಗಳಿಂದ ರೊಮೇನಿಯಾದ ಜಾಕ್ವೆಲಿನ್ ಕ್ರಿಸ್ಟಿನಾ ಎದುರು ಶುಭಾರಂಭ ಕಂಡರು. ಒಲಿಂಪಿಕ್ಸ್ ಚಿನ್ನದ ಪದಕ ವಿಜೇತೆ ಝೆಂಗ್ ಕ್ವಿನ್ವೆನ್ 4-6, 6-4, 6-2 ಮೂರು ಸೆಟ್‌ಗಳ ಹೋರಾಟದಲ್ಲಿ ಗೆಲುವು ಒಲಿಸಿಕೊಂಡರೆ, ರಜತ ವಿಜೇತೆ, ಕ್ರೋವೆಷಿಯಾದ ಡೋನ್ನಾ ವೆಕಿಕ್ 6-4, 6-3 ರಿಂದ ಆಸ್ಟ್ರೇಲಿಯಾದ ಕಿಮ್‌ಬರ್ಲೆ ಬೆರ‌್ರೆಲ್ ವಿರುದ್ಧ ಜಯ ಸಾಧಿಸಿದರು. ಯೂಕ್ರೇನ್‌ನ ಎಲಿನಾ ಸ್ವಿಟೋಲಿನಾ 3-6,6-3, 6-4 ರಿಂದ ಅರ್ಜೆಂಟೀನಾದ ಮರಿಯಾ ಕಾರ್ಲ್ ಅವರನ್ನು 2 ಗಂಟೆ 20 ನಿಮಿಷಗಳ ಸೆಣಸಾಟದಲ್ಲಿ ಮಣಿಸಿದರು.

ಪುರುಷರ ಸಿಂಗಲ್ಸ್‌ನ ಆರಂಭಿಕ ಪಂದ್ಯದಲ್ಲಿ ಯುಗೋ ಹುಬರ್ಟ್ 6-3, 6-4,6-4 ರಿಂದ ಬ್ರೆಜಿಲ್‌ನ ಥಿಯಾಗೋ ಮಾಂಟೈರೊ ಎದುರು ಜಯದ ಆರಂಭ ಕಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net